ನೂಪುರ್ ಶರ್ಮಾ ವಿರುದ್ಧ ಟ್ವೀಟ್: ಅಖಿಲೇಶ್ ಯಾದವ್ ವಿರುದ್ಧ ಕ್ರಮಕ್ಕೆ ಮಹಿಳಾ ಆಯೋಗ ಸೂಚನೆ

Update: 2022-07-04 18:24 GMT

ಹೊಸದಿಲ್ಲಿ, ಜು. 4:  ಬಿಜೆಪಿಯಿಂದ ಅಮಾನತುಗೊಂಡಿರುವ ವಕ್ತಾರೆ ನೂಪುರ್ ಶರ್ಮಾ ಅವರ ವಿರುದ್ಧ ಪ್ರಚೋದನಕಾರಿ ಹಾಗೂ ಕೆಟ್ಟ ಭಾವನೆ ಮೂಡಿಸುವ ಟ್ವೀಟ್ ಮಾಡಿರುವ ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಸೋಮವಾರ ಉತ್ತರಪ್ರದೇಶ ಪೊಲೀಸರಿಗೆ ಸೂಚಿಸಿದೆ. 

‘‘ಮುಖ ಮಾತ್ರವಲ್ಲ, ಅವರ ದೇಹ ಕೂಡ ಕ್ಷಮೆ ಕೋರಬೇಕು. ಅಲ್ಲದೆ, ದೇಶದ ಸಾಮರಸ್ಯಕ್ಕೆ ಅಡ್ಡಿ ಉಂಟು ಮಾಡಿರುವುದಕ್ಕೆ ಅವರನ್ನು ಶಿಕ್ಷಿಸಬೇಕು’’ ಎಂದು ಯಾದವ್ ಅವರು ಟ್ವೀಟ್ ಮಾಡಿದ್ದರು. ಉತ್ತರಪ್ರದೇಶದ  ಡಿಜಿಪಿ ಡಿ.ಎಸ್. ಚೌಹಾನ್ ಅವರಿಗೆ ನೀಡಿದ ಪತ್ರದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, ಟ್ವೀಟ್ ‘ತೀವ್ರ ಪ್ರಚೋದನಕಾರಿ’ ಎಂದು ಹೇಳಿದ್ದಾರೆ.  

‘‘ನೂಪುರ್ ಶರ್ಮಾ ಅವರ ವಿರುದ್ಧ ದ್ವೇಷ ಪ್ರಚೋದಿಸುವ ಹಾಗೂ ಕೆಟ್ಟ ಭಾವನೆ ಮೂಡಿಸುವ ಅಖಿಲೇಶ್ ಯಾದವ್ ಅವರ ಟ್ವೀಟರ್ ಪೋಸ್ಟ್ ಅನ್ನು ರಾಷ್ಟ್ರೀಯ ಮಹಿಳಾ ಆಯೋಗ ಗಮನಿಸಿದೆ. ಎರಡು  ಧಾರ್ಮಿಕ ಸಮುದಾಯಗಳ ನಡುವೆ ಸಾಮರಸ್ಯ ಕೆಡಿಸುವುದು ಖಂಡನೀಯ’’ ಎಂದು ಶರ್ಮಾ ಹೇಳಿದ್ದಾರೆ. 

‘‘ಪ್ರಕರಣದ ಗಂಭೀರತೆ  ಪರಿಗಣಿಸಿ ನೀವು ಅಖಿಲೇಶ್ ವಿರುದ್ಧ ಕೂಡಲೇ ಕ್ರಮ ತೆಗೆದುಗಕೊಳ್ಳುವ ಅಗತ್ಯತೆ ಇದೆ’’ ಎಂದು ಶರ್ಮಾ   ಹೇಳಿದ್ದಾರೆ.  ‘‘ನೂಪುರ್ ಶರ್ಮಾ ಅವರು ಈಗಾಗಲೇ ಜೀವ ಬೆದರಿಕೆ ಎದುರಿಸುತ್ತಿದ್ದಾರೆ. ಅಖಿಲೇಶ್ ಅವರ ಟ್ವೀಟ್ ಶರ್ಮಾ ಅವರ ಮೇಲೆ ಹಲ್ಲೆ ನಡೆಸುವಂತೆ ಸಾರ್ವಜನಿಕರನ್ನು ಪ್ರಚೋದಿಸುತ್ತದೆ. ಆದುದರಿಂದ ನ್ಯಾಯಯುತ ತನಿಖೆಯನ್ನು ಸಮಯ ಮಿತಿಯಲ್ಲಿ ಪೂರ್ಣಗೊಳಿಸಬೇಕು’’ ಎಂದು ಶರ್ಮಾ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News