​ ಐಎಂಎಫ್ ನ ಮಾಜಿ ಮುಖ್ಯ ಅರ್ಥಶಾಸ್ತ್ರಜ್ಞರ ಸಾಲಿನಲ್ಲಿ ಸೇರ್ಪಡೆಗೊಂಡ ಗೀತಾ ಗೋಪೀನಾಥನ್

Update: 2022-07-07 16:25 GMT

ನ್ಯೂಯಾರ್ಕ್, ಜು.7: ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯ 2ನೇ ಮುಖ್ಯ ಹುದ್ದೆಯಾದ ಪ್ರಥಮ ಉಪವ್ಯವಸ್ಥಾಪಕ ನಿರ್ದೇಶಕಿಯಾಗಿ ನೇಮಕಗೊಂಡಿರುವ ಭಾರತೀಯ ಮೂಲದ ಗೀತಾ ಗೋಪೀನಾಥ್ , ಇದೀಗ ಮತ್ತೊಂದು ಹಿರಿಮೆಗೆ ಪಾತ್ರವಾಗಿದ್ದಾರೆ. ಐಎಂಎಫ್ನ ಮಾಜಿ ಮುಖ್ಯ ಅರ್ಥಶಾಸ್ತ್ರಜ್ಞರ ಫೋಟೋ ಇರುವ ವಿಭಾಗದಲ್ಲಿ ಗೀತಾ ಅವರೂ ಸ್ಥಾನ ಪಡೆಯುವ ಮೂಲಕ ಮತ್ತೊಂದು ದಾಖಲೆ ಬರೆದಿದ್ದಾರೆ.
 ಐಎಂಎಫ್ನ ಮಾಜಿ ಮುಖ್ಯ ಅರ್ಥಶಾಸ್ತ್ರಜ್ಞರ ಫೋಟೋ ಇರುವ ಗೋಡೆಯಲ್ಲಿ ಸ್ಥಾಪಿಸಲಾಗಿರುವ ತನ್ನ ಫೊಟೋದ ಜತೆ ನಿಂತುಕೊಂಡಿರುವ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿಕೊಂಡಿರುವ ಗೀತಾ, ‘ಬ್ರೇಕಿಂಗ್ ದಿ ಟ್ರೆಂಡ್... ನಾನು ಐಎಂಎಫ್ನ ಮಾಜಿ ಮುಖ್ಯ ಅರ್ಥಶಾಸ್ತ್ರಜ್ಞರ ಸಾಲಿಗೆ ಸೇರ್ಪಡೆಯಾಗಿದ್ದೇನೆ ’ ಎಂಬ ಶೀರ್ಷಿಕೆ ನೀಡಿದ್ದಾರೆ.
 ಈ ಪ್ರತಿಷ್ಠಿತರ ಸಾಲಿನಲ್ಲಿ ಸ್ಥಾನ ಪಡೆದಿರುವ ಏಕೈಕ ಮಹಿಳೆ ಎಂಬ ಹೆಗ್ಗಳಿಕೆ ಇವರದ್ದಾಗಿದೆ. 2019ರಿಂದ 2022ರ ಅವಧಿಯಲ್ಲಿ ಗೀತಾ ಗೋಪೀನಾಥ್ ಐಎಂಎಫ್ನ ಅರ್ಥಶಾಸ್ತ್ರಜ್ಞರಾಗಿ ಕಾರ್ಯ ನಿರ್ವಹಿಸಿದ್ದರು. ಈ ವರ್ಷದ ಆರಂಭದಲ್ಲಿ ಐಎಂಎಫ್ನ ಪ್ರಥಮ ಉಪವ್ಯವಸ್ಥಾಪಕ ನಿರ್ದೇಶಕಿಯಾಗಿ (ಪದೋನ್ನತಿ) ನೇಮಕಗೊಂಡಿದ್ದರು. ‘ ಗೀತಾ ಗೋಪೀನಾಥ್ ಅವರು ಸಿಬ್ಬಂದಿಯ ಕೆಲಸದ ಮೇಲ್ವಿಚಾರಣೆ, ಬಹುಪಕ್ಷೀಯ ವೇದಿಕೆಯಲ್ಲಿ ಐಎಂಎಫ್ನ ಪ್ರತಿನಿಧಿಯಾಗಿ, ಸದಸ್ಯ ಸರಕಾರಗಳು ಹಾಗೂ ಆಡಳಿತ ಮಂಡಳಿಯ ಸದಸ್ಯರು, ಮಾಧ್ಯಮ ಹಾಗೂ ಇತರ ಸಂಸ್ಥೆಗಳ ಜತೆ ಉನ್ನತ ಮಟ್ಟದ ಸಂಪರ್ಕ ನಿರ್ವಹಿಸುತ್ತಾರೆ. 
ಕಣ್ಗಾವಲು ಹಾಗೂ ಸಂಬಂಧಿತ ಕಾರ್ಯನೀತಿ ಕುರಿತ ಐಎಂಎಫ್ನ ಕೆಲಸವನ್ನು ಮುನ್ನಡೆಸುವ ಜತೆಗೆ ಸಂಶೋಧನೆ ಹಾಗೂ ಪ್ರಮುಖ ಪ್ರಕಟಣೆಗಳ ಮೇಲ್ವಿಚಾರಣೆ ನಡೆಸುತ್ತಾರೆ’ ಎಂದು ಐಎಂಎಫ್ನ ವೆಬ್ಸೈಟ್ನಲ್ಲಿ ಉಲ್ಲೇಖಿಸಲಾಗಿದೆ. ಗೀತಾ ಗೋಪೀನಾಥ್ ತೆರವುಗೊಳಿಸಿದ ಮುಖ್ಯ ಅರ್ಥಶಾಸ್ತ್ರಜ್ಞರ ಸ್ಥಾನಕ್ಕೆ ಪಿಯರೆ- ಒಲಿವಿಯರ್ರನ್ನು ನೇಮಕಗೊಳಿಸಲಾಗಿದೆ ಎಂದು ಐಎಂಎಫ್ ಪ್ರಕಟಣೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News