ಕರ್ನಾಟಕದ ‘ನೇತ್ರಾಣಿ’ ಈಗ ಸ್ಕೂಬಾ ಪ್ರಿಯರ ಸ್ವರ್ಗ!
ಕಾರವಾರ: ಒಂದು ಕಾಲದಲ್ಲಿ ಯುದ್ಧದ ತಾಲೀಮು, ಬಾಂಬ್ ಸ್ಫೋಟಗಳ ಸದ್ದಿಗೆ ನಲುಗಿದ್ದ ಆ ಪುಟ್ಟ ದ್ವೀಪ, ಇಂದು ಮೌನವಾಗಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಇದು ಕಡಲತೀರದ ಕಥೆ ಮಾತ್ರವಲ್ಲ, ಪ್ರಕೃತಿಯ ಪುನಶ್ಚೇತನದ ಯಶೋಗಾಥೆ. ಅದೇ ‘ನೇತ್ರಾಣಿ ದ್ವೀಪ’.
ಒಮ್ಮೆ ನೌಕಾನೆಲೆಯ ಗುರಿ ಅಭ್ಯಾಸಕ್ಕೆ ಸೀಮಿತವಾಗಿದ್ದ ಈ ತಾಣ, ಇಂದು ಥೈಲ್ಯಾಂಡ್ ಅಥವಾ ಅಂಡಮಾನ್‌ನಷ್ಟೇ ಸುಂದರವಾದ, ಭಾರತದ ಅತ್ಯುತ್ತಮ ಸ್ಕೂಬಾ ಡೈವಿಂಗ್‌ತಾಣವಾಗಿ ಬದಲಾಗಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ.
ಅಂಡಮಾನ್ ಅಲ್ಲ, ಇದು ನಮ್ಮ ಮುರುಡೇಶ್ವರ :
ಭಟ್ಕಳ ತಾಲೂಕಿನ ಮುರುಡೇಶ್ವರದಿಂದ ಸುಮಾರು 23 ಕಿ.ಮೀ. ದೂರದಲ್ಲಿರುವ ನೇತ್ರಾಣಿ ನಡುಗಡ್ಡೆ ಈಗ ಜಾಗತಿಕ ಭೂಪಟದಲ್ಲಿ ಗುರುತಿಸಿಕೊಂಡಿದೆ. ಬರೀ ವಿದೇಶಗಳಲ್ಲಿ ಮಾತ್ರ ಕಾಣಸಿಗುವ ಅಪರೂಪದ ಹವಳದ ದಿಬ್ಬಗಳು, ಬಣ್ಣ ಬಣ್ಣದ ಮೀನುಗಳು ಮತ್ತು ಸ್ಫಟಿಕದಷ್ಟು ತಿಳಿಯಾದ ನೀಲಿ ನೀರು ಇಲ್ಲಿನ ವಿಶೇಷ.
ನೀರಿನ ಆಳದಲ್ಲಿ ಸುಮಾರು 15 ರಿಂದ 20 ಮೀಟರ್ ಇಳಿಯುತ್ತಿದ್ದಂತೆ, ನಿಮಗೆ ಬೇರೆಯೇ ಪ್ರಪಂಚದ ದರ್ಶನವಾಗುತ್ತದೆ. ಅಪರೂಪದ ಜಲಚರವಾದ ಬಟರ್‌ಫ್ಲೈ ಫಿಶ್, ಪ್ಯಾರಟ್ ಫಿಶ್, ಏಂಜೆಲ್ ಫಿಶ್, ಮುರ್ರೆ ಈಲ್ಸ್ ಮತ್ತು ಆಮೆಗಳಂತಹ ಸಾವಿರಾರು ಜಲಚರಗಳು ನಿಮ್ಮ ಕಣ್ಣೆದುರೇ ಹಾದು ಹೋಗುತ್ತವೆ.
