ಜಪಾನಿನ ಮಾಜಿ ಪ್ರಧಾನಿ ಶಿಂಝೊ ಅಬೆ ಮೇಲೆ ಗುಂಡಿನ ದಾಳಿ,ಸಾವನ್ನಪ್ಪಿರುವ ಸಾಧ್ಯತೆ

Update: 2022-07-08 14:37 GMT
Photo:AP

 ಟೋಕಿಯೊ,ಜು.8: ಜಪಾನಿನ ಮಾಜಿ ಪ್ರಧಾನಿ ಶಿಂಜೊ ಅಬೆ (67) ಅವರನ್ನು ಶುಕ್ರವಾರ ಗುಂಡಿಕ್ಕಿ ಹತ್ಯೆಗೈಯಲಾಗಿದೆ. ಕಶಿಹರ ನಗರದ ನಾರಾ ಪ್ರದೇಶದಲ್ಲಿ ಸ್ಥಳಿಯ ಕಾಲಮಾನ ಬೆಳಿಗ್ಗೆ 11:30ರ ಸುಮಾರಿಗೆ ಈ ಘಟನೆ ನಡೆದಿದೆ. ಹಂತಕನನ್ನು ಬಂಧಿಸಲಾಗಿದ್ದು,ಆತನ ನಿವಾಸದಲ್ಲಿ ಸ್ಫೋಟಕಗಳು ಪತ್ತೆಯಾಗಿವೆ. ಗುಂಡು ಅಬೆಯವರ ಹೃದಯವನ್ನು ಭೇದಿಸಿತ್ತು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
 ‌
ರವಿವಾರ ನಡೆಯಲಿರುವ ಮೇಲ್ಮನೆ ಚುನಾವಣೆಗೆ ಮುನ್ನ ನಾರಾದ ಬೀದಿಬದಿಯಲ್ಲಿ ಪ್ರಚಾರ ಭಾಷಣ ಮಾಡುತ್ತಿದ್ದ ಅಬೆ ಗುಂಡೇಟಿನಿಂದ ಗಾಯಗೊಂಡ ಮಾಹಿತಿ ಸಿಕ್ಕಿದ ತಕ್ಷಣ ಪ್ರಚಾರ ಕಾರ್ಯಕ್ರಮವನ್ನು ತೊರೆದು ಟೋಕಿಯೊಕ್ಕೆ ಮರಳಿದ ಜಪಾನ ಪ್ರಧಾನಿ ಫುಮಿಯೊ ಕಿಶಿಡಾ ಅವರು, ಇದು ಸಂಪೂರ್ಣವಾಗಿ ಅಕ್ಷಮ್ಯವಾಗಿದೆ. ಈ ಕೃತ್ಯವನ್ನು ಅತ್ಯಂತ ಕಟುವಾದ ಶಬ್ದಗಳಲ್ಲಿ ಖಂಡಿಸುತ್ತೇನೆ ಎಂದು ಹೇಳಿದರು.
 
ಗುಂಡು ಹಾರಿಸಿದ್ದ ಶಂಕಿತ ಹಂತಕನನ್ನು ಬಂಧಿಸಲಾಗಿದೆ ಎಂದು ಮುಖ್ಯ ಸಂಪುಟ ಕಾರ್ಯದರ್ಶಿ ಹಿರೊಕಝು ಮಟ್ಸುನೊ ತಿಳಿಸಿದರು. ಹಂತಕನನ್ನು 41 ವರ್ಷದ ತೆತ್ಸುಯ ಯಮಗಾಮಿ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಯಮಗಾಮಿ ನಿವಾಸದಲ್ಲಿ ಸ್ಫೋಟಕಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದರು.
 
