ಮಣಿಪಾಲ; ಹೊಟೇಲ್ ಮಾಲಕನಿಗೆ ಪಿಸ್ತೂಲ್ನಂತಹ ವಸ್ತು ತೋರಿಸಿ ಬೆದರಿಕೆ: ಆರೋಪಿ ಸೆರೆ
Update: 2022-07-06 13:02 IST
ಮಣಿಪಾಲ, ಜು.6: ತಿಂಡಿ ತಿಂದ ಬಿಲ್ ಪಾವತಿಸಲು ಹೇಳಿದ ಕಾರಣ ಹೊಟೇಲ್ ಮಾಲಕರಿಗೆ ಹಲ್ಲೆ ನಡೆಸಿ ಪಿಸ್ತೂಲ್ ನಂತಹ ವಸ್ತು ತೋರಿಸಿ ಜೀವ ಬೆದರಿಕೆಯೊಡ್ಡಿರುವ ಘಟನೆ ಮಣಿಪಾಲದಲ್ಲಿ ಮಂಗಳವಾರ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಕಾರ್ಕಳದ ಮುಹಮ್ಮದ್ ಅನ್ವರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮಣಿಪಾಲದಲ್ಲಿರುವ ಭಟ್ಕಳ ಮುರ್ಡೇಶ್ವರದ ಹಬೀಬುಲ್ಲಾ ಎಂಬವರ ಹೋಟೆಲ್ಗೆ ಕಾರಿನಲ್ಲಿ ಬಂದ ಅನ್ವರ್, ತಿಂಡಿ ತಿಂದು ಚಾ ಕುಡಿದು ಬಳಿಕ ಹಣವನ್ನು ಪಾವತಿಸದೇ ಕಾರಿನ ಬಳಿ ಹೋದರೆನ್ನಲಾಗಿದೆ.
ಈ ವೇಳೆ ಬಿಲ್ ಪಾವತಿಸುವಂತೆ ಸೂಚಿಸಿದ ಮಾಲಕ ಹಬೀಬುಲ್ಲಾಗೆ, ಅನ್ವರ್ ಕೈಯಿಂದ ಹೊಡೆದು ಅಡ್ಡಗಟ್ಟಿ ಪಿಸ್ತೂಲ್ನಂತಹ ಲೈಟರ್ ತೋರಿಸಿ ಜೀವ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಮಣಿಪಾಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.