×
Ad

ನಾವುಂದ: ಭಾರೀ ಮಳೆಗೆ ಸರಕಾರಿ ಶಾಲಾ ಕಟ್ಟಡ ಕುಸಿತ

Update: 2022-07-09 20:56 IST

ಬೈಂದೂರು : ಭಾರೀ ಮಳೆಯಿಂದಾಗಿ ಉಪ್ಪುಂದ ಗ್ರಾಪಂ ವ್ಯಾಪ್ತಿಯ ಅಮ್ಮನವರ ತೊಪ್ಲು ಎಂಬಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡ ಕುಸಿದಿರುವ ಘಟನೆ ಶುಕ್ರವಾರ ಸಂಜೆ ವೇಳೆ ನಡೆದಿದೆ.

ಸುಮಾರು 15 ವರ್ಷಗಳ ಹಿಂದಿನ ಮೂರು ಕೊಠಡಿಗಳುಳ್ಳ ಈ ಕಟ್ಟಡದ ಮೇಲ್ಮಾಡು ಸಹಿತ ಗೋಡೆಗಳು ಕುಸಿದಿವೆ. ಶಾಲೆಗೆ ರಜೆಯಿದ್ದ ಕಾರಣ ಹಾಗೂ ಸಂಜೆ ಮೇಲೆ ಶಾಲಾ ಕಟ್ಟಡ ಕುಸಿದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಅಮ್ಮನವರ ತೊಪ್ಲು ಪರಿಸರದ 60ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಶಾಲೆ ಯಲ್ಲಿ ಕಲಿಯುತ್ತಿದ್ದಾರೆ. ಮೂರು ಕೊಠಡಿಯಲ್ಲಿ ೧ ರಿಂದ ೫ ನೇ ತರಗತಿಗಳು ನಡೆಯುತ್ತಿತ್ತು. ಆದರೆ ಕೆಲ ವರ್ಷಗಳಿಂದ ಮಳೆಗಾಲದ ಮೂರು ತಿಂಗಳು ಸಮೀಪದ ಶಾಲೆ ಕಟ್ಟಡದಲ್ಲಿ ಪಾಠ ನಡೆಯುತ್ತಿತ್ತು. ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ಸ್ಥಳೀಯರು ಬೇಡಿಕೆಯಿಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಉಪ್ಪುಂದ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ, ಸದಸ್ಯ ಶ್ರೀಧರ್, ಪಿಡಿಒ ರಿಯಾಝ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗರಾಜ್ ಮೊದಲಾದವರು ಭೇಟಿ ನೀಡಿದ್ದಾರೆ.

ಚಿತ್ತೂರಿನಲ್ಲಿ ಗುಡ್ಡ ಕುಸಿತ

ಭಾರೀ ಮಳೆಯಿಂದಾಗಿ ಕುಂದಾಪುರ ತಾಲೂಕಿನ ಚಿತ್ತೂರು ಗ್ರಾಮದ ಮಹಾಬಲ ಶೆಟ್ಟಿ ಕೈಲಾಡಿ ಎಂಬವರ ಮನೆಯ ಬಳಿಯ ಗುಡ್ಡೆ ಕುಸಿದಿರುವ ಬಗ್ಗೆ ವರದಿಯಾಗಿದೆ.

ಗುಡ್ಡೆ ಕುಸಿತದಿಂದ ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಗುಡ್ಡದ ಬಳಿಯ ಮನೆಯಲ್ಲಿರುವ ಮಹಾಬಲ ಶೆಟ್ಟಿ ಹಾಗೂ ಪತ್ನಿ ತನ್ನ ಮಗನ ಮನೆಗೆ ಹೋಗಿದ್ದಾರೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಾಳೆಬರೆ ಘಾಟಿಯಲ್ಲಿ ಜಲಧಾರೆ

ಕುಂದಾಪುರದಿಂದ ಸಿದ್ದಾಪುರ ಮಾರ್ಗವಾಗಿ ಶಿವಮೊಗ್ಗ ಹಾಗೂ ಹೊಸನಗರ ಸಂಪರ್ಕದ ನಡುವೆ ಹುಲಿಕಲ್ ಬಾಳೆಬರೆ ಘಾಟಿಯಲ್ಲಿನ ಜಲಧಾರೆಯು ಭಾರೀ ಮಳೆಯಿಂದಾಗಿ ತುಂಬಿ ಹರಿಯುತ್ತಿದೆ.

ಈ ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ, ಪ್ರವಾಸಿಗರಿಗೆ ಈ ಜಲಧಾರೆ ಮುದ ನೀಡುತ್ತಿದೆ. ನೂರಾರು ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಧಾರೆ ಕಣ್ತುಂಬಿಕೊಳ್ಳಲು ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಎಲ್ಲೆಡೆ ಮೀನುಗಳ ಬೇಟೆ

ಮಳೆಗಾಲದಲ್ಲಿ ಸಮುದ್ರದಲ್ಲಿ ಮೀನುಗಾರಿಕೆ ಇಲ್ಲದ ಹಿನ್ನೆಲೆಯಲ್ಲಿ ಕುಂದಾಪುರ ತಾಲೂಕಿನ ಹಲವೆಡೆ ಗದ್ದೆ, ತೋಡು, ಹೊಳೆಸಾಲುಗಳಲ್ಲಿ ಮೀನುಗಳ ಬೇಟೆ ಜೋರಾಗಿರುವುದು ಕಂಡು ಬರುತ್ತಿದೆ.

ಗದ್ದೆ, ಹೊಳೆ ಸಾಲು, ತೋಡುಗಳಲ್ಲಿ ನೀರು ಹೆಚ್ಚಾಗಿ ಹರಿಯುವುದರಿಂದ ಅದರಲ್ಲಿ ಕಾಟ್ಲಾ, ಶಾಡಿ, ಐರ್ ಮೊದಲಾದ ಮೀನುಗಳು ಬರುತ್ತಿವೆ. ಕಾಟ್ಲಾ ಮೀನಿಗೆ ಭಾರೀ ಬೇಡಿಕೆ ಇರುತ್ತದೆ. ಇತ್ತೀಚೆಗೆ ಮಲ್ಯಾಡಿಯಲ್ಲಿ ಯುವಕರ ತಂಡ ಕೆ.ಜಿ.ಗಟ್ಟಲೇ ಮೀನು ಹಿಡಿದಿದ್ದಾರೆ. ಸಮುದ್ರದಲ್ಲಿ ಮೀನುಗಾರಿಕೆ ಇಲ್ಲದ ಕಾರಣ ಈ ಮೀನಿಗೆ ಬೇಡಿಕೆಯೂ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News