ಅಬೆ ಭಾಷಣವನ್ನು ಮಾಡುತ್ತಿದ್ದಾಗ ಹಿಂದಿನಿಂದ ವ್ಯಕ್ತಿಯೋರ್ವ ಬಂದಿದ್ದ. ಮೊದಲ ಗುಂಡೇಟು ಆಟಿಕೆಯಂತೆ ಕೇಳಿ ಬಂದಿತ್ತು. ಅವರು ಕೆಳಕ್ಕೆ ಬಿದ್ದಿರಲಿಲ್ಲ ಮತ್ತು ಎರಡನೆ ಗುಂಡು ಭಾರೀ ಶಬ್ದವನ್ನು ಮಾಡಿತ್ತು. ಅದು ಹೆಚ್ಚು ಸ್ಪಷ್ಟವಾಗಿತ್ತು,ಕಿಡಿ ಮತ್ತು ಹೊಗೆ ಕಂಡುಬಂದಿದ್ದವು. ಗುಂಡೇಟಿನಿಂದ ಕುಸಿದು ಬಿದ್ದಿದ್ದ ಅಬೆ ಹೃದಯಾಘಾತಕ್ಕೂ ಒಳಗಾಗಿದ್ದು,ಸುತ್ತಲಿನ ಜನ ಅವರ ಎದೆಗೆ ಮಸಾಜ್ನ್ನೂ ಮಾಡಿದ್ದರು ಎಂದು ಪ್ರತ್ಯಕ್ಷದರ್ಶಿ ಮಹಿಳೆಯೋರ್ವರು ತಿಳಿಸಿದರು.

ಕುಸಿದು ಬಿದ್ದಿದ್ದ ಅಬೆಯವರ ಕುತ್ತಿಗೆಯಿಂದ ರಕ್ತಸ್ರಾವವಾಗುತ್ತಿತ್ತು. ಅವರನ್ನು ತಕ್ಷಣ ಕಶಿಹರ ಆಸ್ಪತ್ರೆಗೆ ಸಾಗಿಸಲಾಗಿತ್ತು ಮತ್ತು ರಕ್ತ ವರ್ಗಾವಣೆಯನ್ನೂ ಮಾಡಲಾಗಿತ್ತು ಎಂದು ಅವರ ಲಿಬರಲ್ ಡೆಮಾಕ್ರಟಿಕ್ ಪಾರ್ಟಿಯ ಪದಾಧಿಕಾರಿಯೋರ್ವರು ತಿಳಿಸಿದರು.
 ಅಬೆಯವರಿಗೆ ಹಿಂದಿನಿಂದ,ಬಹುಶಃ ಶಾಟ್ಗನ್ನಿಂದ ಗುಂಡು ಹಾರಿಸಿರುವಂತಿದೆ ಎಂದು ಹಲವಾರು ಮಾಧ್ಯಮಗಳು ವರದಿ ಮಾಡಿವೆ. ಘಟನೆಯ ಹಿನ್ನೆಲೆಯಲ್ಲಿ ಕಾರ್ಯಪಡೆಯೊಂದನ್ನು ರಚಿಸಲಾಗಿದೆ ಎಂದು ಸರಕಾರವು ತಿಳಿಸಿದೆ. ಜಪಾನಿನ ದೀರ್ಘಾವಧಿಯ ಪ್ರಧಾನಿಯಾಗಿದ್ದ ಅಬೆ 2006ರಲ್ಲಿ ಒಂದು ವರ್ಷ ಮತ್ತು 2012ರಿಂದ 2020ರವರೆಗೆ ಹುದ್ದೆಯಲ್ಲಿದ್ದರು. 2020ರಲ್ಲಿ ಅಲ್ಸರೇಟಿವ್ ಕೊಲೈಟಿಸ್ ಕಾಯಿಲೆಗೆ ತುತ್ತಾದ ಬಳಿಕ ಅನಿವಾರ್ಯವಾಗಿ ಅವರು ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿದ್ದರು.

