ಉಳ್ಳಾಲ : ತೀವ್ರಗೊಂಡ ಕಡಲ್ಕೊರೆತ; ಸಚಿವರು ಭೇಟಿ

Update: 2022-07-07 16:45 GMT

ಉಳ್ಳಾಲ: ಸೋಮೇಶ್ವರ, ಉಚ್ಚಿಲ ಬಟ್ಟಪ್ಪಾಡಿ, ಉಳ್ಳಾಲದ ಮೊಗವೀರ ಪಟ್ಣ  ಕಡಲ್ಕೊರೆತ ಪೀಡಿತ ಪ್ರದೇಶಗಳಿಗೆ ಕಂದಾಯ ಸಚಿವ ಆರ್ ಅಶೋಕ್, ಇಂಧನ ಸಚಿವ ಸುನಿಲ್ ಕುಮಾರ್ ಗುರುವಾರ ಭೇಟಿ ನೀಡಿದರು.

ಕಡಲ್ಕೊರೆತ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಸಚಿವ ಆರ್ ಅಶೋಕ್ ಅವರು, ಉಳ್ಳಾಲದಲ್ಲೂ ಕೂಡ ಕಡಲ್ಕೊರೆತ ಆಗಿ ಮೀನುಗಾರರ ಮನೆ ಬಿದ್ದು ಹೋಗಿದೆ. ಶಾಶ್ವತ ತಡೆಗೋಡೆ ಬಗ್ಗೆ ಸ್ಥಳೀಯರು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಈಗಾಗಲೇ ಒಂದು ಬಾರಿ ತಡೆಗೋಡೆ ವ್ಯವಸ್ಥೆ ಆಗಿದೆ. ಇದರ ಬಳಿಕ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಯಾವ ರೀತಿ ನಡೆಸಿದೆ ಎಂಬುದರ ಬಗ್ಗೆ  ತಿಳಿದು ಕ್ರಮ ಕೈಗೊಳ್ಳಲಾಗುವುದು. ಕಡಲು ವೇಗದಿಂದ ಕೊರೆಯುತ್ತಿದೆ. ಇದರಿಂದ ಮೀನುಗಾರರ ಸಹಿತ ವಾಸದ ಮನೆಗಳ ರಕ್ಷಣೆ ಆಗಬೇಕು. ಗೆಸ್ಟ್ ಹೌಸ್ ಗಿಂತ ಹೆಚ್ಚು ಮನೆಗಳ ರಕ್ಷಣೆಗೆ ಒತ್ತು ನೀಡಬೇಕು. ಮಳೆಗೆ ಹಾನಿಯಾದ ಮನೆಗೆ ತುರ್ತು ಪರಿಹಾರ ನೀಡಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇನೆ. ಏಳು ಜಿಲ್ಲೆಗಳಲ್ಲಿ ನಾಲ್ಕು ದಿನಗಳ ಕಾಲ ಮಳೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಕಾರಣ ದಿಂದ ಏಳು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಹಾನಿಯಾದರೆ ಸೂಕ್ತ ಪರಿಹಾರ ವ್ಯವಸ್ಥೆ ಒದಗಿಸಲು ಸೂಚನೆ ನೀಡಿದ್ದೇನೆ. ಮನೆ ಸಂಪೂರ್ಣ ಹಾನಿಯಾದರೆ ಐದು ಲಕ್ಷ ಪರಿಹಾರ ವ್ಯವಸ್ಥೆ ಸರ್ಕಾರ ಮಾಡಲಿದೆ. ಮನೆ ಕೇಳಿಕೊಂಡವರಿಗೆ ಪರ್ಯಾಯ ವ್ಯವಸ್ಥೆ ಸರ್ಕಾರ ಮಾಡಲಿದೆ. ಮನೆ ಕಳಕೊಂಡವರಿಗೆ NDRF ನ ನಿಯಮ ಪ್ರಕಾರ ಈ ಹಿಂದೆ 95,000 ಪರಿಹಾರ ಇದ್ದು ಮುಖ್ಯಂತ್ರಿಗಳಲ್ಲಿ ಮಾತನಾಡಿ ಅದನ್ನ 5 ಲಕ್ಷಕ್ಕೆ ಏರಿಸಿದ್ದೇವೆ. ಸಂತ್ರಸ್ತರಿಗೆ ಶೀಘ್ರ ಪರಿಹಾರ ಒದಗಿಸುವಂತೆ ಆದೇಶಿಸಿರುವುದಾಗಿ ಹೇಳಿದರು ಎಂದರು.

