×
Ad

ಬಂಟ್ವಾಳ: ಅವೈಜ್ಞಾನಿಕ ಮಣ್ಣು ಅಗೆತ; ಕುಸಿಯುವ ಭೀತಿಯಲ್ಲಿ ಕುಡಿಯುವ ನೀರಿನ ಟ್ಯಾಂಕ್

Update: 2022-07-11 12:17 IST

ಬಂಟ್ವಾಳ, ಜು.11: ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಸಮೀಪದ ಉಪ್ಪುಗುಡ್ಡೆಯಲ್ಲಿರುವ ಪುರಸಭೆಗೆ ಸೇರಿದ ಸಮಗ್ರ ಕುಡಿಯುವ ನೀರು ಸರಬರಾಜಿನ ಬೃಹತ್ ಟ್ಯಾಂಕ್ ಕುಸಿಯುವ ಭೀತಿ ಎದುರಿಸುತ್ತಿದೆ.

ಟ್ಯಾಂಕ್ ಅಡಿಭಾಗದ ಖಾಸಗಿ ಜಮೀನಿನವರು ಅವೈಜ್ಞಾನಿಕವಾಗಿ ಮಣ್ಣು ಅಗೆದಿರುವುದು ಟ್ಯಾಂಕ್ ಕುಸಿತದ ಭೀತಿ ಎದುರಿಸಲು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಟ್ಯಾಂಕ್ ಕುಸಿದರೆ ಈ ಭಾಗದ ಪ್ರದೇಶಗಳಿಗೆ ಹೊಸ ಟ್ಯಾಂಕ್ ನಿರ್ಮಾಣವಾಗುವ ವರೆಗೆ ನೀರು ಪೂರೈಕೆ ಕಡಿತಗೊಳ್ಳಲಿದೆ.

ಟ್ಯಾಂಕ್ ಅಡಿಭಾಗದ ಖಾಸಗಿ ಜಮೀನಿನವರು ಮಣ್ಣು ಅಗೆತದ ಆರಂಭಿದಲ್ಲೇ ಸ್ಥಳೀಯರು ಈ ಬಗ್ಗೆ ಆತಂಕ ವ್ಯಕ್ತಪಡಿಸಿ ಪುರಸಭೆ ಅಧಿಕಾರಿಗಳಿಗೆ ದೂರು‌ ನೀಡಿದ್ದರು. ಸ್ಥಳೀಯರ ದೂರಿನ ಹಿನ್ನಲೆಯಲ್ಲಿ ಸ್ವತಃ ಪರಿಶೀಲನೆ ನಡೆಸಿದ್ದ ಪುರಸಭೆಯ ಅಧಿಕಾರಿಗಳು ವೈಜ್ಞಾನಿಕವಾಗಿ ಮಣ್ಣು ಅಗೆದು ಟ್ಯಾಂಕ್ ಸುರಕ್ಷತೆಗೆ ಒತ್ತು ನೀಡುವಂತೆ ಜಮೀನು ಮಾಲಕರಿಗೆ ಸೂಚಿಸಿದ್ದರು ಎನ್ನಲಾಗಿದೆ. 

ಪುರಸಭೆ ಅಧಿಕಾರಿಗಳ ಸೂಚನೆಯನ್ನೂ ಲೆಕ್ಕಿಸದೆ ಅವೈಜ್ಞಾನಿಕವಾಗಿ ಮತ್ತಷ್ಟು ಮಣ್ಣು ಅಗೆದಿರುವುದರಿಂದ ