ಭಾರಿ ಮಳೆ; ಸೋಮೇಶ್ವರ, ಉಚ್ಚಿಲ, ಬಟ್ಟಪ್ಪಾಡಿಯಲ್ಲಿ ಕಡಲ ಕೊರೆತ

Update: 2022-07-05 12:24 GMT

ಮಂಗಳೂರು: ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದ ಉಳ್ಳಾಲದಲ್ಲಿ ಸಮುದ್ರ ಬೋರ್ಗರೆಯುತ್ತಿದ್ದು, ಸೋಮೇಶ್ವರ, ಉಚ್ಚಿಲ, ಬಟ್ಟಪ್ಪಾಡಿ, ಸಿ ಗ್ರೌಂಡ್ ಮುಂತಾದ ಪ್ರದೇಶಗಳಲ್ಲಿ ಕಡಲ ಕೊರೆತ ತೀವ್ರವಾಗಿದ್ದು, ರಸ್ತೆ, ಮನೆಗಳು ಸಮುದ್ರ ಪಾಲಾಗುವ ಭೀತಿ ಎದುರಾಗಿದೆ.

ಬೆಟ್ಟಂಪಾಡಿ ಯಲ್ಲಿ  ಅಲೆಗಳ ಅಬ್ಬರಕ್ಕೆ  ಈಗಾಗಲೇ ರಸ್ತೆಯ ಜತೆ ಕಾಲುದಾರಿ ಸಮುದ್ರದ ಮಡಿಲು ಸೇರಿದೆ. ಇದರಿಂದ  ರಸ್ತೆ ಹಾಗೂ ಕಾಲುದಾರಿ ಸಂಪರ್ಕವೇ ಇಲ್ಲದೇ  ಸುಮಾರು 30ಕ್ಕೂ ಅಧಿಕ ಮನೆಗಳ ನಿವಾಸಿಗಳು ಪರದಾಟ ನಡೆಸುತ್ತಿದ್ದಾರೆ.

ಸಮುದ್ರ ಸಮೀಪದ ಮನೆಗಳಿಗೆ ಭಾರೀ ಗಾತ್ರದ ಅಲೆಗಳು ಅಪ್ಪಳಿಸುತ್ತಿದ್ದು, ಕಡಲ ತೀರದ ಮನೆಗಳ ನಿವಾಸಿಗಳು ಆತಂಕ ಕ್ಕೀಡಾಗಿದ್ದಾರೆ. ಮುಖ್ಯ ರಸ್ತೆ ಸಮುದ್ರ ಪಾಲಾಗಿದ ಹಿನ್ನೆಲೆಯಲ್ಲಿ ಒಳ ರಸ್ತೆ  ಪ್ರಯೋಜನಕ್ಕೆ ಬಾರದ ಸ್ಥಿತಿಯಲ್ಲಿವೆ. ಜನರಲ್ಲಿ ಪ್ರಾಣ ಭೀತಿ ಆವರಿಸಿದೆ. ವಾಹನ ಇದ್ದವರು ರಸ್ತೆ ಇಲ್ಲದ ಕಾರಣ ಉಪಯೋಗಿಸಲಾಗದೆ ತೊಂದರೆಗೊಳಗಾಗಿದ್ದಾರೆ. ಕೆಲಸಕ್ಕೆ ಹೋಗುವವರು ಹಾಗೂ ಮನೆಗೆ ದಿನಬಳಕೆಯ ವಸ್ತುಗಳನ್ನು ತರುವವರ ಮೇಲೆ ಪರಿಣಾಮ ಬೀರಿದೆ. ಅಗತ್ಯ ಸಾಮಾನುಗಳನ್ನು ತುಂಬಿಕೊಂಡು ಬರಬೇಕಾದ ಪರಿಸ್ಥಿತಿ ಇದೆ. ರಸ್ತೆ ಸಮಸ್ಯೆ ಯಿಂದ ಶಾಲಾ ವಿದ್ಯಾರ್ಥಿಗಳ ಮೇಲೂ ಪರಿಣಾಮ ಬೀರಿದೆ. ವಾಹನಗಳಲ್ಲಿ ಹೋಗುತ್ತಿದ್ದವರು ನಡೆದು ಕೊಂಡು ಹೋಗಬೇಕಾಗಿದೆ.

