ಮನುಷ್ಯ ಘನತೆಯನ್ನು ಕಾಯುವಲ್ಲಿ ವಿಫಲವಾಗಿರುವ ವರದಕ್ಷಿಣೆ ಕಾಯ್ದೆ

Update: 2022-07-07 03:43 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಇತ್ತೀಚೆಗೆ ರಾಜಸ್ಥಾನದಲ್ಲಿ ನಡೆದ ಭೀಕರ ಘಟನೆಯೊಂದು ದೇಶದಲ್ಲಿ ವರದಕ್ಷಿಣೆ ಸಮಸ್ಯೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಒಂದೇ ಕುಟುಂಬಕ್ಕೆ ಮದುವೆಯಾಗಿ ಬಂದಿದ್ದ ಮೂವರು ಸಹೋದರಿಯರು ತಮ್ಮ ಇಬ್ಬರು ಮಕ್ಕಳ ಜೊತೆಗೆ ಆತ್ಮಹತ್ಯೆ ಮಾಡಿಕೊಂಡರು. ಹೃದಯ ಛೇದಿಸುವ ಅಂಶವೆಂದರೆ, ಮೃತಪಟ್ಟ ಮಕ್ಕಳಲ್ಲಿ ಒಂದು 4 ವರ್ಷದ ಮಗುವಾಗಿದ್ದರೆ ಇನ್ನೊಂದು 27 ದಿನಗಳ ನವಜಾತ ಶಿಶುವಾಗಿತ್ತು. ಅಷ್ಟೇ ಅಲ್ಲ ಮೃತಪಟ್ಟ ಇಬ್ಬರು ಸಹೋದರಿಯರು ಗರ್ಭಿಣಿಯರಾಗಿದ್ದರು. ತಮ್ಮ ಎಳೆ ಕಂದಮ್ಮಗಳ ಜೊತೆಗೆ ಸಾಯಬೇಕಾಗಿದ್ದರೆ ಈ ಸೋದರಿಯರು ಅದೆಷ್ಟು ಭೀಕರವಾದ ಚಿತ್ರಹಿಂಸೆಯನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಅನುಭವಿಸಿರಬೇಕು! ವಿಪರ್ಯಾಸವೆಂದರೆ, ಈ ಅಮಾನುಷ ಘಟನೆ ನಡೆದ ಬೆನ್ನಿಗೇ ಪೊಲೀಸರು ಆರೋಪಿಗಳ ವಿರುದ್ಧ ಸ್ವಯಂ ಕ್ರಮ ತೆಗೆದುಕೊಳ್ಳಬೇಕಾಗಿತ್ತು. ಆದರೆ ಮೃತಸೋದರಿಯರ ಕುಟುಂಬ ದೂರು ಸಲ್ಲಿಸಿದ ಬಳಿಕವೂ ಆರೋಪಿಗಳನ್ನು ಬಂಧಿಸಲು ಪೊಲೀಸ್ ಇಲಾಖೆ ಮೀನಮೇಷ ಎಣಿಸಿತು. ಮೃತ ಸೋದರಿಯರು ಡೆತ್‌ನೋಟ್ ಬರೆದಿಲ್ಲವಾದರೂ, ವಾಟ್ಸ್‌ಆ್ಯಪ್‌ನಲ್ಲಿ ತಮ್ಮ ನೋವುಗಳನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ತಮ್ಮ ಸಾವಿಗೆ ಅತ್ತೆ ಮಾವಂದಿರೇ ಕಾರಣ ಎಂದೂ ಹೇಳಿದ್ದಾರೆ. ಬಹುಶಃ ವರದಕ್ಷಿಣೆಯ ಹೆಸರಿನಲ್ಲಿ ಇತ್ತೀಚೆಗೆ ನಡೆದ ಅತ್ಯಂತ ಭೀಕರ ದುರಂತವಿದು. ದೇಶದಲ್ಲಿ ವರದಕ್ಷಿಣೆ ಇನ್ನೂ ಬೇರೆ ಬೇರೆ ಮುಖವಾಡದಲ್ಲಿ ಜೀವಂತವಿದ್ದು, ಮಹಿಳೆಯರ ಬದುಕನ್ನು ಮುಕ್ಕಿ ತಿನ್ನುತ್ತಿರುವ ವಾಸ್ತವವನ್ನು ಈ ಆತ್ಮಹತ್ಯೆ ತೆರೆದಿಟ್ಟಿದೆ. ದೇಶ ಆರ್ಥಿಕ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಪ್ರತೀ ಕುಟುಂಬಗಳು ಬೇರೆ ಬೇರೆ ರೀತಿಯ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ಅದರ ನೇರ ಪರಿಣಾಮವನ್ನು ಅನುಭವಿಸುವವಳು ಹೆಣ್ಣು. ಅದ್ದೂರಿ ಮದುವೆ, ಅದಕ್ಕೆ ಪೂರಕವಾಗಿರುವ ಇನ್ನಿತರ ಕಾರ್ಯಕ್ರಮಗಳ ಬಳಿಕ ಎದುರಾಗುವ ಖರ್ಚು ವೆಚ್ಚಗಳಿಗೂ ಹೆಣ್ಣೇ ತಲೆ ಕೊಡಬೇಕಾಗಿದೆ.

