ಮಾಡೋದೆಲ್ಲ ಮಾಡಿ ದೇವರಿಗೆ ಹರಕೆ ಒಪ್ಪಿಸಿದರೇನು ? ಎಂಒಬಿ ಕಾರ್ಡ್ ಹೋಲ್ಡರ್‌ಗಳನ್ನು ಗದರಿದ ಕಮಿಷನರ್ ಶಶಿಕುಮಾರ್‌

Update: 2022-07-06 11:43 GMT

ಮಂಗಳೂರು: ಆರೋಪಿ ಕೈಯ್ಯಲ್ಲಿ ಶಿವಾಜಿ ಹಚ್ಚೆ, ಇದು ಶಿವಾಜಿಗೆ ಮಾಡುವ ಅಪರಾಧ, ಅದನ್ನು ಮೊದಲು ಅಳಿಸಿಹಾಕು, ಅಪರಾಧ ಕೃತ್ಯ ಮಾಡುವವರಿಗೆ ಯಾವ ದೇವರು ಕಾಪಾಡಲ್ಲ, ಮೊದಲು ಮನುಷ್ಯರಾಗಲು ಕಲಿಯಿರಿ, ಮಾಡೋದೆಲ್ಲ ಮಾಡಿ ದೇವರಿಗೆ ಹರಕೆ ಒಪ್ಪಿಸಿದರೆ ಏನು ಪ್ರಯೋಜನ, ವೈದ್ಯನಾಗಬೇಕಾದವ ಅಪರಾಧ ಕೃತ್ಯ ಮಾಡಿದರೆ ವೈದ್ಯನಾಗಿ ಏನು ಮಾಡಬಲ್ಲೆ ?

ಇದು ಇಂದು ನಗರದ ಪೊಲೀಸ್ ಮೈದಾನದಲ್ಲಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ ಕಳ್ಳತನ, ದರೋಡೆ, ಮಾದಕ ದ್ರವ್ಯ ಪ್ರಕರಣಗಳಿಗೆ ಸಂಬಂಧಿಸಿ ಎಂಒಬಿ (Modus Operandi Bureau) ಕಾರ್ಡ್   ಹೊಂದಿರುವವರನ್ನು ತಪಾಸಣೆ ನಡೆಸಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರ ಗದರಿಕೆಯ ಮಾತುಗಳು.

ದರೋಡೆ ಪ್ರಕರಣದ ಆರೋಪಿಯೊಬ್ಬ ಕೂದಲು ಬಿಟ್ಟುಕೊಂಡಿದ್ದ. ಯಾಕೆ ಕೂದಲು ಬಿಟ್ಟಿದ್ದೇ ಎಂದಾಗ ಆತ ಧರ್ಮಸ್ಥಳಕ್ಕೆ ಹರಕೆ ಒಪ್ಪಿಸಲು ಎಂದಾಗ, ಈ ರೀತಿ ಮಾಡೋದೆಲ್ಲ ಮಾಡಿ ದೇವರಿಗೆ ಹರಕೆ ಒಪ್ಪಿಸಿದರೆ ಏನು ಪ್ರಯೋಜನ ಎಂದು ಕಮಿಷನರ್ ಗದರಿದರು.

