ಮಂಗಳೂರು : 10 ದಿನಗಳ ಹಿಂದೆ ಸಂಚಾರಕ್ಕೆ ತೆರೆದ ಕಾಂಕ್ರೀಟ್ ರಸ್ತೆ ಕಟ್ಟಿಂಗ್ !

Update: 2022-07-05 11:34 GMT

ಮಂಗಳೂರು: ಸ್ಮಾರ್ಟ್ ಸಿಟಿ ಮಂಗಳೂರು ನಗರದ ಸುತ್ತಮುತ್ತ ಎಲ್ಲಾ ಕಡೆ ರಸ್ತೆ ಕಾಮಗಾರಿಗಳು, ಕಾಂಕ್ರಿಟೀಕರಣ ನಡೆಯುತ್ತಿದ್ದು, ಇವುಗಳಿಂದ ಜನರಿಗೆ ತೊಂದರೆಯಾಗುತ್ತಿರುವ ಬಗ್ಗೆ ವ್ಯಾಪಕ ಟೀಕೆ, ವಿರೋಧಗಳು ವ್ಯಕ್ತವಾಗುತ್ತಿವೆ.

ರಸ್ತೆ ಕಕಾಮಗಾರಿ ನಡೆಸಿದ ಬೆನ್ನಲ್ಲೇ ಅಗೆದು ಮತ್ತೆ ರಸ್ತೆಯನ್ನು ಅಧ್ವಾನಗೊಳಿಸುವ ಪ್ರಸಂಗಗಳು ನಡೆಯುತ್ತಿರುವಂತೆಯೇ ಕಾಂಕ್ರಿಟೀಕರಣ ಕಾಮಗಾರಿಗಾಗಿ ಕೆಲ ತಿಂಗಳ ಕಾಲ ಮುಚ್ಚಿದ್ದ ರಸ್ತೆಯೊಂದು ಕಾಂಕ್ರಿಟೀಕರಣಗೊಂಡು ಸಂಚಾರಕ್ಕೆ ಮುಕ್ತಗೊಂಡ ಕೆಲ ದಿನಗಳಲ್ಲೇ ಯಂತ್ರದಿಂದ ಕಟ್ ಮಾಡಲ್ಪಟ್ಟಿದೆ.

ನಗರದ ಪದವು- ಶರತ್ ಕಟ್ಟೆ ಯೆಯ್ಯಾಡಿ ಬೈಪಾಸ್ ರಸ್ತೆ ಹೊಸದಾಗಿ ಕಾಂಕ್ರಿಟೀಕರಣಗೊಂಡು ೧೦ ದಿನಗಳ ಹಿಂದಷ್ಟೇ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಇಂದು ಬೆಳಗ್ಗೆ ಭಾರೀ ಮಳೆಯ ನಡುವೆಯೇ ಯಂತ್ರದ ಮೂಲಕ ರಸ್ತೆಯನ್ನು ಕಟ್ ಮಾಡಲಾಗಿದ್ದು, ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ಈ ಬಗ್ಗೆ ಸ್ಥಳೀಯ ಕಾರ್ಪೊರೇಟರ್ ಶಕಿಲಾ ಕಾವ ಅವರನ್ನು ವಿಚಾರಿಸಿದಾಗ, ‘‘ರಸ್ತೆ ಕಾಂಕ್ರಿಟೀಕರಣಗೊಂಡು 10 ದಿನಗಳ ಹಿಂದೆ ಸಂಚಾರಕ್ಕೆ ತೆರವುಗೊಂಡಿತ್ತು. ಈ ರಸ್ತೆಯ ಒಂದು  ಕಡೆ ಸಂಚಾರಕ್ಕೆ ಮುಕ್ತಗೊಳಿಸುವ ಮೊದಲು ಕಾಂಕ್ರೀಟ್ ಹಸಿ ಇರುವಾಗಲೆ ಅದರ ಮೇಲೆ ವಾಹನ ಚಲಾಯಿಸಿದ ಪರಿಣಾಮ ಗುಂಡಿ ಬಿದ್ದಿತ್ತು. ಮತ್ತೊಂದು ಕಡೆ ಸಣ್ಣ ಬಿರುಕು ಕಂಡು ಬಂದಿತ್ತು. ಅದನ್ನು ಸರಿಪಡಿಸುವ ಸಲುವಾಗಿ ದುರಸ್ತಿ ಕಾಮಗಾರಿಯನ್ನು ನಡೆಸಲಾಗಿದೆ’’ ಎಂದು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News