ನಿರ್ಬಂಧದ ಹಾದಿಯಲ್ಲಿ ಮಾಧ್ಯಮ ಸ್ವಾತಂತ್ರ್ಯ!

Update: 2022-07-08 06:03 GMT

ಪ್ಯಾರಿಸ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ 'ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್‌' (ಆರ್‌ಎಸ್‌ಎಫ್) ಎಂಬ ಸೇವಾ ಸಂಘಟನೆಯ ಇತ್ತೀಚಿನ ಪತ್ರಿಕಾ ಸ್ವಾತಂತ್ರ ಸೂಚ್ಯಂಕವು ಭಾರತಕ್ಕೆ 150ನೇ ಸ್ಥಾನವನ್ನು ನೀಡಿದೆ. ಈ ಪಟ್ಟಿಯಲ್ಲಿ ಒಟ್ಟು 180 ದೇಶಗಳಿವೆ. ಭಾರತದಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಪತ್ರಿಕಾ ಸ್ವಾತಂತ್ರವು ನಿರಂತರವಾಗಿ ಕುಸಿಯುತ್ತಾ ಬಂದಿರುವುದನ್ನು ಸೂಚ್ಯಂಕವು ತೋರಿಸಿದೆ. ಇಲ್ಲಿ ಇನ್ನಷ್ಟು ಕಳವಳದ ಸಂಗತಿಯೆಂದರೆ, ಭಾರತ ಹಾಗೂ ಸರ್ವಾಧಿಕಾರಿ ಮತ್ತು ಏಕಾಧಿಪತ್ಯದ ಸರಕಾರಗಳಿರುವ ದೇಶಗಳ ನಡುವಿನ ಅಂತರವು ಕುಗ್ಗುತ್ತಾ ಬಂದಿದೆ. ಸಾಮಾನ್ಯವಾಗಿ, ಪತ್ರಿಕಾ ಸ್ವಾತಂತ್ರ ಸೂಚ್ಯಂಕದ ತಳದಲ್ಲಿ ಸೌದಿ ಅರೇಬಿಯ, ಉತ್ತರ ಕೊರಿಯ, ಮ್ಯಾನ್ಮಾರ್ ಮುಂತಾದ ದೇಶಗಳು ಸ್ಥಾನಗಳನ್ನು ಪಡೆಯುತ್ತವೆ. ಈ ದೇಶಗಳು ನಿರ್ದಯಿ ಸರ್ವಾಧಿಕಾರ ಮತ್ತು ಮಾನವಹಕ್ಕುಗಳ ಉಲ್ಲಂಘನೆಗಳಿಗೆ ಕುಪ್ರಸಿದ್ಧವಾಗಿವೆ ಹಾಗೂ ಯಾವುದೇ ಪ್ರಜಾಸತ್ತಾತ್ಮಕ ವೌಲ್ಯಗಳನ್ನು ಅವುಗಳು ಮಾನ್ಯ ಮಾಡುವುದಿಲ್ಲ. ಈ ದೇಶಗಳಲ್ಲಿ ಮಾಧ್ಯಮವನ್ನು ಪ್ರಚಾರ ಉಪಕರಣವಾಗಿ ಅಥವಾ ಸರಕಾರಿ ಶಾಖೆಯಾಗಿ ಬಳಸಲಾಗುತ್ತದೆ. ಈ ದೇಶಗಳಲ್ಲಿ ಸ್ವತಂತ್ರ ಪತ್ರಿಕೆಗಳಿರುವುದಿಲ್ಲ. ಅಲ್ಲಿ ಸರಕಾರವೇ ಅಥವಾ ಸರಕಾರಕ್ಕೆ ನಿಕಟವಾಗಿರುವ ವ್ಯಕ್ತಿಗಳು ಮಾಧ್ಯಮಗಳ ಒಡೆತನ ಹೊಂದುತ್ತಾರೆ. ಸ್ವತಂತ್ರ ಮಾಧ್ಯಮ ಮತ್ತು ಪತ್ರಿಕಾ ಸ್ವಾತಂತ್ರಕ್ಕೆ ಸಂಬಂಧಿಸಿದ ಹೆಚ್ಚಿನ ಜಾಗತಿಕ ಸೂಚ್ಯಂಕಗಳಲ್ಲಿ ಭಾರತದ ಇತ್ತೀಚಿನ ವರ್ಷಗಳ ನಿರ್ವಹಣೆಯು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವಕ್ಕೆ ಪೂರಕವಲ್ಲದ ಸಂಗತಿಗಳತ್ತ ಬೆಟ್ಟು ಮಾಡಿವೆ.