ಮಾದಕ ದ್ರವ್ಯ ಮಾರಾಟ ಪ್ರಕರಣದ ಆರೋಪಿಯೊಬ್ಬನ ಜತೆ ಮಾತನಾಡುತ್ತಾ, ಕಲಿಯುವಾಗಲೇ ಇಂತಹ ಅಪರಾಧ ಕೃತ್ಯ ನಡೆಸಿದಾತ ಮುಂದೆ ವೈದ್ಯನಾಗಿ ಏನು ಮಾಡಲು ಸಾಧ್ಯ ಎಂದರು. ಒಬ್ಬ ಎಂಒಬಿ ಹೋಲ್ಡರ್ ಕೈ ಮೇಲೆ ಶಿವಾಜಿ ಹಚ್ಚೆ ಹಾಕಿಸಿಕೊಂಡಿದನ್ನು ನೋಡಿ ಪ್ರತಿಕ್ರಿಯಿಸಿದ ಕಮಿಷನರ್, ಕ್ರಿಮಿನಲ್ ಕೃತ್ಯ ಮಾಡುವವರು ಈ ರೀತಿ ಹಚ್ಚೆ ಹಾಕಿಸಿಕೊಳ್ಳುವುದು ಶಿವಾಜಿಗೆ ಮಾಡುವ ಅವಮಾನ ಎಂದರಲ್ಲದೆ, ತಾಯಿ ಹಚ್ಚೆಯನ್ನು ಎದೆಯ ಮೇಲೆ ಹಾಕಿಸಿಕೊಂಡ ಎಂಒಬಿ ಹೋಲ್ಡರ್ ಒಬ್ಬನನ್ನು ಗದರಿಸುತ್ತಾ, ಇದಾ ತಾಯಿಗೆ ಕೊಡುವ ಬೆಲೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಂದು ನಡೆದ ಪರೇಡ್‌ನಲ್ಲಿ ಮಂಗಳೂರು ಪೊಲೀಸ್ ಠಾಣಾವ್ಯಾಪ್ತಿಯ 400ರಷ್ಟು ಎಂಒಬಿ ಕಾರ್ಡ್ ಹೋಲ್ಡರ್‌ಗಳು ಭಾಗವಹಿಸಿದ್ದು, ಡಿಸಿಪಿಗಳಾದ ಅಂಶುಕಮಾರ್ ಹಾಗೂ ದಿನೇಶ್ ನಾಯಕ್ ಉಪಸ್ಥಿತಿಯಲ್ಲಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಪರಿಶೀಲನೆ ನಡೆಸಿದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳ್ಳತನ, ದರೋಡೆ, ಮಾದಕ ದ್ರವ್ಯ ಸರಬರಾಜು- ಸೇವನೆ, ಗೋ ಕಳ್ಳತನ- ಸಾಗಾಟ ಮೊದಲಾದ ಪ್ರಕರಣಗಳಿಗೆ ಸಂಬಂಧಿಸಿ ಸುಮಾರು  2000 ಮಂದಿ ಎಂಒಬಿ ಕಾರ್ಡ್ ಹೋಲ್ಡರ್‌ಗಳಿದ್ದಾರೆ ಎಂದರು.

ಎಂಒಬಿ  ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಹಿಸ್ಟ್ರಿ ಶೀಟ್ ಆಗಿದ್ದು, ರೌಡಿ ಶೀಟ್‌ಗಿಂತ ಪ್ರತ್ಯೇಕವಾದದ್ದು. ಇಂತಹ ಎಂಒಬಿ ಕಾರ್ಡ್ ಪೊಲೀಸ್ ಠಾಣೆಯಲ್ಲಿ  ದಾಖಲಾಗುತ್ತದೆ. ಕಳೆದ ಮೂರು ತಿಂಗಳಲ್ಲಿ ಹಿಂದೆಯಷ್ಟೆ ಸುಮಾರು 750ಕ್ಕೂ ಅಧಿಕ ಆರೋಪಿಗಳ ಸನ್ನಡತೆ, ಪ್ರಕರಣ ಅಂತ್ಯಗೊಂಡ ಹಿನ್ನೆಲೆಯಲ್ಲಿ ಎಂಒಬಿ ಕಾರ್ಡ್‌ಗಳನ್ನು ಮುಕ್ತಾಯಗೊಳಿಸಲಾಗಿದೆ.

