ರಂಗ ಚಂದಿರನಿಗೆ ಕೋಮು ಗ್ರಹಣ

Update: 2022-07-05 03:34 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಈ ಸಮಾಜದಲ್ಲಿ ಯಾರು ಏನನ್ನು ತಿನ್ನಬೇಕು, ಯಾವುದರ ಬಗ್ಗೆ ಮಾತಾಡಬೇಕು, ಯಾವ ಬಟ್ಟೆ ತೊಡಬೇಕು, ಹೇಗೆ ಬರೆಯಬೇಕು ಎಂದು ಆದೇಶ ನೀಡುತ್ತಾ ತಮ್ಮ ಮಾತು ಕೇಳದವರ ಮೇಲೆ ಹಲ್ಲೆಗೆ ಮುಂದಾಗುವ ಕೋಮುವಾದಿ ಪುಂಡರ ಕಣ್ಣು ಈಗ ರಂಗಭೂಮಿಯ ಮೇಲೆ ಬಿದ್ದಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿಯಲ್ಲಿ ರವಿವಾರ ಆಯೋಜಿಸಲಾಗಿದ್ದ ‘ಜತೆಗಿರುವನು ಚಂದಿರ’ ನಾಟಕ ಪ್ರದರ್ಶನಕ್ಕೆ ಆರೆಸ್ಸೆಸ್ ಹಾಗೂ ಬಜರಂಗದಳದ ಕಾರ್ಯಕರ್ತರು ತಡೆಯೊಡ್ಡಿದ್ದಾರೆ. ಇಂಗ್ಲಿಷ್‌ನ ಜೊಸೆಫ್ ಸ್ಟಿನ್ ಅವರ ‘ಫಿಡ್ಲರ್ ಆನ್ ದಿ ರೂಫ್’ ನಾಟಕವನ್ನು ಜಯಂತ ಕಾಯ್ಕಿಣಿ ಅವರು ಕನ್ನಡಕ್ಕೆ ರೂಪಾಂತರ ಮಾಡಿದ್ದಾರೆ. ಶಿವಮೊಗ್ಗದ ರಂಗ ಬೆಳಕು ತಂಡ ಇದನ್ನು ರಂಗಕ್ಕೆ ತಂದಿದೆ. ಈ ನಾಟಕದ ಪ್ರದರ್ಶನಕ್ಕೆ ಅಡ್ಡಿ ಉಂಟು ಮಾಡಲು ಇವರು ನೀಡಿದ ಕಾರಣ ಇದು ಮುಸ್ಲಿಮರೇ ಪ್ರಧಾನವಾಗಿರುವ ಕಥಾವಸ್ತುವಂತೆ. ಅದಕ್ಕಾಗಿ ನಾಟಕ ಆಡಿಸುವುದು ಬೇಡ ಎಂಬುದು ಇವರ ತಕರಾರು. ಅದಕ್ಕಾಗಿ ನಾಟಕ ಆರಂಭವಾದ ಮೇಲೆ ಬೆರಳೆಣಿಕೆಯಷ್ಟಿದ್ದ ಈ ಪುಂಡರು ಸಭಾಂಗಣಕ್ಕೆ ನುಗ್ಗಿ ಗಲಾಟೆ ಮಾಡಿ ಒಳಗಿದ್ದ ಪ್ರೇಕ್ಷಕರನ್ನು ಬಲವಂತವಾಗಿ ಹೊರಗೆ ಹಾಕಿದ್ದಾರೆ. ಇದೆಲ್ಲ ನಡೆಯುವಾಗ ಕಾನೂನು ಸುವ್ಯವಸ್ಥೆ ಪಾಲನೆ ಮಾಡಬೇಕಾದ ಪೊಲೀಸರು ಎಲ್ಲಿದ್ದರು ಎಂಬುದಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಉತ್ತರ ನೀಡಬೇಕು.