ಪತ್ರಿಕಾ ಸ್ವಾತಂತ್ರ ಸೂಚ್ಯಂಕದಲ್ಲಿನ ತೀವ್ರ ಕುಸಿತವು, ಭಾರತದಲ್ಲಿ ಮಾಧ್ಯಮಗಳ ಕಾರ್ಯನಿರ್ವಹಣೆ ಮತ್ತು ಪ್ರಜಾಪ್ರಭುತ್ವದಲ್ಲಿನ ಅಪಾಯಕಾರಿ ಪ್ರವೃತ್ತಿಯತ್ತ ಬೆಟ್ಟು ಮಾಡಿದೆ. ಭಾರತದಲ್ಲಿ ಪತ್ರಿಕೆಗಳ ಸ್ಥಿತಿಗತಿಗೆ ಹೆಚ್ಚಿನ ಸಂದರ್ಭಗಳಲ್ಲಿ ಭಾರತೀಯ ಪ್ರಜಾಪ್ರಭುತ್ವದ ದೌರ್ಬಲ್ಯಗಳು ಮತ್ತು ರಾಜಕೀಯ ನಾಯಕತ್ವದ ಧೋರಣೆಗಳೇ ಕಾರಣ. ಭಾರತೀಯ ಮಾಧ್ಯಮ ಕ್ಷೇತ್ರವು ಭವ್ಯ ವೈವಿಧ್ಯತೆಯನ್ನು ಹೊಂದಿತ್ತಾದರೂ, ಅದು ಯಾವತ್ತೂ ಮುಕ್ತ ಮತ್ತು ಸ್ವತಂತ್ರ ಮಾಧ್ಯಮಕ್ಕೆ ಪರಿಸರ ವ್ಯವಸ್ಥೆಯಾಗಿ ಪರಿವರ್ತನೆಯಾಗಲಿಲ್ಲ. ಭಾರತದಲ್ಲಿನ ಪತ್ರಿಕಾ ಸ್ವಾತಂತ್ರದ ಅಧಃಪತನಕ್ಕೆ ಮೂರು ಪ್ರಮುಖ ಕಾರಣಗಳನ್ನು ಆರ್‌ಎಸ್‌ಎಫ್ ಉಲ್ಲೇಖಿಸಿದೆ. ಅವುಗಳೆಂದರೆ; ರಾಜಕೀಯ ನಿಯಂತ್ರಿತ ಮಾಧ್ಯಮ, ಪತ್ರಕರ್ತರ ಸುರಕ್ಷತೆ ಮತ್ತು ಮಾಧ್ಯಮಗಳ ಒಡೆತನವು ಕೆಲವೇ ವ್ಯಕ್ತಿಗಳಲ್ಲಿ ಕೇಂದ್ರೀಕೃತವಾಗಿರುವುದು. ಆದರೆ, ಪತ್ರಿಕಾ ಸ್ವಾತಂತ್ರದ ತೀವ್ರ ಕುಸಿತವು ಭಾರತದಲ್ಲಿ ಯಾವುದೇ ಸಾರ್ವಜನಿಕ ವಲಯದ ಚರ್ಚೆಗೆ ಕಾರಣವಾಗಿಲ್ಲ. ಈ ವಿಷಯದಲ್ಲಿ ನಾಗರಿಕ ಸಮಾಜದ ದಿವ್ಯ ವೌನವು ತೀವ್ರ ಆತಂಕಕಾರಿಯಾಗಿದೆ. ಮುಖ್ಯವಾಗಿ ರಾಜಕೀಯ ಪಕ್ಷಗಳು, ವಿದ್ವಾಂಸ ವಲಯ, ಸಾಮಾಜಿಕ ಹೋರಾಟಗಾರರು ಮತ್ತು ದೊಡ್ಡ ಮಾಧ್ಯಮ ಸಂಸ್ಥೆಗಳು, ಭಾರತದಲ್ಲಿ ಪತ್ರಿಕಾ ಸ್ವಾತಂತ್ರ ದುರ್ಬಲಗೊಳ್ಳುವುದಕ್ಕೆ ಕಾರಣವಾದ ಅಂಶಗಳನ್ನು ಪ್ರಶ್ನಿಸಿಲ್ಲ ಅಥವಾ ಅವುಗಳ ಬಗ್ಗೆ ಚರ್ಚೆ ಮಾಡಿಲ್ಲ.