ಜಪಾನ್ ವಿಶ್ವದ ಕೆಲವು ಅತ್ಯಂತ ಕಠಿಣ ಬಂದೂಕು ನಿಯಂತ್ರಣ ಕಾನೂನುಗಳನ್ನು ಹೊಂದಿದೆ. 12.50 ಕೋ.ಜನಸಂಖ್ಯೆಯ ಈ ದೇಶದಲ್ಲಿ ವರ್ಷವೊಂದರಲ್ಲಿ ಗುಂಡಿಗೆ ಬಲಿಯಾಗುವವರ ಸಂಖ್ಯೆ ಎರಡಂಕಿಯನ್ನು ತಲುಪುವುದಿಲ್ಲ. ಜಪಾನಿನ ಪ್ರಜೆಗಳಿಗೂ ಸಹ ಬಂದೂಕು ಪರವಾನಿಗೆ ಪಡೆಯುವುದು ಅತ್ಯಂತ ಸುದೀರ್ಘ ಮತ್ತು ಜಟಿಲ ಪ್ರಕಿಯೆಯಾಗಿದೆ. ಇದಕ್ಕಾಗಿ ಅವರು ಮೊದಲು ಶೂಟಿಂಗ್ ಅಸೋಸಿಯೇಷನ್ನಿಂದ ಶಿಫಾರಸನ್ನು ಪಡೆಯಬೇಕು ಮತ್ತು ನಂತರ ಕಠಿಣವಾದ ಪೊಲೀಸ್ ತಪಾಸಣೆಯನ್ನು ಎದುರಿಸಬೇಕಾಗುತ್ತದೆ.

ಹಂತಕನ ನಿವಾಸದಲ್ಲಿ ಸ್ಫೋಟಕಗಳು ಪತ್ತೆ

ಶಂಕಿತ ಹಂತಕ ತೆತ್ಸುಯ ಯಮಗಾಮಿಯ ನಿವಾಸದಲ್ಲಿ ಸ್ಫೋಟಕಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾರಾದ ಸ್ಥಳೀಯ ನಿವಾಸಿಯಾಗಿರುವ ಯಮಗಾಮಿ ಜಪಾನಿನ ಮಾರಿಟೈಮ್ ಸೆಲ್ಫ್ ಡಿಫೆನ್ಸ್ ಫೋರ್ಸ್ ನ ಮಾಜಿ ಸದಸ್ಯ ಎನ್ನಲಾಗಿದೆ.

ಯಮಗಾಮಿ ಗುಂಡು ಹಾರಿಸಿದಾಗ ಅಬೆಯವರ ಹಿಂದೆ 10 ಅಡಿ ದೂರದಲ್ಲಿ ನಿಂತುಕೊಂಡಿದ್ದ. ಗುಂಡುಗಳನ್ನು ಹಾರಿಸಿದಾಗ ಅಬೆ ಕುಸಿದು ಬಿದ್ದಿದ್ದು,ತಕ್ಷಣ ಭದ್ರತಾ ಸಿಬ್ಬಂದಿಗಳು ಯಮಗಾಮಿ ಮೇಲೆ ಮುಗಿಬಿದ್ದಿದ್ದರು. ಆತ ಅಲ್ಲಿಂದ ಪರಾರಿಯಾಗಲು ಯತ್ನಿಸಿರಲಿಲ್ಲ ಎಂದು ಸರಕಾರಿ ಸ್ವಾಮ್ಯದ ಟಿವಿಯು ವರದಿ ಮಾಡಿದೆ.
 
ಅಬೆಯವರನ್ನು ಕೊಲ್ಲುವ ಉದ್ದೇಶದಿಂದ ಅವರನ್ನು ಗುರಿಯಾಗಿಸಿಕೊಂಡು ಗುಂಡುಗಳನ್ನು ಹಾರಿಸಿದ್ದೆ ಎಂದು ನಾರಾ ನಿಶಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಸಂದರ್ಭದಲ್ಲಿ ಯಮಗಾಮಿ ಪೊಲೀಸರಿಗೆ ತಿಳಿಸಿದ್ದಾನೆ. ಅಬೆ ಕುರಿತು ತನಗೆ ಅಸಮಾಧಾನವಿತ್ತು ಎಂದೂ ಆತ ಹೇಳಿಕೊಂಡಿದ್ದಾನೆ. ಗುಂಡು ಹಾರಿಸಲು ಬಳಸಿದ್ದ ಗನ್ ಅನ್ನು ಯಮಗಾಮಿ ಸ್ವತಃ ನಿರ್ಮಿಸಿದ್ದ ಎನ್ನಲಾಗಿದೆ.