ಇಂದು ‘ಮದುವೆ’ಯ ಮರೆಯಲ್ಲೇ ವ್ಯವಹಾರಗಳು ಕುದುರುತ್ತಿರುವುದನ್ನು ಕಾನೂನು ಕಂಡೂ ಕಾಣದಂತೆ ವರ್ತಿಸುತ್ತಿದೆ. ಅರವತ್ತು ವರ್ಷಗಳ ಹಿಂದೆ, ವರದಕ್ಷಿಣೆ ಎಂಬ ಕೆಟ್ಟ ಸಂಪ್ರದಾಯವನ್ನು ಸಮಾಜದಿಂದ ಹೋಗಲಾಡಿಸುವುದಕ್ಕಾಗಿ ಹಾಗೂ ವಿವಾಹಿತ ಮಹಿಳೆಯರ ಮೇಲೆ ವರದಕ್ಷಿಣೆಗಾಗಿ ನಡೆಯುತ್ತಿದ್ದ ಹಿಂಸೆ ಮತ್ತು ವರದಕ್ಷಿಣೆ ಸಾವುಗಳನ್ನು ತಡೆಯುವುದಕ್ಕಾಗಿ ‘ವರದಕ್ಷಿಣೆ ನಿಷೇಧ ಕಾಯ್ದೆ’ಯನ್ನು ಜಾರಿಗೆ ತರಲಾಯಿತು. ಕಾಯ್ದೆಗೆ 1961 ಮೇ 20ರಂದು ಭಾರತದ ರಾಷ್ಟ್ರಪತಿ ತನ್ನ ಅಂಕಿತ ಹಾಕಿದರು ಹಾಗೂ 1961 ಜುಲೈ 1ರಂದು ಅದು ಜಾರಿಗೆ ಬಂತು. ಆದರೆ, ಇಂದು ನಾವು 21ನೇ ಶತಮಾನದಲ್ಲಿದ್ದರೂ ಈ ಪಿಡುಗನ್ನು ತೊಡೆದುಹಾಕುವಲ್ಲಿ ಯಶಸ್ವಿಯಾಗಿಲ್ಲ. ವರದಕ್ಷಿಣೆಯ ಹೆಸರಿನಲ್ಲಿ ತುಂಬಾ ಕುಟುಂಬಗಳು ನಾಶಗೊಂಡಿವೆ ಹಾಗೂ ಮದುವೆ ವಯಸ್ಸಿನ ಹುಡುಗಿಯರ ಹೆತ್ತವರು ಸಾಲಗಳಲ್ಲಿ ಮುಳುಗಿದ್ದಾರೆ. ಮಹಾರಾಷ್ಟ್ರ ರಾಜ್ಯದಲ್ಲಿ ಪ್ರತೀ ವರ್ಷ 200ಕ್ಕೂ ಅಧಿಕ ವರದಕ್ಷಿಣೆ ಸಾವುಗಳು ದಾಖಲಾಗುತ್ತಿವೆ. ಆರ್‌ಟಿಐ ಕಾಯ್ದೆಯ ಅಡಿಯಲ್ಲಿ ಪಡೆದುಕೊಂಡ ಮಾಹಿತಿಗಳ ಪ್ರಕಾರ, 2016-17, 2017-18 ಮತ್ತು 