ಭಾರತೀಯ ಪ್ರಜಾಪ್ರಭುತ್ವವು ಇತ್ತೀಚಿನ ದಶಕಗಳಲ್ಲಿ ಪ್ರಕ್ಷುಬ್ಧ ಪರಿಸ್ಥಿತಿಯನ್ನು ಎದುರಿಸುತ್ತಾ ಬಂದಿವೆ. ಇದು ನಿಸ್ಸಂಶಯವಾಗಿ ದೇಶದ ಮಾಧ್ಯಮಗಳ ಮೇಲೆ ಪರಿಣಾಮ ಬೀರಿವೆ. ಆದರೆ, ಮಾಧ್ಯಮಗಳ ಸ್ಥಿತಿಗತಿಯ ಕುರಿತ ಅರ್ಥಪೂರ್ಣ ಚರ್ಚೆಗಳ ಕೊರತೆಯು ಕಳೆದ ಹಲವಾರು ದಶಕಗಳ ಸಾಮಾನ್ಯ ಸಂಗತಿಯಾಗಿದೆ. ಮಾಧ್ಯಮ ಸ್ವಾತಂತ್ರದ ಕುರಿತ ನಾಗರಿಕ ಸಮಾಜದ ವೌನದಿಂದಾಗಿ, ಭಾರತದಂತಹ ಪ್ರಜಾಪ್ರಭುತ್ವದಲ್ಲಿ ಮಾಧ್ಯಮವು ಯಾವ ಪಾತ್ರವನ್ನು ವಹಿಸಬೇಕಾಗಿತ್ತೋ ಆ ಪಾತ್ರವನ್ನು ವಹಿಸಲು ಸಾಧ್ಯವಾಗಿಲ್ಲ. ಮಾಧ್ಯಮಗಳ ರಾಜಕೀಯ ಪಕ್ಷಪಾತ ಅಥವಾ ಸ್ವತಂತ್ರ ಪತ್ರಿಕೋದ್ಯಮದ ಅನುಪಸ್ಥಿತಿಗೆ ನಾಗರಿಕ ಸಮಾಜದ ಹೆಚ್ಚಿನ ವರ್ಗಗಳಿಂದ ಪ್ರತಿಕ್ರಿಯೆಯೇ ಬಂದಿಲ್ಲ. ಇಂದು ಭಾರತದ ನಾಗರಿಕ ಸಮಾಜವು ಅತ್ಯಂತ ಏಕಪಕ್ಷೀಯ ರಾಜಕೀಯ ನಿಲುವಿನಿಂದ ಬಳಲುತ್ತಿದೆ ಮತ್ತು ಅದು ಊಳಿಗಮಾನ್ಯ ಹಾಗೂ ಧಾರ್ಮಿಕ ಶಕ್ತಿಗಳೊಂದಿಗೆ ಕೈಜೋಡಿಸಿದೆ. ದೇಶದಲ್ಲಿ ಮಾಧ್ಯಮದಂತಹ ಪ್ರಜಾಸತ್ತಾತ್ಮಕ ಸಂಸ್ಥೆಗಳ ವಿನಾಶಕ್ಕೆ ನಾಗರಿಕ ಸಮಾಜದ ಹೆಚ್ಚಿನ ವರ್ಗಗಳಿಂದ ವ್ಯಕ್ತವಾಗುತ್ತಿರುವ ನಿರ್ಲಕ್ಷಕ್ಕೆ ಪ್ರಮುಖ ಕಾರಣ ಇದೇ ಆಗಿರಬಹುದಾಗಿದೆ.