"ಕಡಲ್ಕೊರೆತ ತೀವ್ರ ಗೊಂಡ ಬಗ್ಗೆ ಅಧಿಕಾರಿಗಳ ಗಮನ ಹರಿಸಲಾಗಿದೆ. ಆದರೆ ಯಾರು ಕೂಡಾ ಶಾಶ್ವತ  ತಡೆಗೋಡೆ ಮಾಡಿ ಸಕಾರಾತ್ಮಕ ವಾಗಿ ಸ್ಪಂದಿಸದ ಕಾರಣ ಈಗ ರಸ್ತೆ ಸಮುದ್ರ ಪಾಲಾಗಿದೆ. ಈಗ ನಮಗೆ ರಸ್ತೆ, ಕಾಲು ದಾರಿ ಇಲ್ಲ. ಕುಡಿಯುವ ನೀರು ಇಲ್ಲ. ಸಚಿವರು, ಅಧಿಕಾರಿಗಳು ಕೇವಲ ಭರವಸೆ ಮಾತ್ರ ನೀಡಿದ ಕಾರಣ ನಾವೀಗ ಆತಂಕ ದಲ್ಲಿ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಮಗೆ ಪರ್ಯಾಯವಾಗಿ ಬೇರೆ ಕಡೆ ಮನೆ ಮಾಡಿ ಕೊಟ್ಟರೆ ಹೋಗಲು ತಯಾರಿ ಇದ್ದೇವೆ".

ಇಸ್ಮಾಯಿಲ್, ಬಟ್ಟಂಪಾಡಿ ನಿವಾಸಿ

"ಕಾಸರಗೋಡು ನೆಲ್ಲಿಕುನ್ನುವಿನಲ್ಲಿ ತಡೆಗೋಡೆ ನಿರ್ಮಿಸಲಾದ  ಮಾದರಿಯಲ್ಲಿ ಇಲ್ಲೂ ತಡೆಗೋಡೆ  ಅಧಿಕಾರಿಗಳು ನಿರ್ಮಾಣಬೇಕು. ಆ ಮಾದರಿಯ ತಡೆಗೋಡೆ ಇಂತಹ ಸಮಸ್ಯೆ ಸೃಷ್ಟಿಸುವುದಿಲ್ಲ. ಕಳಪೆ ಮಾದರಿಯ ತಡೆಗೋಡೆ ನಿರ್ಮಾಣ ಮಾಡಿದರೆ ಅದು ಉಪಯೋಗಕ್ಕೆ ಬಾರದು. ಅಧಿಕಾರಿಗಳು, ಸಚಿವರು ಇಲ್ಲಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ವ್ಯವಸ್ಥೆ ಮಾಡಲಿ". 
ಶಬೀರ್, ಬಟ್ಟಂಪಾಡಿ

"ಕೆಲವು ದಿನಗಳಿಂದ ಈ ಭಾಗದಲ್ಲಿ ಕಡಲು ಕೊರೆತ ಜಾಸ್ತಿಯಾಗುತ್ತಿದೆ. ರಕ್ಕಸ ಗಾತ್ರದ ಅಲೆಗಳು ದಿನದಿಂದ ದಿನಕ್ಕೆ ಅತೀ ಹೆಚ್ಚು ಭೂ ಪ್ರದೇಶವನ್ನು ಆಹುತಿ ಪಡೆಯುತ್ತಿದೆ. ಮನೆಯ ಹತ್ತು ಮೀಟರ್ ದೂರದವರೆಗೆ ಸಮುದ್ರ ಎಲ್ಲವನ್ನು ಅಪೋಶನ ಪಡೆದಿದ್ದು, ಯಾವುದೇ ಕ್ಷಣದಲ್ಲಿ ಮನೆ ಬೀಳುವ ಆತಂಕ ಎದುರಾಗಿದೆ. ಮನೆಯಲ್ಲಿ ತಾಯಿ ಮತ್ತು ನಾನು ಇಬ್ಬರೇ ವಾಸವಾಗಿದ್ದು, ಮನೆ ಬೀಳುವ ಭಯದಿಂದ ಕಳೆದ ನಾಲ್ಕು ದಿನಗಳಿಂದ ರಾತ್ರಿ ಇಡೀ ನಿದ್ದೆ ಇಲ್ಲದೇ ಕಳೆದಿದ್ದೇವೆ. ಸ್ಥಳೀಯ ಗ್ರಾಮ ಪಂಚಾಯತ್ ನವರು ಮನೆಯ ಬಳಿ ಆಗಮಿಸಿ ಸ್ಥಳೀಯ ಶಾಲೆಗೆ ಹೋಗುವಂತೆ ಹೇಳಿದ್ದಾರೆ. ಆದರೆ ಮನೆ ಬಿಟ್ಟು ಹೋಗೋದು ಹೇಗೆ? ಮನೆಯ ಸಾಮಾಗ್ರಿಗಳನ್ನು ಕೊಂಡುಹೋಗಲೂ ರಸ್ತೆಯಿಲ್ಲ. ನಮ್ಮ ಪರಿಸ್ಥಿತಿ ಯಾರೂ ಕೇಳುವವರಿಲ್ಲ"

