ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳ; ಹರೇಕಳ-ಅಡ್ಯಾರು ನಡುವೆ ಸಂಪರ್ಕ ದೋಣಿ ಸ್ಥಗಿತ

Update: 2022-07-05 15:38 GMT

ಮಂಗಳೂರು: ದ.ಕ. ಮತ್ತು ಮಲೆನಾಡು ಪ್ರದೇಶದಲ್ಲಿ ಕಳೆದ ಐದಾರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಇದರಿಂದ ಹರೇಕಳ-ಅಡ್ಯಾರ್ ನಡುವಿನ ದೋಣಿ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ.

ಹರೇಕಳದಿಂದ ಅಡ್ಯಾರ್ ಮೂಲಕ ಮಂಗಳೂರು, ಫರಂಗಿಪೇಟೆ ಮತ್ತಿತರ ಪ್ರದೇಶಗಳಿಗೆ ತೆರಳುವ ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ಬಗ್ಗೆ ಮಾಹಿತಿ ಪಡೆದ ರಾಜ್ಯ ವಿಧಾನ ಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಮಂಗಳವಾರ ಹರೇಕಳ-ಅಡ್ಯಾರ್‌ಗೆ ಭೇಟಿ  ಪರಿಶೀಲನೆ ನಡೆಸಿದರಲ್ಲದೆ ಸ್ಥಳೀಯರ ಅಹವಾಲು ಆಲಿಸಿದರು.

ದೋಣಿ ಸಂಚಾರ ಸ್ಥಗಿತಗೊಳಿಸಿದ ಕಾರಣ ಪಾವೂರು-ಹರೇಕಳದ ಜನರು ಮಂಗಳೂರಿಗೆ ಸುತ್ತಿ ಬಳಸಿ ಬರಬೇಕಿದೆ. ಹಾಗಾಗಿ ನಿರ್ಮಾಣ ಹಂತದಲ್ಲಿರುವ ಹರೇಕಳ-ಅಡ್ಯಾರ್ ಅಣೆಕಟ್ಟು-ಸೇತುವೆಯಲ್ಲಿ ನಡೆದುಕೊಂಡು ಹೋಗಲು ಅವಕಾಶ ಕಲ್ಪಿಸಬೇಕು ಎಂದು ಯು.ಟಿ.ಖಾದರ್‌ಗೆ ಸಾರ್ವಜನಿಕರು ಆಗ್ರಹಿಸಿದರು.

ಸುರಕ್ಷತೆಯ ದೃಷ್ಟಿಯಿಂದ ಸೇತುವೆಯಲ್ಲಿ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ. ಆದರೆ ಸಾರ್ವಜನಿಕರಿಗೆ ಅಗುತ್ತಿರುವ ತೊಂದರೆಯನ್ನು ನೀಗಿಸುವ ಸಲುವಾಗಿ ಶಾಸಕ ಖಾದರ್ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು, ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು, ಗುತ್ತಿಗೆದಾರರು, ಹರೇಕಳ ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒ ಜೊತೆ ಚರ್ಚೆ ನಡೆಸಿದರು.

ಅಲ್ಲದೆ ಜು.6ರಂಂದು ಗ್ರಾಪಂ ಕಚೇರಿಯಲ್ಲಿ ಸಭೆ ಕರೆದು ಸಾರ್ವಜನಿಕರ ಸುರಕ್ಷತೆಗೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳು, ಗುತ್ತಿಗೆದಾರರಿಗೆ ಯು.ಟಿ. ಖಾದರ್‌ ಅವರು ಈ ಸಂದರ್ಭ ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News