ಜಾಗತಿಕ ಸಮುದಾಯದ ಸಂತಾಪ
 ಟೋಕಿಯೊ, ಜು.8: ಶುಕ್ರವಾರ ಚುನಾವಣಾ ಪ್ರಚಾರದ ಸಂದರ್ಭ ಗುಂಡೇಟಿಗೆ ಬಲಿಯಾದ ಜಪಾನ್ನ ಮಾಜಿ ಪ್ರಧಾನಿ ಶಿಂಜೋ ಅಬೆಯವರ ಹತ್ಯೆಗೆ ಜಾಗತಿಕ ಮುಖಂಡರು ತೀವ್ರ ಸಂತಾಪ ಸೂಚಿಸಿದ್ದಾರೆ. ಜಪಾನ್ ಒಬ್ಬ ಮಹಾನ್ ಪ್ರಧಾನಿಯನ್ನು ಕಳೆದುಕೊಂಡಿದೆ. ಅವರು ದೇಶಕ್ಕಾಗಿ ಮತ್ತು ಪ್ರಪಂಚದಲ್ಲಿ ಸುವ್ಯವಸ್ಥೆ ನೆಲೆಸಲು ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದರು ಎಂದು ಫ್ರಾನ್ಸ್ನ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಸಂತಾಪ ಸೂಚಿಸಿದ್ದಾರೆ. ಅಬೆಯವರ ದುರಂತ ಮರಣ ಆಘಾತಕಾರಿ ಸುದ್ಧಿಯಾಗಿದೆ. ಜಾಗತಿಕ ವೇದಿಕೆಯಲ್ಲಿ ಅವರು ಆಸ್ಟ್ರೇಲಿಯಾದ ನಿಕಟ ಮಿತ್ರರಾಗಿದ್ದರು. ಅವರ ನಾಯಕತ್ವದಲ್ಲಿ ಜಪಾನ್ ಏಶ್ಯಾದಲ್ಲಿ ಆಸ್ಟ್ರೇಲಿಯಾದ ಅತ್ಯಂತ ವಿಶ್ವಾಸಾರ್ಹ ಮತ್ತು ಸಮಾನ ಮನಸ್ಸಿನ ಪಾಲುದಾರರಲ್ಲಿ ಒಂದಾಗಿ ಹೊರಹೊಮ್ಮಿದ್ದು ಆ ಪರಂಪರೆ ಇಂದಿಗೂ ಉಳಿದುಕೊಂಡಿದೆ. ಅಬೆ ವಿಶ್ವವೇದಿಕೆಯಲ್ಲಿ ದೈತ್ಯರಾಗಿದ್ದರು. ಜಿ7, ಜಿ20 ಮತ್ತು ವಿಶ್ವಸಂಸ್ಥೆಯಲ್ಲಿ ನಾಯಕರಾಗಿದ್ದರು. ಅವರ ನಿಧನವು ಜಪಾನ್ಗಷ್ಟೇ ಅಲ್ಲ, ಜಾಗತಿಕ ಸಮುದಾಯಕ್ಕೆ ಆಗಿರುವ ನಷ್ಟವಾಗಿದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಆ್ಯಂಥನಿ ಅಲ್ಬಾನೆಸ್ ಸಂತಾಪ ಸೂಚಿಸಿದ್ದಾರೆ. ಮಾಜಿ ಪ್ರಧಾನಿ ಶಿಂಜೊ ಅಬೆಯವರಿಗೆ ನಮ್ಮ ಆಳವಾದ ಗೌರವದ ಸಂಕೇತವಾಗಿ ಜುಲೈ 9ರಂದು ಒಂದು ದಿನದ ರಾಷ್ಟ್ರೀಯ ಶೋಕಾಚರಣೆ ನಡೆಸಲಾಗುವುದು ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸಂದೇಶದಲ್ಲಿ ಹೇಳಿದ್ದಾರೆ. ಜರ್ಮನ್ ಛಾನ್ಸರ್ ಒಲಾಫ್ ಶ್ಹಾಲ್ಜ್, ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ನೇಟೊ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟಾಲ್ಟನ್ಬರ್ಗ್, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್, ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ಡರ್ ಲಿಯೆನ್, ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸಿಯೊಕ್ ಯೂಲ್, ಪೋಲ್ಯಾಂಡ್ ಪ್ರಧಾನಿ ಮ್ಯಾಟರ್ ಮೊರವೀಕಿ ಮುಂತಾದ ಮುಖಂಡರು ಅಬೆ ಹತ್ಯೆಗೆ ಆಘಾತ ಮತ್ತು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News