- ಸಲಾಂ ,ಬಟ್ಟಂಪಾಡಿ

ಉಚ್ಚಿಲ ಶಾಲೆ ಜಲಾವೃತ

ಎಡೆಬಿಡದೆ ಸುರಿಯುತ್ತಿರುವ ಮಳೆ ಗೆ ಉಚ್ಚಿಲ ಶಾಲೆ ಹಾಗೂ ಅಂಗನವಾಡಿ ಜಲಾವೃತ ಗೊಂಡಿದೆ. ಕೆಲವು ಕಡೆಗಳಿಂದ ಹರಿದು ಶಾಲೆ ಕಡೆ ಬಂದಿದ್ದು,ಈ ನೀರು ಹರಿದು ಹೋಗಲು ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲ. ಈ ಹಿನ್ನೆಲೆಯಲ್ಲಿ ನೀರು ಶಾಲಾ ಆವರಣದಲ್ಲಿ ಶೇಖರಣೆ ಗೊಂಡು ಶಾಲಾ ಕೊಠಡಿಗೆ ನೀರು ನುಗ್ಗಿದೆ. ಇದರಿಂದ ಈ ದಾರಿಯಾಗಿ ಹೋಗುವವರು ಕೆಸಿರೋಡ್ ಮೂಲಕ ಒಂದು ಸುತ್ತು ಆಗಿ ಮನೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆಯ ಅಗತ್ಯ ದಾಖಲೆಗಳು  ಮಳೆ ನೀರಿನ ಮಡಿಲು ಸೇರಿ ಹಾನಿಯಾಗಿದೆ. ಇದರಿಂದ ಈ ಶಾಲೆಯಲ್ಲಿ ವಿದ್ಯಾರ್ಜನೆ ಮಾಡುವ ವಿದ್ಯಾರ್ಥಿಗಳು ತೊಂದರೆಗೊಳಗಾಗಿದ್ದು, ಶಾಲೆಯಲ್ಲಿ ಇಟ್ಟ ಅವರ ಪುಸ್ತಕ ಗಳು ಕೂಡಾ ಮಳೆ ನೀರಿಗೆ ಒದ್ದೆಯಾಗಿ ಹೋಗಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಗುರುಪ್ರಸಾದ್, ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ಮಾತಾಡಿ, ಗ್ರಾಮಕರಣಿಕ ಲಾವಣ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಉಳ್ಳಾಲ ನಗರ ಸಭಾ ವ್ಯಾಪ್ತಿಯ ಕಲ್ಲಾಪು ಬಳಿ 15 ಮನೆಗಳು ಜಲಾವೃತ ಆಗಿದೆ.ಕೆಲವು ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಬೆಳ್ಮ ಪಂಚಾಯತ್ ವ್ಯಾಪ್ತಿಯ ಕಾನಕರೆ ಎಂಬಲ್ಲಿ ಶಮೀಮ ಎಂಬವರ ಮನೆಗೆ ಕಂಪೌಂಡ್ ಕುಸಿದು ಬಿದ್ದು ಹಾನಿಯಾಗಿದೆ.

ತಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಜಾತ್ ಕಾಂಪ್ಲೆಕ್ಸ್ ಜಲಾವೃತಗೊಂಡಿದೆ. ಕಿನ್ಯ ಗ್ರಾಮದ ಮೀನುಗಾರಿಕೆಯಲ್ಲಿ ಒಂದು ಮನೆ ಜಲಾವೃತ ಆಗಿದೆ. ತೊಕ್ಕೊಟ್ಟು ರಾಷ್ಟ್ರೀಯ ಹೆದ್ದಾರಿ ಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ರಸ್ತೆಯಲ್ಲಿ ಹರಿದು ತುಂಬಿದ್ದು, ಇದರಿಂದಾಗಿ ವಾಹನ  ಸಂಚಾರ ಕೆಲಕಾಲ ಅಸ್ತವ್ಯಸ್ತ ಗೊಂಡಿತ್ತು. ಕುತ್ತಾರ್, ದೇರಳಕಟ್ಟೆ ಪರಿಸರದಲ್ಲೂ ಮಳೆ ನೀರು ರಸ್ತೆಯಲ್ಲಿ ಹರಿದು ಸಂಚಾರಕ್ಕೆ ತೊಡಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News