ಪತ್ರಿಕಾ ಸ್ವಾತಂತ್ರಕ್ಕಾಗಿ ಪ್ರತಿಭಟನೆ
ಅದೇ ರೀತಿ, ಭಾರತದಲ್ಲಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಸರಕಾರಗಳು ದೇಶದಲ್ಲಿ ಕ್ಷೀಣಿಸುತ್ತಿರುವ ಪತ್ರಿಕಾ ಸ್ವಾತಂತ್ರದತ್ತ ಯಾವತ್ತೂ ಗಮನ ಹರಿಸಿಲ್ಲ. ಮುಕ್ತ ಮತ್ತು ಸ್ವತಂತ್ರ ಮಾಧ್ಯಮಕ್ಕೆ ಅವಕಾಶವನ್ನು ಸೃಷ್ಟಿಸುವ ಬದಲು, ಸರಕಾರವು ಯಾವತ್ತೂ ಪತ್ರಿಕಾ ಸ್ವಾತಂತ್ಯದ ಮೇಲೆ ನಿಗಾ ಇಡುವ ಅಂತರ್‌ರಾಷ್ಟ್ರೀಯ ಸಂಸ್ಥೆಗಳ ಉದ್ದೇಶಗಳನ್ನು ಶಂಕಿಸಿವೆ. ಇತ್ತೀಚಿನ ದಿನಗಳಲ್ಲಿ, ಸರಕಾರದ ವಿವಿಧ ನಾಯಕರು ಪತ್ರಿಕಾ ಸ್ವಾತಂತ್ರ ಸೂಚ್ಯಂಕದ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಲು ಪ್ರಯತ್ನಿಸಿದ್ದಾರೆ. 2021ರಲ್ಲಿ, ಸೂಚ್ಯಂಕವನ್ನು ಲೆಕ್ಕಮಾಡಲು ಬಳಸಲಾದ ವಿಧಾನಗಳು ಅಪಾರದರ್ಶಕ ಮತ್ತು ಪ್ರಶ್ನಾರ್ಹವಾಗಿವೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಲೋಕಸಭೆಗೆ ತಿಳಿಸಿತು.
2020ರಲ್ಲಿ, ಕುಸಿಯುತ್ತಿರುವ ಪತ್ರಿಕಾ ಸ್ವಾತಂತ್ರ ಸೂಚ್ಯಂಕದ ಮೇಲೆ ನಿಗಾ ಇಡುವುದಕ್ಕಾಗಿ 'ಸೂಚ್ಯಂಕ ನಿಗಾ ಘಟಕ (ಐಎಮ್‌ಸಿ)'ವೊಂದನ್ನು ಸ್ಥಾಪಿಸಲು ಸರಕಾರ ನಿರ್ಧರಿಸಿತು. ನಿಗಾ ಘಟಕವನ್ನು ಸ್ಥಾಪಿಸಿದ ಅಂದಿನ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವ್ಡೇಕರ್, 2020 ಮೇ 3ರಂದು ಹೀಗೆ ಟ್ವೀಟ್ ಮಾಡಿದರು: ''ಜನರಿಗೆ ಮಾಹಿತಿ ನೀಡುವ ಮತ್ತು ಅವರನ್ನು ಜ್ಞಾನಿಗಳನ್ನಾಗಿಸುವ ಶಕ್ತಿಯನ್ನು ಮಾಧ್ಯಮ ಹೊಂದಿದೆ. ಭಾರತದಲ್ಲಿ ಮಾಧ್ಯಮವು ಸಂಪೂರ್ಣ ಸ್ವಾತಂತ್ರವನ್ನು ಅನುಭವಿಸುತ್ತಿದೆ. ಭಾರತದ 'ಪತ್ರಿಕಾ ಸ್ವಾತಂತ್ರ'ದ ಬಗ್ಗೆ ಕೆಟ್ಟ ಚಿತ್ರಣವನ್ನು ನೀಡುವ ಇಂತಹ ಸಮೀಕ್ಷೆಗಳ ಉದ್ದೇಶವನ್ನು ನಾವು ಇಂದಲ್ಲದಿದ್ದರೆ ನಾಳೆಯಾದರೂ ಬಹಿರಂಗಪಡಿಸುತ್ತೇವೆ''.