ವಾಸ್ತವವಾಗಿ ಕರ್ನಾಟಕದ ಅನೇಕ ಕಡೆ ಪ್ರದರ್ಶಿಸಲ್ಪಟ್ಟ ‘ಜತೆಗಿರುವನು ಚಂದಿರ’ ನಾಟಕದಲ್ಲಿ ಯಾವುದೇ ಪ್ರಚೋದನಾಕಾರಿ ಸನ್ನಿವೇಶವಾಗಲಿ, ಸಂಭಾಷಣೆಯಾಗಲಿ ಇಲ್ಲ. ಇದು ರಾಷ್ಟ್ರೀಯ ಭಾವೈಕ್ಯವನ್ನು ಎತ್ತಿ ಹಿಡಿಯುವ ನಾಟಕ. ಭಾರತದ ವಿಭಜನೆಯ ಕಾಲದ ಅಲ್ಪಸಂಖ್ಯಾತ ಕುಟುಂಬವೊಂದರ ತೊಳಲಾಟದ ಕತೆ. ಆದರೆ ಹಿಂದೂ-ಮುಸಲ್ಮಾನರ ನಡುವೆ ವೈಷಮ್ಯದ ವಿಷಬೀಜ ಬಿತ್ತಿ ಕೋಮು ದಳ್ಳುರಿಯಲ್ಲಿ ವೋಟಿನ ಬೆಳೆ ತೆಗೆಯಲು ಹೊರಟವರಿಗೆ ಜನಸಾಮಾನ್ಯರು ಸೌಹಾರ್ದದಿಂದ ಇರುವುದು ಬೇಕಾಗಿಲ್ಲ. ಮನಸ್ಸುಗಳನ್ನು ಕಟ್ಟುವ ಯಾವ ಮಾತು, ಕವನ, ನಾಟಕಗಳನ್ನು ವಿಭಜನಕಾರಿ ಶಕ್ತಿಗಳು ಇಷ್ಟಪಡುವುದಿಲ್ಲ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಸ್ಯೋತ್ಸವದ ಕಾರ್ಯಕ್ರಮದಲ್ಲೂ ಇವರು ನುಗ್ಗಿ ಗಲಾಟೆ ಮಾಡಿರುವ ಉದಾಹರಣೆಗಳಿವೆ. ಒಂದು ಕಾಲದಲ್ಲಿ ಸಮಾಜವಾದಿಗಳ ಭದ್ರಕೋಟೆ ಎಂದು ಹೆಸರಾಗಿದ್ದ ಶಿವಮೊಗ್ಗ ಜಿಲ್ಲೆ ಕೂಡ ಇನ್ನೊಂದು ಮಂಗಳೂರು ಆಗಲು ಹೊರಟಿರುವುದು ಇತ್ತೀಚಿನ ವಿದ್ಯಮಾನಗಳಿಂದ ಸ್ಪಷ್ಟವಾಗುತ್ತದೆ. ಕೆಲ ದಿನಗಳ ಹಿಂದೆ ಶಿವಮೊಗ್ಗದ ಮಾರಿಕಾಂಬಾ ಜಾತ್ರೆಯಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ದೇವಾಲಯದ ಬಳಿ ಮಳಿಗೆ ಹಾಕಲು ಅವಕಾಶ ನೀಡಿರಲಿಲ್ಲ. ಇಂತಹ ಘಟನೆಗಳು ಅಲ್ಲಿ ಮರುಕಳಿಸುತ್ತಲೇ ಇವೆ. ಮುಖ್ಯಮಂತ್ರಿಯವರ ‘‘ಕ್ರಿಯೆಗೆ ಪ್ರತಿಕ್ರಿಯೆ’’ ಎಂಬ ಹೇಳಿಕೆ ಬಂದ ನಂತರವಂತೂ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ.

ರಂಗಭೂಮಿಯಲ್ಲೂ ತಮ್ಮ ವಿಭಜನಕಾರಿ ನಾಟಕಗಳು ಪ್ರದರ್ಶನಗೊಳ್ಳ ಬೇಕೆಂದು ಸಂಘ ಪರಿವಾರದವರು ಬಯಸುತ್ತಿದ್ದಾರೆ. ಆದರೆ ಯಾವುದೇ ಸೃಜನಶೀಲ ಬರಹಗಾರ ಅಥವಾ ನಾಟಕಕಾರ ಜನಹಿಂಸಕ ಸಾಹಿತ್ಯ ಬರೆಯಲು ಇಷ್ಟಪಡುವುದಿಲ್ಲ. ಹಾಗೆ ಬರೆದರೆ ಆತ ಲೇಖಕ ಅಥವಾ ನಾಟಕಕಾರ ಎನಿಸಿಕೊಳ್ಳುವುದಿಲ್ಲ. ಹಾಗಾಗಿಯೇ ಕೋಮುವಾದಿಗಳ ಪರಿವಾರದಲ್ಲಿ ಸಾಹಿತಿ- ಕಲಾವಿದರ ಸಂಖ್ಯೆ ತುಂಬಾ ಕಡಿಮೆ. ಇನ್ನು ಕೆಲವರು ಸ್ವಾರ್ಥ ಸಾಧನೆಗಾಗಿ ಯಾವುದನ್ನೂ ಬರೆಯಲು ಹಾಗೂ ಮಾತಾಡಲೂ ಹಿಂಜರಿಯುವುದಿಲ್ಲ. ಅಂತಹ ವ್ಯಕ್ತಿಗಳನ್ನು ಹುಡುಕಿ ವಿವಿಧ ಅಕಾಡಮಿಗಳಿಗೆ ಬಿಜೆಪಿ ಸರಕಾರ ನೇಮಕ ಮಾಡಿದೆ ಎಂಬುದು ಬರೀ ಆರೋಪವಲ್ಲ. ಇದಕ್ಕೆ ಮೈಸೂರಿನ ರಂಗಾಯಣ ಒಂದು ಉದಾಹರಣೆಯಾಗಿದೆ. ಅಲ್ಲಿ ನೇಮಕಗೊಂಡ ವ್ಯಕ್ತಿ ಕೋಮು ಪ್ರಚೋದನಾಕಾರಿ ಭಾಷಣ ಮಾಡುವ ವ್ಯಕ್ತಿಗಳನ್ನು ರಂಗಾಯಣದ ಕಾರ್ಯಕ್ರಮಗಳಿಗೆ ಭಾಷಣಕ್ಕೆ ಕರೆಯಿಸಿ ರಂಗಾಯಣವನ್ನು ಸಂಘಾಯಣ ಮಾಡಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ವಿಭಿನ್ನ ವಿಚಾರಗಳ ಅಭಿವ್ಯಕ್ತಿಗೆ ಸಂವಿಧಾನ ಅವಕಾಶ ನೀಡಿದೆ. ಸಂವಿಧಾನದತ್ತವಾದ ಸ್ವಾತಂತ್ರ್ಯವನ್ನು ಅಪಹರಣ ಮಾಡುವ ವ್ಯಕ್ತಿ, ಶಕ್ತಿಗಳನ್ನು ಸರಕಾರ ವಿಶೇಷವಾಗಿ ಪೊಲೀಸ್ ಇಲಾಖೆ ನಿಯಂತ್ರಿಸಬೇಕಾಗುತ್ತದೆ.ಆದರೆ ಪೊಲೀಸ್ ಇಲಾಖೆಯನ್ನು ನೋಡಿಕೊಳ್ಳುವ ಮಂತ್ರಿಯೇ ಕೋಮು ಕಾಮಾಲೆಗೆ ಒಳಗಾದರೆ ಇನ್ಯಾರಿಂದಲೂ ಪರಿಸ್ಥಿತಿ ಸುಧಾರಿಸಲು ಸಾಧ್ಯವಿಲ್ಲ. ಬೆಂಗಳೂರಿನ ಒಂದು ಹತ್ಯೆಗೆ ಸಂಬಂಧಿಸಿದಂತೆ ಯಾವುದೇ ತನಿಖೆ ಇಲ್ಲದೆ ಹತ್ಯೆಗೆ ಇದೇ ಕಾರಣವೆಂದು ಗೃಹ ಮಂತ್ರಿ ಹೇಳಿದರು. ಆದರೆ ಆನಂತರ ರಾಜ್ಯ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟೀಕರಣ ನೀಡಿ ಕಾರಣ ಅದಲ್ಲ ಇನ್ನೂ ತನಿಖೆ ನಡೆದಿದೆ ಎಂದು ಹೇಳಬೇಕಾಯಿತು. ಇದು ಕರ್ನಾಟಕದ ಇಂದಿನ ಪರಿಸ್ಥಿತಿ.

ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆಗೆ ಕೋಮುವಾದದ ಗ್ರಹಣ ಹಿಡಿದಿದೆ. ಕೆಲ ದಿನಗಳ ಹಿಂದೆ ರೈತ ಹೋರಾಟದ ನಾಯಕ ರಾಕೇಶ್ ಟಿಕಾಯತ್ ಬೆಂಗಳೂರಿಗೆ ಬಂದಾಗ ಇದೇ ಕೋಮುವಾದಿ ಗೂಂಡಾಗಳು ಅವರ ಪತ್ರಿಕಾ ಗೋಷ್ಠಿಯಲ್ಲಿ ನುಗ್ಗಿ ಅವರ ಮೇಲೆ ಹಲ್ಲೆ ಮಾಡಿ ಮುಖಕ್ಕೆ ಮಸಿ ಬಳಿದರು.ಆಗಲೂ ಪೊಲೀಸರ ಪತ್ತೆ ಇರಲಿಲ್ಲ. ಹಿಜಾಬ್ ಹೆಸರಿನಲ್ಲಿ ರಾಜ್ಯದ ಅನೇಕ ಕಡೆ ಪುಂಡಾಟಿಕೆ ನಡೆದರೂ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು. ಮೇಲಿನವರ ಸೂಚನೆ ಇಲ್ಲದೆ ಪೊಲೀಸರು ಮೂಕ ಪ್ರೇಕ್ಷಕರಾಗಿರಲು ಸಾಧ್ಯವೇ?