ಸಮುದ್ರದ ತಳದಲ್ಲಿ ಬೆಳೆದಿರುವ ಬಗೆಬಗೆಯ ಹವಳಗಳು ಮತ್ತು ಬಂಡೆಗಳ ರಚನೆ ಎಂಥವರನ್ನೂ ಮೂಕವಿಸ್ಮಿತರನ್ನಾಗಿಸುತ್ತದೆ. ಅನೇಕರಿಗೆ ಸಮುದ್ರದಾಳಕ್ಕೆ ಇಳಿಯುವ ಆಸೆ ಇರುತ್ತದೆ, ಆದರೆ ಈಜು ಬರುವುದಿಲ್ಲ ಎಂಬ ಅಳುಕು. ಆದರೆ ನೇತ್ರಾಣಿಯಲ್ಲಿ ಆ ಚಿಂತೆ ಬೇಡ. ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮದಂತೆ, ಆಕ್ಸಿಜನ್ ಸಿಲಿಂಡರ್ ಸೇರಿದಂತೆ ಅತ್ಯಾಧುನಿಕ ಸುರಕ್ಷತಾ ಉಪಕರಣಗಳನ್ನು ಬಳಸಲಾಗುತ್ತದೆ. ನೀರಿನ ಆಳದಲ್ಲಿ ಸನ್ನೆಗಳ ಮೂಲಕ ಸಂವಹನ ನಡೆಸುತ್ತಾ, ತಜ್ಞರು ನಿಮ್ಮನ್ನು ಸುರಕ್ಷಿತವಾಗಿ ಕರೆದೊಯ್ಯುತ್ತಾರೆ. ಒಂದು ಕಾಲದಲ್ಲಿ ಸೀಬರ್ಡ್ ನೌಕಾನೆಲೆಯ ಸಮರಾಭ್ಯಾಸದಿಂದಾಗಿ ಇಲ್ಲಿನ ಜಲಚರಗಳಿಗೆ ಕುತ್ತು ಬಂದಿತ್ತು. ಮೀನುಗಾರರ ಜೀವನಕ್ಕೂ ತೊಂದರೆಯಾಗಿತ್ತು. ಆದರೆ ಸ್ಥಳೀಯರ ಮತ್ತು ಪರಿಸರವಾದಿಗಳ ಹೋರಾಟಕ್ಕೆ ಮಣಿದು, ಅಂದಿನ ಜಿಲ್ಲಾಡಳಿತ ಮತ್ತು ಸರಕಾರ ಕೈಗೊಂಡ ದಿಟ್ಟ ನಿರ್ಧಾರದಿಂದಾಗಿ, ಇಂದು ನೇತ್ರಾಣಿ ಯುದ್ಧಭೂಮಿಯಿಂದ ಪ್ರವಾಸೋದ್ಯಮದ ಕೇಂದ್ರವಾಗಿ ಬದಲಾಗಿದೆ. ಅಂದಿನ ಬಾಂಬ್ ದಾಳಿಯ ಕುರುಹುಗಳು ದ್ವೀಪದ ಬಂಡೆಗಳ ಮೇಲೆ ಇಂದಿಗೂ ಕಾಣಸಿಗುತ್ತವೆ.
ಹೋಗುವುದು ಹೇಗೆ? :
ನೀವು ಮುರುಡೇಶ್ವರಕ್ಕೆ ಬಂದು, ಅಲ್ಲಿಂದ ಅಧಿಕೃತ ಸ್ಕೂಬಾ ಡೈವಿಂಗ್ ಏಜೆನ್ಸಿಗಳ ಮೂಲಕ ಆನ್‌ಲೈನ್ ಬುಕ್ಕಿಂಗ್ ಮಾಡಿಕೊಳ್ಳಬಹುದು. ಬೋಟ್ ಮೂಲಕ ಸುಮಾರು ಒಂದು ಗಂಟೆಯ ಪಯಣದ ನಂತರ ನೇತ್ರಾಣಿಯ ನೀಲಿ ಜಗತ್ತು ನಿಮಗೆ ಸ್ವಾಗತ ಕೋರುತ್ತದೆ.