2018-19ರ ಅವಧಿಗಳಲ್ಲಿ ಕ್ರಮವಾಗಿ 248, 234 ಮತ್ತು 214 ವರದಕ್ಷಿಣೆ ಸಾವುಗಳು ದಾಖಲಾಗಿವೆ. ಮುಂಬೈಯಂಥ ಮಹಾನಗರಗಳಲ್ಲಿರುವ ಹಾಗೂ ಆರ್ಥಿಕವಾಗಿ ಸ್ವತಂತ್ರರಾಗಿರುವ ಸುಶಿಕ್ಷಿತ ಉದ್ಯೋಗಸ್ಥ ಮಹಿಳೆಯರು ವರದಕ್ಷಿಣೆ ಕಾರಣಕ್ಕಾಗಿ ಹಿಂಸೆ ಮತ್ತು ದೌರ್ಜನ್ಯಗಳಿಗೆ ಒಳಪಡುವುದಿಲ್ಲ ಎನ್ನುವುದು ಸಾಮಾನ್ಯ ಗ್ರಹಿಕೆಯಾಗಿದೆ. ಆದರೆ, ಇದು ತಪ್ಪು ಅಭಿಪ್ರಾಯ ಎನ್ನುವುದನ್ನು ವರದಕ್ಷಿಣೆ ಪ್ರಕರಣಗಳಿಗೆ ಸಂಬಂಧಿಸಿದ ಅಂಕಿಅಂಶಗಳು ತಿಳಿಸುತ್ತವೆ. ಮುಂಬೈ ನಗರದಲ್ಲಿ, 2018ರ ಮೊದಲ 10 ತಿಂಗಳುಗಳಲ್ಲಿ 26 ವರದಕ್ಷಿಣೆ ಸಾವುಗಳು ದಾಖಲಾದವು. ಅವುಗಳ ಪೈಕಿ 2 ಕೊಲೆಗಳು, 16 ಆತ್ಮಹತ್ಯೆಗಳು ಮತ್ತು 8 ಅಸಹಜ ಸಂಶಯಾಸ್ಪದ ಸಾವುಗಳಾಗಿದ್ದವು. ಅದೇ ಅವಧಿಯಲ್ಲಿ ವರದಕ್ಷಿಣೆಗಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ 421 ದೂರುಗಳನ್ನು ದಾಖಲಿಸಲಾಗಿತ್ತು. 2012-14ರ ಅವಧಿಯಲ್ಲಿ ಭಾರತದಲ್ಲಿ 24,771 ವರದಕ್ಷಿಣೆ ಸಾವು ಪ್ರಕರಣಗಳು ದಾಖಲಾದವು. ಅಂದರೆ, ಪ್ರತೀ ದಿನ ಸರಾಸರಿ 34 ವರದಕ್ಷಿಣೆ ಸಾವುಗಳು ನಡೆದಿದ್ದವು. ಇದು ಅತ್ಯಂತ ಆಘಾತಕಾರಿ ವರದಿಯಾಗಿದೆ.

