ಚೀನಾ ಸರಕಾರದಿಂದ ಬೆದರಿಕೆಯ ಸಾಧ್ಯತೆ: ಅಮೆರಿಕ, ಬ್ರಿಟನ್ ಉದ್ಯಮಿಗಳಿಗೆ ಎಚ್ಚರಿಕೆ

Update: 2022-07-07 17:49 GMT

 ಲಂಡನ್, ಜು.7: ಚೀನಾ ಸರಕಾರ ಹಾಗೂ ಅಲ್ಲಿ ಆಡಳಿತದಲ್ಲಿರುವ ಚೀನಾ ಕಮ್ಯುನಿಸ್ಟ್ ಪಕ್ಷದಿಂದ ಎದುರಾಗಿರುವ ಬೆದರಿಕೆಯ ಬಗ್ಗೆ ಎಚ್ಚರದಿಂದ ಇರುವಂತೆ ಅಮೆರಿಕ ಮತ್ತು ಬ್ರಿಟನ್ನ ಗುಪ್ತಚರ ವಿಭಾಗ ತಮ್ಮ ದೇಶದ ಉದ್ಯಮಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿವೆ ಎಂದು ವರದಿಯಾಗಿದೆ. 


ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ನ ನಿರ್ದೇಶಕ ಕ್ರಿಸ್ಟೋಫರ್ ವ್ರೆಯ್ ಮತ್ತು ಬ್ರಿಟನ್ನ ಗುಪ್ತಚರ ಸೇವಾ ಸಂಸ್ಥೆ ಎಂ15ರ ಪ್ರಧಾನ ನಿರ್ದೇಶಕ ಕೆನ್ ಮೆಕ್ಕಲಂ ಲಂಡನ್ನಲ್ಲಿ ನಡೆದ ಉದ್ಯಮಿಗಳ ಮತ್ತು ಶಿಕ್ಷಣ ಕ್ಷೇತ್ರದ ಮುಖಂಡರ ಸಭೆಯಲ್ಲಿ ಈ ಸಂದೇಶ ರವಾನಿಸಿದ್ದಾರೆ. 

ಎರಡೂ ದೇಶಗಳ ಆರ್ಥಿಕ ಮತ್ತು ರಾಷ್ಟ್ರೀಯ ಭದ್ರತೆಗೆ ಹಾಗೂ ಯುರೋಪ್ ಮತ್ತು ಇತರೆಡೆ ಇರುವ ನಮ್ಮ ಮಿತ್ರರಿಗೆ ಚೀನಾದ ಸರಕಾರದಿಂದ ದೀರ್ಘಾವಧಿಯಿಂದ ನಿರಂತರ ಬೆದರಿಕೆ ಎದುರಾಗುತ್ತಿದೆ. ಆದ್ದರಿಂದ ಉದ್ಯಮಿಗಳು ಎಫ್ಬಿಐ ಅಥವಾ ಎಂ15 ಜತೆ ಸಹಭಾಗಿಗಳಾಗಿ ಸೂಕ್ತ ರೀತಿಯ ಗುಪ್ತಚರ ವರದಿ ಪಡೆಯಬಹುದು. 

ತಂತ್ರಜ್ಞಾನದ ನೆರವು ಪಡೆಯುವುದು ಸಂಸ್ಥೆಯ ಮೌಲ್ಯವನ್ನು ಹೆಚ್ಚಿಸಲಿದೆ . ಚೀನಾದ ಕಂಪೆನಿಯೊಂದಿಗೆ ಪಾಲುದಾರಿಕೆ ಹೊಂದಿದರೆ ಚೀನಾದ ಮಾರುಕಟ್ಟೆ ಮಾತ್ರ ದೊರೆಯುತ್ತದೆ ಮತ್ತು ನಿಮ್ಮ ಪಾಲುದಾರರು ನಿಮ್ಮ ಸಂಶೋಧನೆ, ನಾವೀನ್ಯತೆಗಳನ್ನು ಕದಿಯಲು ಅವಕಾಶವಾಗಲಿದೆ ಎಂದು ವ್ರೆಯ್ ಹೇಳಿರುವುದಾಗಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. 

ಚೀನಾದ ಕಮ್ಯುನಿಸ್ಟ್ ಪಕ್ಷವು ಜಗತ್ತಿನಾದ್ಯಂತ ರಹಸ್ಯವಾಗಿ ಒತ್ತಡ ತಂತ್ರ ಹೇರುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. 2021ರಲ್ಲಿ ಚೀನಾದ ಗುಪ್ತಚರ ಅಧಿಕಾರಿ ಶು ಯೆಂಜೂನ್ರನ್ನು ಆರ್ಥಿಕ ಗೂಢಚಾರಿಕೆ ಮತ್ತು ವ್ಯಾಪಾರ ರಹಸ್ಯ ಕದ್ದ ಆರೋಪದಲ್ಲಿ ಅಮೆರಿಕದಲ್ಲಿ ಶಿಕ್ಷೆಗೆ ಒಳಪಡಿಸಲಾಗಿದೆ . 

ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಬಹುರಾಷ್ಟ್ರೀಯ ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಂಡು ಆ ಸಂಸ್ಥೆಗಳ ತಂತ್ರಜ್ಞಾನ ಕದಿಯುವುದು ಚೀನಾದ ಯೋಜನೆಯಾಗಿದೆ ಎಂದು ಮೆಕ್ಕಲಮ್ ಹೇಳಿದ್ದಾರೆ. ಈ ಹೇಳಿಕೆಗಳನ್ನು ಅಮೆರಿಕದಲ್ಲಿರುವ ಚೀನಾ ರಾಯಭಾರಿ ಕಚೇರಿಯ ವಕ್ತಾರರು ತಳ್ಳಿಹಾಕಿದ್ದು ಇದರಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News