ಗೋವಿಂದ ಪನ್ಸಾರೆ ಹತ್ಯೆ ಪ್ರಕರಣದ ತನಿಖೆಯ ಪ್ರಗತಿ ವರದಿ ಸಲ್ಲಿಸಲು ಸಿಐಡಿಗೆ ಹೈಕೋರ್ಟ್ ಸೂಚನೆ

Update: 2022-07-07 12:39 GMT

ಮುಂಬೈ: ವಿಚಾರವಾದಿ ಗೋವಿಂದ ಪನ್ಸಾರೆ ಅವರ ಹತ್ಯೆಯ ತನಿಖೆಯ ಪ್ರಗತಿಯ ಕುರಿತು ವರದಿ ಸಲ್ಲಿಸುವಂತೆ ಮಹಾರಾಷ್ಟ್ರ ಪೊಲೀಸರ ಸಿಐಡಿ ವಿಭಾಗಕ್ಕೆ ಬಾಂಬೆ ಹೈಕೋರ್ಟ್ ಇಂದು ಆದೇಶಿಸಿದೆ.

ಗೋವಿಂದ ಪನ್ಸಾರೆ ಅವರ ಹತ್ಯೆ 2015ರಲ್ಲಿ ನಡೆದಿತ್ತು. ತನಿಖೆಯ ಸ್ಥಿತಗತಿ ವರದಿಯನ್ನು ಈ ಹಿಂದೆ 2020ರಲ್ಲಿ ಸಿಐಡಿ ಸಲ್ಲಿಸಿತ್ತು. 2020ರಿಂದ ಇಲ್ಲಿಯ ತನಕ ತನಿಖೆಯ ವರದಿಯನ್ನು ನಾಲ್ಕು ವಾರಗಳೊಳಗೆ ಸಲ್ಲಿಸಬೇಕು ಎಂದು ಜಸ್ಟಿಸ್  ರೇವತಿ ಮೋಹಿತೆ-ಡೇರೆ ಅವರ ನೇತೃತ್ವದ ಪೀಠ ಇಂದು ಸೂಚಿಸಿದೆ.

ಪನ್ಸಾರೆ ಅವರ ಹತ್ಯೆ ನಡೆದು ಏಳು ವರ್ಷಗಳೇ ಸಂದಿದ್ದರೂ ಪೊಲೀಸರು ತನಿಖೆಯಲ್ಲಿ ಇನ್ನು ಪ್ರಗತಿ ಕಂಡಿಲ್ಲ ಎಂದು ಅವರ ಕುಟುಂಬದ ಸದಸ್ಯರ ಪರ ವಕೀಲರು ದೂರಿದ ನಂತರ ಹೈಕೋರ್ಟ್ ನಿರ್ದೇಶನ ಬಂದಿದೆ.

ಗೋವಿಂದ ಪನ್ಸಾರೆ ಮತ್ತು ಇನ್ನೊಬ್ಬ ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರ ಹತ್ಯೆಗಳಿಗೆ ಸಂಬಂಧಿಸಿದಂತೆ ಕೋರ್ಟ್ ಉಸ್ತುವಾರಿಯಲ್ಲಿ ತನಿಖೆ ನಡೆಸಬೇಕೆಂದು ಕೋರಿ ಅವರ ಕುಟುಂಬ ಸದಸ್ಯರು ಸಲ್ಲಿಸಿದ್ದ ಹಲವು ಅರ್ಜಿಗಳ ವಿಚಾರಣೆ ಹೈಕೋರ್ಟ್ ನಡೆಸುತ್ತಿದೆ.

ದಾಭೋಲ್ಕರ್ ಹತ್ಯೆ ತನಿಖೆಯನ್ನು ಸಿಬಿಐ ನಡೆಸುತ್ತಿದ್ದರೆ ಪನ್ಸಾರೆ ಹತ್ಯೆ ಘಟನೆಯನ್ನು ಮಹಾರಾಷ್ಟ್ರ ಪೊಲೀಸರ ಸಿಐಡಿ ವಿಭಾಗದ ಸಿಟ್ ನಡೆಸುತ್ತಿದೆ.

ಪನ್ಸಾರೆ ಪ್ರಕರಣದ ಪ್ರಸ್ತುತ ತನಿಖಾಧಿಖಾರಿಯಾಗಿರುವ ಹೆಚ್ಚುವರಿ ಎಸ್‍ಪಿ ತಿರುಪತಿ ಕಾಕಡೆ ಅವರನ್ನು ಈ ಪ್ರಕರಣದ ತನಿಖೆಯಿಂದ ಬಿಡುಗಡೆಗೊಳಿಸಲು ಹೈಕೋರ್ಟ್ ಪೀಠ ರಾಜ್ಯ ಸರಕಾರಕ್ಕೆ ಅನುಮತಿಸಿದೆ.

 ನಾಲ್ಕೂವರೆ ವರ್ಷಗಳ ಕಾಲ ತನಿಖೆಯ ನೇತೃತ್ವ ವಹಿಸಿದ್ದ ಕಾಕಡೆ ಅವರು ವರ್ಗಾವಣೆಯಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News