 ಕಾನೂನಿನಲ್ಲಿ ‘‘ವರದಕ್ಷಿಣೆ’ಯನ್ನು ಹೀಗೆ ನಿರೂಪಿಸಲಾಗಿದೆ: ‘‘ಮದುವೆಗೆ ಸಂಬಂಧಿಸಿ ಒಂದು ಪಕ್ಷವು ಇನ್ನೊಂದು ಪಕ್ಷಕ್ಕೆ ಮದುವೆಗೆ ಮುಂಚಿತವಾಗಿ ಅಥವಾ ನಂತರ ಯಾವುದೇ ಸಮಯದಲ್ಲಿ ಕೊಡುವ ಅಥವಾ ಕೊಡಲು ಒಪ್ಪುವ ಯಾವುದೇ ಆಸ್ತಿ ಅಥವಾ ಬೆಲೆಬಾಳುವ ವಸ್ತುಗಳು’’. ವರದಕ್ಷಿಣೆ ಪದ್ಧತಿಯು ಭಾರತೀಯ ಸಂವಿಧಾನದಲ್ಲಿರುವ ಸಮಾನತೆಯ ತತ್ವವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತದೆ. ವರ ಮತ್ತು ವಧು ಇಬ್ಬರಿಗೂ ಮದುವೆಯ ಅಗತ್ಯವಿದ್ದರೂ, ವಧುವಿಗೆ ಮಾತ್ರ ಮದುವೆಯ ಅಗತ್ಯವಿತ್ತೆಂದು ಭಾವಿಸಲಾಗುತ್ತದೆ. ಮದುವೆ ಸಮಾರಂಭದಲ್ಲಿ ವರನ ಕಡೆಯವರು ಉನ್ನತ ಸ್ಥಾನಮಾನವನ್ನು ಪಡೆಯುತ್ತಾರೆ ಹಾಗೂ ವಧುವಿನ ಕಡೆಯವರನ್ನು ಕೀಳು ಎಂಬುದಾಗಿ ಪರಿಗಣಿಸಲಾಗುತ್ತದೆ. ವರ ಮತ್ತು ಆತನ ಕುಟುಂಬ ಸದಸ್ಯರಿಗೆ ವಧುವಿನ ಹೆತ್ತವರು ಬೆಲೆಬಾಳುವ ಉಡುಗೊರೆಗಳನ್ನು ಕೊಡುವುದು ಪದ್ಧತಿಯಾಗಿದೆ.

ವರದಕ್ಷಿಣೆ ಸ್ವೀಕರಿಸುವ ಮೂಲಕ ಕಾಯ್ದೆಯನ್ನು ಉಲ್ಲಂಘಿಸುವವರಿಗೆ ಈ ಕಾನೂನು 5 ವರ್ಷಗಳ ಜೈಲು ಶಿಕ್ಷೆ ಮತ್ತು 15,000 ರೂಪಾಯಿ ದಂಡ ವಿಧಿಸುತ್ತದೆ. ವರದಕ್ಷಿಣೆಯ ಮೊತ್ತ 15,000ಕ್ಕಿಂತ ಹೆಚ್ಚಾಗಿದ್ದರೆ ದಂಡದ ಮೊತ್ತವನ್ನೂ ಅದಕ್ಕೆ ಅನುಗುಣವಾಗಿ ಹೆಚ್ಚಿಸಲಾಗುತ್ತದೆ.ಅದೂ ಅಲ್ಲದೆ, ಮದುವೆಗೆ ಶರತ್ತಾಗಿ ಆಸ್ತಿಯಲ್ಲಿ ಪಾಲು ಕೇಳುವುದು ಅಥವಾ ಉದ್ಯಮದಲ್ಲಿ ಭಾಗೀದಾರಿಕೆ ನೀಡಬೇಕೆಂದು ಒತ್ತಾಯಿಸುವುದನ್ನೂ ಕಾಯ್ದೆ ನಿಷೇಧಿಸುತ್ತದೆ. ಕಾಯ್ದೆಯ ಈ ವಿಧಿಯ ಉಲ್ಲಂಘನೆಗೆ ಕನಿಷ್ಠ ಆರು ತಿಂಗಳ ಜೈಲು ಶಿಕ್ಷೆ ನೀಡಬಹುದಾಗಿದೆ.ಕಾಯ್ದೆಯ 4ನೇ ವಿಧಿಯ ಪ್ರಕಾರ, ವರದಕ್ಷಿಣೆಗಾಗಿ ಕೇವಲ ಬಾಯಿ ಮಾತಿನಲ್ಲಿ ಬೇಡಿಕೆ ಸಲ್ಲಿಸಿದರೂ ಅಪರಾಧವಾಗುತ್ತದೆ ಹಾಗೂ ಅದು ನ್ಯಾಯಾಲಯದಲ್ಲಿ ಸಾಬೀತಾದರೆ ಆರು ತಿಂಗಳಿಂದ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಬಹುದಾಗಿದೆ. 4(ಎ) ವಿಧಿಯ ಪ್ರಕಾರ, ಪತ್ರಿಕೆಗಳ ಮದುವೆ ಸಂಬಂಧಗಳ ಅಂಕಣಗಳಲ್ಲಿ ಈ ಬೇಡಿಕೆಗಳೊಂದಿಗೆ ಜಾಹೀರಾತು ನೀಡುವುದು ಅಪರಾಧವಾಗುತ್ತದೆ ಹಾಗೂ ಅದಕ್ಕೆ ಆರು ತಿಂಗಳಿಂದ 5 ವರ್ಷಗಳವರೆಗಿನ ಜೈಲು ಶಿಕ್ಷೆ ಮತ್ತು 15,000 ರೂ. ದಂಡ ವಿಧಿಸಬಹುದಾಗಿದೆ.