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಭರವಸೆಯನ್ನು ಕಳೆದುಕೊಂಡ ಬಿಜೆಪಿಗೆ ಹೇಳಿಕೊಳ್ಳುವ ಯಾವ ಸಾಧನೆಗಳೂ ಇಲ್ಲ. ಅದಕ್ಕಾಗಿ ಅದು ಜನರನ್ನು ಕೋಮು ಆಧಾರದಲ್ಲಿ ವಿಭಜಿಸಿ ವೋಟುಗಳನ್ನು ಬಾಚಿಕೊಳ್ಳಲು ಹೊರಟಿದೆ. ಪ್ರತೀ ಊರಿನಲ್ಲಿ ಯಾವುದಾದರೊಂದು ನೆಪ ತೆಗೆದು ಕೋಮು ವೈಷಮ್ಯದ ಕಿಡಿ ಹೊತ್ತಿಸುತ್ತಿದೆ. ಆಳಂದದ ದರ್ಗಾ ವಿವಾದ, ಬಸವಕಲ್ಯಾಣದ ವಚನ ಮಂಟಪದ ವಿವಾದ, ಬಾಬಾಬುಡಾನ್‌ಗಿರಿ ವಿವಾದ, ಇದೀಗ ಬೆಂಗಳೂರಿನ ಈದ್ಗಾ ಮೈದಾನ ವಿವಾದಗಳನ್ನು ಬಂಡವಾಳ ಮಾಡಿಕೊಂಡು ಮತ್ತೆ ಅಧಿಕಾರಕ್ಕೆ ಬರಲು ಹೊರಟಿರುವ ಬಿಜೆಪಿ ಹಾಗೂ ಸಂಘ ಪರಿವಾರಕ್ಕೆ ಜನಸಾಮಾನ್ಯರ ನಡುವೆ ಶಾಂತಿ, ಸೌಹಾರ್ದ ಮತ್ತು ಭ್ರಾತೃತ್ವವನ್ನು ಮೂಡಿಸುವ ಕತೆ, ಕವನ, ನಾಟಕಗಳನ್ನು ಕಂಡರೆ ಆಗುವುದಿಲ್ಲ. ಅವುಗಳಿಗೆ ಪ್ರತಿಯಾಗಿ ನಾಟಕಗಳ ಮೂಲಕ ತಮ್ಮ ವಿಚಾರಗಳನ್ನು ಪ್ರತಿಪಾದಿಸುವ ಸಾಂಸ್ಕೃತಿಕ ಸಂಪನ್ಮೂಲವೂ ಸಂಘ ಪರಿವಾರಕ್ಕಿಲ್ಲ. ಅದಕ್ಕಾಗಿ ಸಂಘದ ಕಾರ್ಯಕರ್ತರು ಪುಂಡಾಟಿಕೆಗೆ ಇಳಿಯುತ್ತಾರೆ. ಇಂತಹ ಗೂಂಡಾಗಿರಿಯನ್ನು ತಡೆಯಬೇಕಾದ ಪೊಲೀಸರು ನಿಷ್ಕ್ರಿಯರಾಗಿದ್ದಾರೆ. ಈ ಆತಂಕದ ಸನ್ನಿವೇಶದಲ್ಲಿ ತಮ್ಮ ಕಲೆ, ನಾಟಕ, ಬರಹ ಸೇರಿದಂತೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲು ಜನರು ಮುಂದಾಗಬೇಕು.ಕೋಮುವಾದಿ ಗಲಾಟೆಕೋರರ ಸಂಖ್ಯೆ ಕಡಿಮೆ. ಆದರೆ ಅಬ್ಬರ ಜಾಸ್ತಿ. ಜನಸಾಮಾನ್ಯರು, ಸಮಾಜದ ಮರ್ಯಾದಸ್ಥ ನಾಗರಿಕರು, ಸಜ್ಜನರು ಸಾತ್ವಿಕ ಪ್ರತಿರೋಧವನ್ನು ಒಡ್ಡಿದರೆ ಮಾತ್ರ ಇಂತಹ ಪುಂಡಾಟಿಕೆ ನಿಯಂತ್ರಿಸಲು ಸಾಧ್ಯ. ತಮಗೆ ಹಕ್ಕುಗಳನ್ನು ನೀಡಿರುವ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಜನರು ಸಂಕಲ್ಪ ತೊಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News