ಈಗ ವಿವಿಧ ಅಪರಾಧ ಹಾಗೂ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿ ಸೂಕ್ಷ್ಮ ಅವಧಿಯಾಗಿದ್ದು, ಗಂಭೀರ ವಿಚಾರಗಳು ಚರ್ಚೆ ಆಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಮುಂದಿನ ವಾರ ಬಕ್ರೀದ್, ಶಾಲಾ ಕಾಲೇಜುಗಳು ಈಗಾಗಲೇ ಆರಂಭಗೊಂಡಿರುವುದರಿಂದ ಇಂತಹ ಎಂಒಬಿ ಅಪರಾಧಿಗಳ ಮೇಲೆ ಹೆಚ್ಚು ನಿಗಾ ಇರಿಸಬೇಕಾಗಿದೆ.
ಇಂದು ಹಾಜರಾದ ಎಂಒಬಿ ಹೋಲ್ಡರ್‌ಗಳು ಯಾವ ಆದಾಯದಿಂದ ಬೆಲೆಬಾಳುವ ಕಾರು, ವಾಚ್, ಚಿನ್ನಾಭರಣ, ಮೊಬೈಲ್ ಫೋನ್‌ಗಳನ್ನು ಖರೀದಿಸಿದ್ದಾರೆ ಎಂಬ ಬಗ್ಗೆ ತಪಾಸಣೆ ನಡೆಸಲಾಗುತ್ತದೆ. ಅವರ ಸಹಚರರು ಅದೇ ಚಟುವಟಿಕೆಯಲ್ಲಿ ಮುಂದುವರಿದಿದ್ದಾರೆಯೇ, ಜೈಲಿನಲ್ಲಿರುವವರ ಜತೆ ಸಂಪರ್ಕದಲ್ಲಿದ್ದಾರೆಯೇ ಸೇರಿದಂತೆ ನಿಗಾ ವಹಿಸಿ ಈ ತರಹ ಅಪರಾಧಗಳು ಆಗಬಾರದು ಎಂಬ ಉದ್ದೇಶದಿಂದ ಈ ಪರೇಡ್ ನಡೆಸಲಾಗುತ್ತಿದೆ. ಠಾಣೆಗಳಲ್ಲಿ ಆಗಾಗ್ಗೆ ಇಂತಹ ಅಪರಾಧಿಗಳನ್ನು ಕರೆಸಿ ಈ ಪರಿಶೀಲನೆ ನಡೆಸಲಾಗುತ್ತದೆ. ಠಾಣೆ ಒಳಗೆ ಮಾಡುವ ಪ್ರಕ್ರಿಯೆ ಸಾರ್ವಜನಿಕರಿಗೆ ತಲುಪುವುದಿಲ್ಲ. ಹಾಗಾಗಿ ರೌಡಿ ಪರೇಡ್, ಎಂಒಬಿ ಪೆರೇಡ್ ಮಾಡುವ ಮೂಲಕ ಮಾಹಿತಿ ಸಂಗ್ರಹಿಸುವ ಜತೆಗೆ, ಸಾರ್ವಜನಿಕರಿಗೆ ಈ ಬಗ್ಗೆ ಜಾಗೃತಿ ಮೂಡಿಸುವುದು ಪ್ರಮುಖ ಉದ್ದೇಶವಾಗಿದೆ ಎಂದು ಕಮಿಷನರ್ ಎನ್. ಶಶಿ ಕುಮಾರ್ ಹೇಳಿದರು.

"ಸೆನ್, ಸಿಸಿಬಿ ಸೇರಿದಂತೆ 17 ಪೊಲೀಸ್ ಠಾಣೆಗಳ  ಸುಮಾರು 400 ಮಂದಿ ಎಂಒಬಿ ಕಾರ್ಡ್ ಹೋಲ್ಡರ್‌ಗಳನ್ನು ಇಂದು ಪೊಲೀಸ್ ಮೈದಾನಕ್ಕೆ ಹಾಜರುಪಡಿಸಿ ಪೆರೇಡ್ ನಡೆಸಲಾಗಿದೆ. ಈಗಾಗಲೇ ಸುಮಾರು 300ಕ್ಕೂ ಅಧಿಕ ಮಂದಿಯನ್ನು ಕಳೆದ ಮೂರು ದಿನಗಳಲ್ಲಿ ಕರೆಸಿಕೊಂಡು ಅವರ ಮೇಲೆ ಹೆಚ್ಚಿನ ಪ್ರಕರಣ ಇಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಲಾಗಿದೆ. ಯಾರು ಉತ್ತಮ ನಡತೆಯನ್ನು ಹೊಂದಿದ್ದಾರೆ ಎಂಬವರ ಮೇಲೆ ನಿಗಾ ಇರಿಸುವ ನಿಟ್ಟಿನಲ್ಲಿ ಈ ಪರೇಡ್ ನಡೆಸಲಾಗಿದೆ. ಡಿಸಿಪಿ ಅಂಶುಕುಮಾರ್, ದಿನೇಶ್ ಕುಮಾರ್ ನೇತೃತ್ವದಲ್ಲಿ ಎಲ್ಲಾ ಎಸಿಪಿ, ಇನ್ಸ್‌ಪೆಕ್ಟರ್‌ಗಳು  ಇಂದು ಪೆರೇಡ್‌ನಲ್ಲಿ ಭಾಗವಹಿಸಿದ 400 ಮಂದಿ ಹಾಗೂ ಠಾಣೆಗೆ ಕರೆಸಿಕೊಂಡ 300 ಮಂದಿಯನ್ನು ಸೇರಿ ಒಟ್ಟು 700 ಮಂದಿಯನ್ನು ವಿಚಾರಣೆಗೊಳಪಡಿಸಿದ್ದಾರೆ".

- ಎನ್. ಶಶಿ ಕುಮಾರ್, ಆಯುಕ್ತರು, ಮಂಗಳೂರು ಪೊಲೀಸ್. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News