ಆದರೆ ಶಿಕ್ಷೆಯ ಬೆದರಿಕೆಯನ್ನು ಮುಂದಿಟ್ಟುಕೊಂಡು ವರದಕ್ಷಿಣೆಯನ್ನು ಇಲ್ಲವಾಗಿಸಲು ಸಾಧ್ಯವಿಲ್ಲ ಎನ್ನುವುದು ಈಗಾಗಲೇ ಸಾಬೀತಾಗಿದೆ. ಜೊತೆಗೆ , ಈ ದೇಶದಲ್ಲಿ ವಿದ್ಯಾವಂತರು, ಸ್ವಾವಲಂಬಿಗಳು ಎಂದು ಬೀಗುವ ಮಹಿಳೆಯರೂ ಬೇರೆ ಬೇರೆ ರೂಪದಲ್ಲಿ ಅವರಿಗೇ ಅರಿವಿಲ್ಲದಂತೆ ವರದಕ್ಷಿಣೆಗೆ ಬಲಿಯಾಗುತ್ತಿದ್ದ್ತಾರೆ. ಕಚೇರಿಗಳಲ್ಲಿ ದುಡಿಯುತ್ತಾ ಪತಿಗೆ ಕಂತಿನಲ್ಲಿ ವರದಕ್ಷಿಣೆ ಹಣವನ್ನು ಪಾವತಿಸಿ, ತಿಂಗಳ ವೇತನದಲ್ಲಿ ಹಕ್ಕುಗಳೇ ಇರದೇ ಶೋಷಣೆಗೊಳಗಾಗುವವರು ನಮ್ಮ ನಡುವೆ ಇದ್ದಾರೆ. ಇದನ್ನು ವರದಕ್ಷಿಣೆಯ ಕಿರುಕುಳವೆಂದು ಆರೋಪಿಸುವ ಹಕ್ಕೂ ಅವರಿಗಿರುವುದಿಲ್ಲ. ಎಲ್ಲಿಯವರೆಗೆ ಹೆಣ್ಣಿನ ಕುರಿತಂತೆ ಸಮಾಜದ ಮನಸ್ಥಿತಿ ಬದಲಾಗುವುದಿಲ್ಲವೋ ಅಲ್ಲಿಯವರೆಗೆ ಮದುವೆ ಎನ್ನುವುದು ಹೆಣ್ಣಿಗೆ ಗಂಡು ಮಾಡುವ ಬಹುದೊಡ್ಡ ಉಪಕಾರ ಎನ್ನುವ ಮನೋಭಾವ ಸಮಾಜದಲ್ಲಿ ಜೀವಂತವಿರುತ್ತದೆ. ಮದುವೆ ಎನ್ನುವುದು ಗಂಡು-ಹೆಣ್ಣು ಇಬ್ಬರ ಅವಶ್ಯಕತೆ. ಇಲ್ಲಿ ಇಬ್ಬರೂ ಜೊತೆ ಜೊತೆಗೆ ಸಂಸಾರದ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕು. ಮನೆಯನ್ನು ನಿಭಾಯಿಸುವ ಹೆಣ್ಣಿನ ಹೊಣೆಗಾರಿಕೆಗಳನ್ನು ಗೌರವದಿಂದ ಕಾಣುವ ಮನಸ್ಥಿತಿ ಸಮಾಜದ್ದಾಗಿರಬೇಕು ಅಥವಾ ಹೆಣ್ಣು ನಿರ್ವಹಿಸುವ ಗೃಹ ನಿರ್ವಹಣೆಗೆ ಕಡ್ಡಾಯ ಕನಿಷ್ಠ ವೇತನವೊಂದನ್ನು ಕಾನೂನಿನ ಮೂಲಕ ಜಾರಿಗೊಳಿಸಬೇಕು. ಯಾವಾಗ ಹೆಣ್ಣು ಮನೆಯೊಳಗೆ ನಿರ್ವಹಿಸುವ ಕೆಲಸ ಕಾರ್ಯಗಳು ಆರ್ಥಿಕ ಮಾನ್ಯತೆಯನ್ನು ಪಡೆಯುತ್ತದೆಯೋ ಸಹಜವಾಗಿಯೇ ಆಕೆಯನ್ನು ಕುಟುಂಬ ಗೌರವದಿಂದ ಕಾಣ ತೊಡಗುತ್ತದೆ.

