ಇನ್ನು ಆರ್‌ಟಿಒದಲ್ಲಿ ಪರೀಕ್ಷೆ ಇಲ್ಲದೆಯೇ ಚಾಲನಾ ಪರವಾನಿಗೆ ಪಡೆಯಬಹುದು!

Update: 2022-07-06 17:02 GMT
ಸಾಂದರ್ಭಿಕ ಚಿತ್ರ

ಚಾಲನಾ ಪರವಾನಿಗೆಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯೊಬ್ಬ ಇನ್ನು ಮುಂದೆ ಪರೀಕ್ಷೆಗಾಗಿ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ)ಗೆ ಹೋಗಬೇಕಾಗಿಲ್ಲ. ಅಭ್ಯರ್ಥಿಗಳು ಆರ್‌ಟಿಒದಲ್ಲಿ ಪರೀಕ್ಷೆ ತೆಗೆದುಕೊಳ್ಳದೆಯೇ ಮಾನ್ಯತೆ ಪಡೆದ ಚಾಲನಾ ತರಬೇತಿ ಕೇಂದ್ರಗಳಿಂದ ಚಾಲನಾ ಪರವಾನಿಗೆ ಪಡೆಯಬಹುದಾಗಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಹೊರಡಿಸಿದ ನೂತನ ನಿಯಮಗಳ ಪ್ರಕಾರ, ಮಾನ್ಯತೆ ಪಡೆದ ಚಾಲಕ ತರಬೇತಿ ಕೇಂದ್ರವೊಂದು, ತರಬೇತಿಯ ಯಶಸ್ವಿ ಮುಕ್ತಾಯದ ಬಳಿಕ ಅರ್ಹ ಅಭ್ಯರ್ಥಿಗಳಿಗೆ ಚಾಲನಾ ಪರವಾನಿಗೆಗಳನ್ನು ನೀಡಬಹುದಾಗಿದೆ.
ಕೇಂದ್ರ ಅಥವಾ ರಾಜ್ಯ ಸಾರಿಗೆ ಇಲಾಖೆಗಳು ಇಂಥ ತರಬೇತಿ ಕೇಂದ್ರಗಳನ್ನು ನಡೆಸುತ್ತವೆ.

ಚಾಲನಾ ಪರವಾನಿಗೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು, ಯಾವುದಾದರು ಚಾಲಕ ತರಬೇತಿ ಕೇಂದ್ರಗಳಲ್ಲಿ ತರಬೇತಿಗಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಬೇಕು ಹಾಗೂ ಆ ಕೇಂದ್ರಗಳು ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳಬೇಕು.

ಅಭ್ಯರ್ಥಿಯೋರ್ವ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಬಳಿಕ, ತರಬೇತಿ ಕೇಂದ್ರವು ಪ್ರಮಾಣಪತ್ರವೊಂದನ್ನು ನೀಡುತ್ತದೆ. ಆ ಪ್ರಮಾಣಪತ್ರವನ್ನು ಪಡೆದ ಬಳಿಕ, ಅಭ್ಯರ್ಥಿಗಳು ಚಾಲನಾ ಪರವಾನಿಗೆಗಳಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಆರ್‌ಟಿಒದಲ್ಲಿ ಯಾವುದೇ ಪರೀಕ್ಷೆ ಇಲ್ಲದೆಯೇ ತರಬೇತಿ ಪ್ರಮಾಣಪತ್ರದ ಆಧಾರದಲ್ಲಿ ಚಾಲನಾ ಪರವಾನಿಗೆಯನ್ನು ನೀಡಲಾಗುವುದು.

ತರಬೇತಿ ಕೇಂದ್ರಗಳಲ್ಲಿ ಸಿಮ್ಯುಲೇಟರ್‌ಗಳು ಮತ್ತು ಚಾಲನಾ ಪರೀಕ್ಷಾ ಟ್ರಾಕ್‌ಗಳು ಇರುತ್ತವೆ. ತರಬೇತಿ ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ಮುಗಿಸುವ ಅಭ್ಯರ್ಥಿಗಳಿಗೆ ಆರ್‌ಟಿಒದಲ್ಲಿ ಪರೀಕ್ಷೆ ನಡೆಸದೆಯೇ ಪರವಾನಿಗೆಗಳನ್ನು ನೀಡಲಾಗುವುದು.

ಮಾನ್ಯತೆ ಪಡೆದ ತರಬೇತಿ ಕೇಂದ್ರಗಳು ಹಗುರ ವಾಹನಗಳು (ಎಲ್‌ಎಮ್‌ವಿ) ಮತ್ತು ಮಧ್ಯಮ ಮತ್ತು ಭಾರೀ ವಾಹನ (ಎಚ್‌ಎಮ್‌ವಿ)ಗಳ ಚಾಲನೆಗೆ ತರಬೇತಿ ನೀಡಬಹುದಾಗಿದೆ.

ಹಗುರ ವಾಹನಗಳ ತರಬೇತಿಯ ಒಟ್ಟು ಅವಧಿ 29 ಗಂಟೆಗಳು. ಇದು ತರಬೇತಿ ಆರಂಭಗೊಂಡ ನಾಲ್ಕು ವಾರಗಳಲ್ಲಿ ಪೂರ್ಣಗೊಳ್ಳಬೇಕು. ತರಬೇತಿ ಕೇಂದ್ರಗಳು ಸಿದ್ಧಾಂತ (ತಿಯರಿ) ಮತ್ತು ಪ್ರಾಯೋಗಿಕ- ಎರಡೂ ಜ್ಞಾನಗಳನ್ನು ಒದಗಿಸಬೇಕು.
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ತರಬೇತಿ ಕೇಂದ್ರಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಕಳೆದ ವರ್ಷದ ಜೂನ್‌ನಲ್ಲಿ ಹೊರಡಿಸಿತ್ತು.
ಆದರೆ, ಕೆಲವು ರಾಜ್ಯಗಳು ಚಾಲನಾ ತರಬೇತಿ ಕೇಂದ್ರಗಳನ್ನು ತೆರೆಯುವ ವಿಚಾರದಲ್ಲಿ ಕಳವಳ ವ್ಯಕ್ತಪಡಿಸಿದ್ದವು. ಯಾಕೆಂದರೆ ಈ ಕ್ರಮವು ಚಾಲನಾ ಪರವಾನಿಗೆ ನಿಡುವ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವುದಕ್ಕೆ ಸಮವಾಗಿದೆ. ಸರಿಯಾದ ಪರಿಶೀಲನೆಗಳಿಲ್ಲದೆಯೇ ಇಂಥ ಕೇಂದ್ರಗಳು ಚಾಲನಾ ತರಬೇತಿಗಳನ್ನು ನೀಡಬಹುದು ಎಂಬ ಭೀತಿಯೂ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News