ಸೂಚ್ಯಂಕ ನಿಗಾ ಘಟಕವು ತನ್ನ ವರದಿ ಮತ್ತು ಶಿಫಾರಸುಗಳನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ಸಲ್ಲಿಸಿತು. ಆದರೆ, ಘಟಕದ ಸದಸ್ಯರಾಗಿದ್ದ ಹಿರಿಯ ಪತ್ರಕರ್ತ ಪಿ. ಸಾಯಿನಾಥ್ ವರದಿಯಲ್ಲಿ ತನ್ನ ಪ್ರಬಲ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ''ಭಿನ್ನಮತ ವ್ಯಕ್ತಪಡಿಸುವ ಹಕ್ಕು ಭಾರತದ ಪತ್ರಿಕಾ ಸ್ವಾತಂತ್ರದ ಪ್ರಧಾನ ಅಂಶವಾಗಬೇಕು'' ಎಂದು ಅವರು ಹೇಳಿದ್ದಾರೆ.
ಜಾಗತಿಕ ಪತ್ರಿಕಾ ಸ್ವಾತಂತ್ರ ಸೂಚ್ಯಂಕವು 2002ರಲ್ಲಿ ಮೊದಲ ಬಾರಿಗೆ ಪ್ರಕಟಗೊಂಡಾಗ ಭಾರತದ ಸ್ಥಾನ 80ರಲ್ಲಿತ್ತು. 2010ರ ಬಳಿಕ, ಭಾರತದ ಸ್ಥಾನವು ನಿರಂತರವಾಗಿ ಕುಸಿಯುತ್ತಾ ಬರುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಭಾರತವು ಪತ್ರಿಕಾ ಸ್ವಾತಂತ್ರ ಸೂಚ್ಯಂಕದಲ್ಲಿ ತೀವ್ರ ಕುಸಿತವನ್ನು ಕಾಣಲು ರಾಜಕೀಯ ಪಕ್ಷಪಾತಿ ಮಾಧ್ಯಮಗಳೂ ಒಂದು ಕಾರಣ ಎಂದು ಆರ್‌ಎಸ್‌ಎಫ್ ಹೇಳಿದೆ. ಪತ್ರಿಕೆಗಳ ಮಾಲಕತ್ವದಲ್ಲಿ ಆಗಿರುವ ಬದಲಾವಣೆಗಳು ಮತ್ತು ಮಾಧ್ಯಮಗಳ ರಾಜಕೀಯ ಒಲವು- ಕಳೆದ ಕೆಲವು ದಶಕಗಳಲ್ಲಿ ಆಗಿರುವ ಅತ್ಯಂತ ಮಹತ್ವದ ಪರಿವರ್ತನೆಯಾಗಿದೆ. ರಾಜಕೀಯ ಪಕ್ಷಗಳು ಮತ್ತು ಸ್ಥಾಪಿತ ಹಿತಾಸಕ್ತಿಗಳೊಂದಿಗೆ ಮುಖ್ಯವಾಹಿನಿಯ ಮಾಧ್ಯಮಗಳು ಹೊಂದಿರುವ ಒಲವು