​ಸೈಕಲ್‌ಗೆ ಬೊಲೇರೋ ಢಿಕ್ಕಿ: ವಿದ್ಯಾರ್ಥಿ ಗಂಭೀರ

Update: 2022-07-05 15:43 GMT

ಉಡುಪಿ: ಬೊಲೇರೋ ವಾಹನವೊಂದು ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಅಂಬಲ ಪಾಡಿ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಜು.೫ರಂದು ಬೆಳಗ್ಗೆ ನಡೆದಿದೆ.

ಗಾಯಗೊಂಡವರನ್ನು ಉಡುಪಿ ಸೈಂಟ್ ಸಿಸಿಲಿಯ ಪ್ರೌಢಶಾಲೆಯ ವಿದ್ಯಾರ್ಥಿ ಆದಿತ್ಯ ಪಿ.ಶೆಟ್ಟಿಗಾರ್ ಎಂದು ಗುರುತಿಸಲಾಗಿದೆ. ಕರಾವಳಿ ಬೈಪಾಸ್ ಕಡೆಯಿಂದ ಕಿನ್ನಿಮುಲ್ಕಿ ಕಡೆಗೆ ಹೋಗುತ್ತಿದ್ದ ಬೊಲೇರೋ ವಾಹನ, ಅಂಬಲ ಪಾಡಿ ಕಡೆಯಿಂದ ಸೈಂಟ್ ಸಿಸಿಲಿ ಶಾಲೆ ಕಡೆಗೆ ರಸ್ತೆ ದಾಟುತ್ತಿದ್ದ ಆದಿತ್ಯ ಅವರ ಸೈಕಲ್‌ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.

ಇದರಿಂದ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡ ಆದಿತ್ಯ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲೆಯಲ್ಲಿಯೇ ಅಂಬಲಪಾಡಿ ಜಂಕ್ಷನ್ ಅತೀ ಅಪಾಯಕಾರಿಯಾಗಿದ್ದು, ಇಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಿವೆ. ಈ ಪ್ರದೇಶದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಸಾರ್ವಜನಿಕರಿಂದ ನಿರಂತರ ಬೇಡಿಕೆ ವ್ಯಕ್ತವಾಗಿದ್ದರೂ, ಸಂಬಂಧ ಪಟ್ಟ ಇಲಾಖೆಗಳು ಮೌನವಾಗಿದೆ. ಬೆಳಗ್ಗೆ ಶಾಲಾ ಸಮಯ ಅಂದರೆ ೮ ರಿಂದ ೯.೩೦ ಹಾಗೂ ಸಂಜೆ ೩ರಿಂದ ೫ರ ನಡುವೆ ಈ ಜಂಕ್ಷನ್ ಮೂಲಕ ಸಾವಿರಾರು ವಿದ್ಯಾರ್ಥಿಗಳು ರಸ್ತೆ ದಾಟುತ್ತಾರೆ. ಆದರೆ ಇಲ್ಲಿ ಕೇವಲ ಇಬ್ಬರು ಪೊಲೀಸ್ ಸಿಬ್ಬಂದಿಗಳು ಮಾತ್ರ ಕರ್ತವ್ಯ ನಿರ್ವಹಿಸುತ್ತಾರೆ. ಇವರ ಸಂಖ್ಯೆಯನ್ನು ಹೆಚ್ಚಿಸ ಬೇಕು ಎಂದು ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News