ಕಡಲ್ಕೊರೆತ ವಿಷಯಕ್ಕೆ ಸಂಬಂಧಿಸಿ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಕ್ಷೇತ್ರದ ಶಾಸಕ ಯುಟಿ ಖಾದರ್ ಆರೋಪಿಸುತ್ತಾರೆ ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಸರ್ಕಾರ ಬಂದು ಕೆಲವು ವರ್ಷಗಳು ಮಾತ್ರ ಆದದ್ದು. 60 ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ಇತ್ತು. ಆಗ ಕಡಲು ಇತ್ತು, ಕೊರೆಯುತ್ತಿತ್ತು. ಎನ್‌ಡಿಆರ್‌ಎಫ್ ಫಂಡ್ ನಿಂದ ಏನೆಲ್ಲಾ ಮಾಡಲು ಆಗುತ್ತದೆಯೇ ಅದನ್ನೆಲ್ಲ ಮಾಡುತ್ತೇವೆ. ಇದಕ್ಕೆ ಆಡಳಿತ ಪಕ್ಷ, ವಿರೋಧ ಪಕ್ಷ ಎಂಬುದಿಲ್ಲ. ಉಳ್ಳಾಲದ ಶಾಸಕ ಯು.ಟಿ.ಖಾದರ್ ಅವರು ಚುನಾವಣೆ ದೃಷ್ಟಿ ಮುಂದಿಟ್ಟು ಸುಮ್ನೆ ಆಪಾದನೆ ಮಾಡೋದನ್ನ ಬಿಡಲಿ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಈ ಪ್ರದೇಶಗಳಿಗೆ ಏನ್ ಮಾಡಿದ್ದಾರೆ ಎಂದು ಜನರಿಗೆ ತಿಳಿದಿದೆ. ಸರಕಾರದ ವಿರುದ್ಧ ಠೀಕೆ, ಟಿಪ್ಪಣಿ ಸಹಜ. ಇದೀಗ ಸ್ಥಳಕ್ಕೆ ಬಂದಿದ್ದೇವೆ. ಪರಿಶೀಲನೆ ಆಗಿದೆ. ನಾವು ರಾಜಕೀಯ ಮಾಡಲ್ಲ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿದ್ದೇವೆ. ಸಂತ್ರಸ್ತರಿಗೆ ಶೀಘ್ರ ಪರಿಹಾರನೂ ಒದಗಿಸುತ್ತೇವೆ  ಎಂದರು.

ಈ ಸಂದರ್ಭದಲ್ಲಿ ಬಂದರು ಸಚಿವ ಎಸ್.ಅಂಗಾರ, ಬಿಜೆಪಿ ಮುಖಂಡರಾದ ಸಂತೋಷ್ ಕುಮಾರ್ ಬೋಳಿಯಾರ್, ಚಂದ್ರಹಾಸ್ ಪಂಡಿತ್ ಹೌಸ್ ಮೊದಲಾವರು ಜೊತೆಯಲ್ಲಿದ್ದರು.

ಈ ಸಂದರ್ಭದಲ್ಲಿ ಸ್ಥಳೀಯರು ಬಟ್ಟಂಪಾಡಿಯಲ್ಲಿ ಹಲವು ವರ್ಷಗಳಿಂದ ಕಡಲ್ಕೊರೆತ ತೀವ್ರವಾಗಿ ಇದೆ. 30 ಫೀಟ್ ಅಂತರದಲ್ಲಿ ಕೊರೆಯುತ್ತಿದೆ. ಇದಕ್ಕೆ ಶಾಶ್ವತ ತಡೆಗೋಡೆ ನಿರ್ಮಾಣ ಆಗಬೇಕು. ಈವರೆಗೆ ಹಲವು ಸಚಿವರು ಬಂದು ಭರವಸೆ ನೀಡಿ ಹೋಗಿದ್ದು ಮಾತ್ರ. ಪರಿಹಾರ ಆಗಲಿಲ್ಲ. ನೀವಾದರೂ ದಯವಿಟ್ಟು ಶಾಶ್ವತ ಪರಿಹಾರ ಒದಗಿಸಿ ಕೊಡಿ ಎಂದು ಸಚಿವ ಆರ್ ಅಶೋಕ್ ಅವರಲ್ಲಿ ವಿನಂತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News