ಹಾಗೂ ಪ್ರಜಾಸತ್ತೆಯೊಂದರಲ್ಲಿ ಸ್ವತಂತ್ರ ಮಾಧ್ಯಮವಾಗಿ ಕಾರ್ಯನಿರ್ವಹಿಸುವಲ್ಲಿನ ಅವುಗಳ ವೈಫಲ್ಯವು, ಭಾರತೀಯ ಮಾಧ್ಯಮ ಪರಿಸರ ವ್ಯವಸ್ಥೆ ಎದುರಿಸಿದ ಅತ್ಯಂತ ದೊಡ್ಡ ಸವಾಲುಗಳಾಗಿವೆ. ಇವುಗಳ ಜೊತೆಗೆ, ಉದ್ಯಮ ಸಂಸ್ಥೆಗಳಾಗಿ ಮಾಧ್ಯಮಗಳ ಪರಿವರ್ತನೆ ಮತ್ತು ಏಕಸ್ವಾಮ್ಯ ಆಡಳಿತವು ಮಾಧ್ಯಮ ಕ್ಷೇತ್ರ ಎದುರಿಸುತ್ತಿರುವ ಇತರ ಬೆದರಿಕೆಗಳಾಗಿವೆ. ಜಾಗತಿಕ ಮಾಧ್ಯಮ ಮಾರುಕಟ್ಟೆಗೆ ಹೋಲಿಸಿದರೆ, ಭಾರತದ ಮಾಧ್ಯಮಗಳು ಗಾತ್ರ ಮತ್ತು ವೈವಿಧ್ಯತೆಗೆ ಹೆಸರುವಾಸಿಯಾಗಿವೆ. ಆದರೆ, ಅವುಗಳನ್ನು ಕೆಲವೇ ಜನರು ನಿಯಂತ್ರಿಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ಎದುರಿಸುತ್ತಿರುವ ಸಮಸ್ಯೆಗಳಿಗೆ ಇದುವೇ ಮೂಲಕಾರಣವಾಗಿದೆ. ಭಾರತದಲ್ಲಿ ಕೆಲವು ಪ್ರಮುಖ ಮಾಧ್ಯಮ ಸಂಸ್ಥೆಗಳನ್ನು ರಾಜಕೀಯ ನಂಟು ಹೊಂದಿರುವ ವ್ಯಕ್ತಿಗಳು ನಿಯಂತ್ರಿಸುತ್ತಿದ್ದಾರೆ ಎಂದು ಆರ್‌ಎಸ್‌ಎಫ್ ತನ್ನ ಮೀಡಿಯ ಓನರ್‌ಶಿಪ್ ಮೋನಿಟರ್‌ನಲ್ಲಿ ಹೇಳಿದೆ.
ಭಾರತೀಯ ಮಾಧ್ಯಮ ಕ್ಷೇತ್ರದಲ್ಲಿ ಪತ್ರಕರ್ತರ ಸುರಕ್ಷತೆಯು ದೊಡ್ಡ ಸವಾಲಾಗಿದೆ. ಭಾರತವು ಪತ್ರಕರ್ತರಿಗೆ ಅಪಾಯಕಾರಿ ದೇಶ ಎಂಬುದಾಗಿ ವಿವಿಧ ಸ್ವತಂತ್ರ ಅಂತರ್‌ರಾಷ್ಟ್ರೀಯ ಸಂಘಟನೆಗಳು ಬಣ್ಣಿಸಿವೆ. ಆರ್‌ಎಸ್‌ಎಫ್‌ನ 2021ರ ವರದಿಯಲ್ಲಿ, 'ಪತ್ರಕರ್ತರಿಗೆ ಅತ್ಯಂತ ಅಪಾಯಕಾರಿ ದೇಶಗಳ' ಪಟ್ಟಿಯಲ್ಲಿ ಭಾರತವು ಯೆಮನ್‌ನೊಂದಿಗೆ ಮೂರನೇ ಸ್ಥಾನವನ್ನು ಹಂಚಿಕೊಂಡಿದೆ. ಅದೇ ರೀತಿ, ಜಾಗತಿಕ (ದುಷ್ಕರ್ಮಿಗಳಿಗೆ) ಭಯರಹಿತ ಸೂಚ್ಯಂಕವು ಸಿದ್ಧಪಡಿಸಿದ 'ಪತ್ರಕರ್ತರನ್ನು ರಕ್ಷಿಸುವ ಸಮಿತಿ'ಯು ಪತ್ರಕರ್ತರು ಹತ್ಯೆಯಾಗುವ ಮತ್ತು ಅವರ ಹಂತಕರು ಮುಕ್ತವಾಗಿ ತಿರುಗಾಡುವ ಪರಿಸ್ಥಿತಿಗೆ ಸಂಬಂಧಿಸಿದ ಸೂಚ್ಯಂಕವೊಂದನ್ನು ಸಿದ್ಧಪಡಿಸಿತು. ಆ ಸೂಚ್ಯಂಕದಲ್ಲಿ ಭಾರತವು 12ನೇ ಸ್ಥಾನವನ್ನು ಪಡೆದಿದೆ. ಕೋವಿಡ್-19ರ ಅವಧಿಯಲ್ಲಿ ಪತ್ರಕರ್ತರ ವಿರುದ್ಧ ಅತಿ ಹೆಚ್ಚು ಮೊಕದ್ದಮೆಗಳು ದಾಖಲಾದ ದೇಶಗಳ ಪಟ್ಟಿಯಲ್ಲಿ ಭಾರತವು ಮೊದಲನೇ ಸ್ಥಾನದಲ್ಲಿದೆ. 'ಫ್ರೀ ಸ್ಪೀಚ್ ಕಲೆಕ್ಟಿವ್'ನ ಪ್ರಕಾರ, 2020ರಲ್ಲಿ 67 ಪತ್ರಕರ್ತರು ತಮ್ಮ ಕೆಲಸ ನಿಭಾಯಿಸಿದುದಕ್ಕಾಗಿ ಮೊಕದ್ದಮೆಗಳನ್ನು ಎದುರಿಸಿದರು. ಈ ಪೈಕಿ ಹೆಚ್ಚಿನ ಮೊಕದ್ದಮೆಗಳು ಸಣ್ಣ ಪತ್ರಿಕಾ ಸಂಸ್ಥೆಗಳು ಮತ್ತು ಸಣ್ಣ ಪಟ್ಟಣಗಳ ಪತ್ರಕರ್ತರ ಮೇಲೆ ದಾಖಲಾಗಿವೆ. ಲಾಕ್‌ಡೌನ್ ನಿಯಮಗಳ ದುರ್ಬಳಕೆಯನ್ನು ವರದಿ ಮಾಡಿರುವುದಕ್ಕಾಗಿ ಅಥವಾ ಸರಕಾರಿ ನೀತಿಗಳ ವೈಫಲ್ಯಗಳನ್ನು ಎತ್ತಿ ತೋರಿಸಿರುವುದಕ್ಕಾಗಿ ಕೊರೋನ ವೈರಸ್ ಅವಧಿಯಲ್ಲಿ ವಿವಿಧ ಸರಕಾರಿ ಪ್ರಾಧಿಕಾರಗಳು ಪತ್ರಕರ್ತರ ವಿರುದ್ಧ ಮೊಕದ್ದಮೆಗಳನ್ನು ದಾಖಲಿಸಿದವು.
