ಆಮದು ಖಾದ್ಯತೈಲ ದರಗಳನ್ನು 10 ರೂ.ವರೆಗೆ ಇಳಿಸುವಂತೆ ತಯಾರಕರಿಗೆ ಕೇಂದ್ರದ ಸೂಚನೆ

Update: 2022-07-06 17:44 GMT

ಹೊಸದಿಲ್ಲಿ,ಜು.6: ಆಮದು ಖಾದ್ಯತೈಲಗಳ ಗರಿಷ್ಠ ಮಾರಾಟ (ಎಂಆರ್‌ಪಿ) ಬೆಲೆಯನ್ನು ಒಂದು ವಾರದೊಳಗೆ ಪ್ರತಿ ಲೀ.ಗೆ 10 ರೂ.ವರೆಗೆ ಕಡಿತಗೊಳಿಸುವಂತೆ ಕೇಂದ್ರ ಸರಕಾರವು ಬುಧವಾರ ಖಾದ್ಯ ತೈಲ ತಯಾರಕರಿಗೆ ಸೂಚಿಸಿದೆ.

ಖಾದ್ಯತೈಲಗಳ ಜಾಗತಿಕ ಬೆಲೆಗಳ ಕುಸಿತದ ಬಗ್ಗೆ ಚರ್ಚಿಸಲು ಖಾದ್ಯತೈಲಗಳ ತಯಾರಕರ ಸಂಘಗಳೊಂದಿಗೆ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಅವರು ‘ಕಳೆದೊಂದು ವಾರದಲ್ಲಿಯೇ ಜಾಗತಿಕ ಬೆಲೆಗಳು ಶೇ.10ರಷ್ಟು ಇಳಿಕೆಯಾಗಿವೆ. ಇದನ್ನು ಗ್ರಾಹಕರಿಗೆ ವರ್ಗಾಯಿಸಲೇಬೇಕು. ಎಂಆರ್‌ಪಿಯನ್ನು ಕಡಿಮೆ ಮಾಡುವಂತೆ ನಾವು ಅವರಿಗೆ ತಿಳಿಸಿದ್ದೇವೆ ’ಎಂದರು.

ತಾಳೆ ಮತ್ತು ಸೂರ್ಯಕಾಂತಿ ಎಣ್ಣೆಗಳಂತಹ ಖಾದ್ಯತೈಲಗಳ ಬೆಲೆಗಳನ್ನು ಪ್ರತಿ ಲೀ.ಗೆ 10ರೂ.ವರೆಗೆ ಇಳಿಸಲು ತಯಾರಕರು ಒಪ್ಪಿಕೊಂಡಿದ್ದಾರೆ. ಇವುಗಳ ದರ ಇಳಿದ ಬಳಿಕ ಇತರ ಖಾದ್ಯತೈಲಗಳ ಬೆಲೆಗಳೂ ಕಡಿಮೆಯಾಗುತ್ತವೆ ಎಂದರು.

ಒಂದೇ ಬ್ರಾಂಡಿನ ಖಾದ್ಯತೈಲಕ್ಕೆ ದೇಶಾದ್ಯಂತ ಒಂದೇ ಎಂಆರ್‌ಪಿಯನ್ನು ನಿಗದಿಗೊಳಿಸುವಂತೆಯೂ ಪಾಂಡೆ ತಯಾರಕರಿಗೆ ಸೂಚಿಸಿದ್ದಾರೆ.

ಭಾರತವು ತನ್ನ ಒಟ್ಟೂ ಅಗತ್ಯದ ಮೂರನೇ ಎರಡು ಭಾಗಕ್ಕಿಂತ ಹೆಚ್ಚಿನ ಖಾದ್ಯತೈಲಗಳನ್ನು ಆಮದು ಮಾಡಿಕೊಳ್ಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News