ಟ್ವಿಟ್ಟರ್ ಖರೀದಿ ಒಪ್ಪಂದದಿಂದ ಹಿಂದೆ ಸರಿದ ಎಲಾನ್ ಮಸ್ಕ್

Update: 2022-07-09 04:03 GMT

ಸ್ಯಾನ್‍ಫ್ರಾನ್ಸಿಸ್ಕೊ: ಟೆಸ್ಲಾ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿದ ಎಲಾನ್ ಮಸ್ಕ್ ಅವರು, ಟ್ವಿಟ್ಟರ್ ಸಂಸ್ಥೆಯನ್ನು ಖರೀದಿಸುವ 44 ಶತಕೋಟಿ ಡಾಲರ್‍ಗಳ ಒಪ್ಪಂದದಿಂದ ಹಿಂದೆ ಸರಿದಿರುವುದಾಗಿ ಶುಕ್ರವಾರ ಪ್ರಕಟಿಸಿದ್ದಾರೆ.

ನಕಲಿ ಖಾತೆಗಳ ಬಗ್ಗೆ ಮಾಹಿತಿ ಒದಗಿಸಲು ಈ ಸಾಮಾಜಿಕ ಜಾಲತಾಣ ಕಂಪನಿ ವಿಫಲವಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಈ ನಿರ್ಧಾರದಿಂದಾಗಿ ವಿಸ್ತರಿತ ಟ್ರೇಡಿಂಗ್‍ನಲ್ಲಿ ಟ್ವಿಟ್ಟರ್ ಷೇರುಗಳು ಶೇಕಡ 7ರಷ್ಟು ಕುಸಿತ ದಾಖಲಿಸಿದವು. ಮಸ್ಕ್ ಅವರು ಕಳೆದ ಏಪ್ರಿಲ್‍ನಲ್ಲಿ ಪ್ರತಿ ಷೇರಿಗೆ 54.20 ಡಾಲರ್ ಮೌಲ್ಯ ಘೋಷಿಸಿದ್ದರು.

ಇದೀಗ ಉಭಯ ಸಂಸ್ಥೆಗಳ ವಿಲೀನ ಒಪ್ಪಂದವನ್ನು ಉಲ್ಲಂಘಿಸಿದ್ದಕ್ಕಾಗಿ ಮಸ್ಕ್ ವಿರುದ್ಧ ಕಾನೂನು ಕ್ರಮ ಆರಂಭಿಸುವ ಬಗ್ಗೆ ಆಡಳಿತ ಮಂಡಳಿ ಚಿಂತನೆ ನಡೆಸಿದೆ ಎಂದು ಟ್ವಿಟ್ಟರ್ ಅಧ್ಯಕ್ಷ ಬ್ರೆಟ್ ಟೇಲೊ ಪ್ರಕಟಿಸಿದ್ದಾರೆ. ಮಸ್ಕ್ ಅವರ ಜತೆ ಮಾಡಿಕೊಂಡ ಒಪ್ಪಂದದ ಬೆಲೆ ಹಾಗೂ ಷರತ್ತುಗಳಿಗೆ ಅನುಸಾರವಾಗಿ ಒಪ್ಪಂದ ಜಾರಿಗೆ ಟ್ವಿಟ್ಟರ್ ಆಡಳಿತ ಮಂಡಳಿ ಸಿದ್ಧವಿದೆ ಎಂದು ಅವರು ಹೇಳಿದ್ದಾರೆ.

ಪ್ಲಾಟ್‍ಫಾರಂನ ವ್ಯಾಪಾರ ಸಾಧನೆಗೆ ಮೂಲ ಎನಿಸಿದ ನಕಲಿ ಅಥವಾ ಸ್ಪ್ಯಾಮ್ ಖಾತೆಗಳ ಬಗ್ಗೆ ಮಾಹಿತಿ ನೀಡುವಂತೆ ಹಲವು ಬಾರಿ ಮಾಡಿಕೊಂಡ ಮನವಿಗಳಿಗೆ ಸ್ಪಂದಿಸಲು ಟ್ವಿಟ್ಟರ್ ವಿಫಲವಾಗಿದೆ ಎಂದು ಮಸ್ಕ್ ಅವರ ವಕೀಲರು ಫೈಲಿಂಗ್‍ನಲ್ಲಿ ವಿವರಿಸಿದ್ದಾರೆ.

"ಒಪ್ಪಂದದ ಹಲವು ನಿಬಂಧನೆಗಳನ್ನು ಟ್ವಿಟ್ಟರ್ ಉಲ್ಲಂಘಿಸಿದೆ. ಮಸ್ಕ್ ಅವರಿಗೆ ಸುಳ್ಳು ಹಾಗೂ ತಪ್ಪುದಾರಿಗೆ ಎಳೆಯುವಂಥ ಮಾಹಿತಿ ನೀಡಿದಂತೆ ಕಂಡುಬರುತ್ತಿದೆ. ಮಸ್ಕ್ ಇದನ್ನು ನಂಬಿ ವಿಲೀನ ಒಪ್ಪಂದಕ್ಕೆ ಮುಂದಾಗಿದ್ದರು" ಎಂದು ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News