ಆರ್‌ಎಸ್‌ಎಫ್ ಪ್ರಕಾರ, ಪತ್ರಕರ್ತರಿಗೆ ಅತ್ಯಂತ ಅಪಾಯಕಾರಿಯಾಗಿರುವ ಮೊದಲ ಐದು ದೇಶಗಳ ಪಟ್ಟಿಯಲ್ಲಿ ಭಾರತವೂ ಇದೆ. ಕೆಲಸ ಮಾಡುತ್ತಿರುವಾಗಲೇ ಪತ್ರಕರ್ತರು ಕೊಲೆಯಾಗುವ ಘಟನೆಗಳು ಭಾರತದಲ್ಲಿ ಪತ್ರಕರ್ತರ ವಿರುದ್ಧ ನಡೆಯುತ್ತಿರುವ ಹಿಂಸೆಯ ಮಟ್ಟವನ್ನು ಸೂಚಿಸುತ್ತದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಪತ್ರಕರ್ತರ ಹೆಚ್ಚಿನ ಸಾವುಗಳು 10 ದೇಶಗಳಲ್ಲಿ ಸಂಭವಿಸಿವೆ ಹಾಗೂ ಇದರಲ್ಲಿ ಭಾರತವೂ ಸೇರಿದೆ ಎಂದು ಆರ್‌ಎಸ್‌ಎಫ್ ಹೇಳುತ್ತದೆ. ಯುನೆಸ್ಕೊ ಪ್ರಕಾರ, 2010 ಮತ್ತು 2022ರ ನಡುವಿನ ಅವಧಿಯಲ್ಲಿ ಭಾರತದಲ್ಲಿ ಸುಮಾರು 45 ಪತ್ರಕರ್ತರು ಕೊಲೆಗೀಡಾಗಿದ್ದಾರೆ.

1991 ಮತ್ತು 2021ರ ನಡುವಿನ ಅವಧಿಯಲ್ಲಿ ಭಾರತದಲ್ಲಿ 88 ಪತ್ರಕರ್ತರು ಮತ್ತು ಮಾಧ್ಯಮ ಕೆಲಸಗಾರರು ಹತರಾಗಿದ್ದಾರೆ ಎಂದು ಸಿಪಿಜೆ ಹೇಳಿದೆ.
ಪತ್ರಕರ್ತರು ಮತ್ತು ಮಾಧ್ಯಮ ಕೆಲಸಗಾರರ ಮೇಲೆ ದಾಳಿಯಾಗುತ್ತಿರುವುದು ಭಾರತದ ಇಂದಿನ ದೈನಂದಿನ ವಾಸ್ತವವಾಗಿದೆ. ದುರ್ಬಲ ಕಾನೂನು ಚೌಕಟ್ಟು, ಸರಕಾರದಿಂದ ಸೂಕ್ತ ಸ್ಪಂದನೆಯ ಕೊರತೆ ಹಾಗೂ ರಾಜಕೀಯ, ಧರ್ಮ ಮತ್ತು ಉದ್ಯಮಗಳ ನಡುವಿನ ನಂಟು ಪತ್ರಕರ್ತರ ಮೇಲೆ ಹೆಚ್ಚುತ್ತಿರುವ ಆಕ್ರಮಣಕ್ಕೆ ಮುಖ್ಯ ಕಾರಣಗಳಾಗಿವೆ. ಅಧಿಕಾರಿಗಳು ಚಾಲ್ತಿಯಲ್ಲಿರುವ ಕಾನೂನುಗಳನ್ನು ದುರುಪಯೋಗಗೊಳಿಸುವುದು ಇನ್ನೊಂದು ಗಂಭೀರ ವಿಚಾರವಾಗಿದೆ. ಸುಮಾರು 52 ಮಾಧ್ಯಮ ಸಂಬಂಧಿ ಕಾನೂನುಗಳು ಮತ್ತು ಪ್ರಭುತ್ವದಿಂದ ಆಗುತ್ತಿರುವ ಅವುಗಳ ದುರ್ಬಳಕೆ ಭಾರತದ ಪತ್ರಕರ್ತರನ್ನು ಬೆದರಿಸುತ್ತಿವೆ ಎಂಬುದಾಗಿ ಐಎಮ್‌ಸಿಗೆ ಸಲ್ಲಿಸಿದ ತನ್ನ ಭಿನ್ನಮತೀಯ ವರದಿಯಲ್ಲಿ ಪಿ. ಸಾಯಿನಾಥ್ ಹೇಳಿದ್ದಾರೆ.

 ಕೃಪೆ: outlookindia.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News