ಇನ್ನು ಮುಂದೆ RTO ಗೆ ಭೇಟಿ ನೀಡದೆಯೇ ಡ್ರೈವಿಂಗ್ ಲೈಸೆನ್ಸನ್ನು ಪಡೆಯಬಹುದು: ಹೇಗೆ ಗೊತ್ತೇ?

Update: 2022-07-08 09:46 GMT
ಸಾಂದರ್ಭಿಕ ಚಿತ್ರ

ಡ್ರೈವಿಂಗ್ ಲೈಸೆನ್ಸ್ ಪಡೆಯಲಿಚ್ಚಿಸುವ ಚಾಲಕರಿಗೆ ಶುಭಸುದ್ದಿಯೆಂಬಂತೆ ಇದೀಗ ಪ್ರಾದೇಶಿಕ ಸಾರಿಗೆ ಕಚೇರಿಗೆ (RTO) ಭೇಟಿ ನೀಡದೆಯೇ ಚಾಲನಾ ಪರವಾನಗಿಯನ್ನು ಪಡೆಯಬಹುದು.

ಹೌದು. ಚಾಲನಾ ಪರವಾನಗಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಇನ್ನು ಮುಂದೆ RTO ಗೆ ಭೇಟಿ ನೀಡುವ ಅಗತ್ಯವಿಲ್ಲ. ಆದರೆ ಕಡ್ಡಾಯವಾದ ಡ್ರೈವಿಂಗ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಮಾನ್ಯತೆ ಪಡೆದ ಚಾಲಕ ತರಬೇತಿ ಕೇಂದ್ರಗಳಿಂದ ಅದನ್ನು ಪಡೆಯಬಹುದು.  ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಸೂಚಿಸಿದ ಹೊಸ ನಿಯಮಗಳ ಅಡಿಯಲ್ಲಿ, ಮಾನ್ಯತೆ ಪಡೆದ ಚಾಲಕ ತರಬೇತಿ ಕೇಂದ್ರಗಳು ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಅರ್ಹ ಅಭ್ಯರ್ಥಿಗಳಿಗೆ ಚಾಲನಾ ಪರವಾನಗಿಯನ್ನು ನೀಡಬಹುದು.  ಕೇಂದ್ರ ಅಥವಾ ರಾಜ್ಯ ಸಾರಿಗೆ ಇಲಾಖೆಗಳು ಇಂತಹ ತರಬೇತಿ ಕೇಂದ್ರಗಳನ್ನು ನಿರ್ವಹಿಸುತ್ತವೆ.

 ಇದು ಹೇಗೆ ಕೆಲಸ ಮಾಡುತ್ತದೆ?

 ಡ್ರೈವಿಂಗ್ ಲೈಸೆನ್ಸ್‌ಗಾಗಿ ಅರ್ಜಿ ಸಲ್ಲಿಸುವವರು ಈ ಯಾವುದೇ ಚಾಲಕ ತರಬೇತಿ ಕೇಂದ್ರಗಳಲ್ಲಿ ತರಬೇತಿಗೆ ದಾಖಲಾಗಬೇಕು ಮತ್ತು ಅವರು ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.

 ಅಭ್ಯರ್ಥಿಯು ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ತರಬೇತಿ ಕೇಂದ್ರವು ಪ್ರಮಾಣಪತ್ರವನ್ನು ನೀಡುತ್ತದೆ.  ಪ್ರಮಾಣಪತ್ರವನ್ನು ಪಡೆದ ನಂತರ, ಅಭ್ಯರ್ಥಿಗಳು ಚಾಲನಾ ಪರವಾನಗಿಗಾಗಿ ಅರ್ಜಿ ಸಲ್ಲಿಸಬಹುದು.  RTO ನಲ್ಲಿ ಯಾವುದೇ ಪರೀಕ್ಷೆಯಿಲ್ಲದೆ ತರಬೇತಿ ಪ್ರಮಾಣಪತ್ರವನ್ನು ಆಧರಿಸಿ ಪರವಾನಗಿ ನೀಡಲಾಗುತ್ತದೆ.

 ತರಬೇತಿ ಕೇಂದ್ರಗಳಲ್ಲಿ ಸಿಮ್ಯುಲೇಟರ್‌ಗಳು ಮತ್ತು ಮೀಸಲಾದ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್‌ಗಳನ್ನು ಅಳವಡಿಸಲಾಗುವುದು. ತರಬೇತಿ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಉತ್ತೀರ್ಣರಾದವರಿಗೆ ಪರೀಕ್ಷೆಗಾಗಿ ಆರ್‌ಟಿಒಗೆ ಭೇಟಿ ನೀಡದೆ ಪರವಾನಗಿ ನೀಡಲಾಗುತ್ತದೆ.

 ಮಾನ್ಯತೆ ಪಡೆದ ತರಬೇತಿ ಕೇಂದ್ರಗಳು ಲಘು ಮೋಟಾರು ವಾಹನಗಳಿಗೆ (LMVs) ಮತ್ತು ಮಧ್ಯಮ ಮತ್ತು ಭಾರೀ ವಾಹನಗಳಿಗೆ (HMVs) ತರಬೇತಿಯನ್ನು ನೀಡಬಹುದು.

 LMV ಗಳಿಗೆ ತರಬೇತಿಯ ಒಟ್ಟು ಅವಧಿಯು 29 ಗಂಟೆಗಳಿರುತ್ತದೆ, ಇದು ಕೋರ್ಸ್ ಪ್ರಾರಂಭದಿಂದ ನಾಲ್ಕು ವಾರಗಳಲ್ಲಿ ಪೂರ್ಣಗೊಳ್ಳಬೇಕು.  ತರಬೇತಿ ಕೇಂದ್ರಗಳು ಮೌಖಿಕ ಮತ್ತು ಪ್ರಾಯೋಗಿಕ ಜ್ಞಾನವನ್ನು ನೀಡುತ್ತವೆ.

 ಈ ಕೇಂದ್ರಗಳು ಉದ್ಯಮ-ನಿರ್ದಿಷ್ಟ ವಿಶೇಷ ತರಬೇತಿಯನ್ನು ನೀಡಲು ಸಹ ಅಧಿಕಾರ ಹೊಂದಿವೆ.  ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕಳೆದ ವರ್ಷ ಜೂನ್‌ನಲ್ಲಿ ತರಬೇತಿ ಕೇಂದ್ರಗಳಿಗೆ ಸಂಬಂಧಿಸಿದಂತೆ ಅಧಿಸೂಚನೆಯನ್ನು ಹೊರಡಿಸಿತು.

 ಆದಾಗ್ಯೂ, ಕೆಲವು ರಾಜ್ಯಗಳು ಚಾಲಕ ತರಬೇತಿ ಕೇಂದ್ರಗಳನ್ನು ತೆರೆಯುವ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ಏಕೆಂದರೆ ಇದು ಚಾಲನಾ ಪರವಾನಗಿ ವ್ಯವಸ್ಥೆಯ ಖಾಸಗೀಕರಣಕ್ಕೆ ಕಾರಣವಾಗಬಹುದು.  ಇಂತಹ ಕೇಂದ್ರಗಳು ಸರಿಯಾದ ಪರಿಶೀಲನೆ ಮತ್ತು ತಪಾಸಣೆ ಮಾಡದೆ ಚಾಲನಾ ಪರವಾನಗಿ ನೀಡುತ್ತವೆ ಎಂಬ ಆತಂಕವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News