ಇದೇ ಸಂದರ್ಭದಲ್ಲಿ, ಹೆಣ್ಣು ಕಚೇರಿ ಕೆಲಸವನ್ನು ನಿರ್ವಹಿಸುತ್ತಿದ್ದಾಳೆ ಎಂದಾದರೆ, ಮನೆಗೆಲಸದ ಅರ್ಧಭಾಗವನ್ನು ಕಡ್ಡಾಯವಾಗಿ ಗಂಡು ಹೊರುವಂತಿರಬೇಕು. ಇವೆಲ್ಲವೂ ಕಾನೂನಿನ ಮಾನ್ಯತೆ ಪಡೆದಾಗ ಗಂಡು-ಹೆಣ್ಣು ಪರಸ್ಪರ ಹೊಂದಾಣಿಕೆಯಿಂದ, ಕೊಡುಕೊಳ್ಳುವಿಕೆಯಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ. ಸಂಸಾರದಲ್ಲಿ ಯಾರು ಕೀಳು ಅಲ್ಲ, ಮೇಲೂ ಅಲ್ಲ. ಹೆಣ್ಣು ಗೃಹ ಕೃತ್ಯಕ್ಕೆ ಮಾತ್ರ ಸೀಮಿತ ಎನ್ನುವ ಭಾವನೆಯೂ ತರವಲ್ಲ. ಒಂದು ವೇಳೆ ಹೆಣ್ಣು ಸಂಸಾರದಲ್ಲಿ ಗೃಹ ಕೃತ್ಯಗಳ ಹೊಣೆಹೊತ್ತುಕೊಂಡಿದ್ದರೆ ಆ ಕೆಲಸ, ಗಂಡು ಕಚೇರಿಯಲ್ಲಿ ನಡೆಸುವ ಕೆಲಸದಷ್ಟೇ ಅಥವಾ ಅದಕ್ಕಿಂತಲೂ ಮುಖ್ಯವಾದದ್ದು ಎನ್ನುವುದನ್ನು ಗಂಡಿಗೆ ಮತ್ತು ಆತನ ಕುಟುಂಬಕ್ಕೆ ಮನವರಿಕೆಯಾಗಬೇಕು. ಹೆಣ್ಣು ತಾಯಿಯಾಗಿ ಮಗುವನ್ನು ಹೆತ್ತು, ಅದನ್ನು ಲಾಲಿಸಿ, ಮೊಲೆ ಊಡಿಸಿ ಪಾಲಿಸುವ ಹೊಣೆಗಾರಿಕೆಗೆ ಯಾವ ಬೆಲೆಯನ್ನು ಕಟ್ಟುವುದು ಸಾಧ್ಯವಿಲ್ಲ ಮಾತ್ರವಲ್ಲ, ಗಂಡಿಗೆ ಅದನ್ನು ನಿರ್ವಹಿಸುವ ಯಾವ ಶಕ್ತಿಯನ್ನೂ ಪ್ರಕೃತಿ ನೀಡಿಲ್ಲ. ಪ್ರಾಕೃತಿಕವಾಗಿ ಹೆಣ್ಣಿಗೆ ಗಂಡಿಗಿಂತ ಹೆಚ್ಚು ಸಾಮರ್ಥ್ಯವನ್ನು ಪ್ರಕೃತಿ ನೀಡಿದೆ. ಇದನ್ನು ಪುರುಷ ಒಪ್ಪಿಕೊಂಡ ದಿನ, ಮದುವೆ ಎಲ್ಲ ವ್ಯವಹಾರಗಳಾಚೆಗೆ, ಎರಡು ಮನಸ್ಸುಗಳನ್ನು ಬೆಸೆವ ಅರ್ಥಪೂರ್ಣ ಕಾರ್ಯಕ್ರಮವಾಗಿ ಬದಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News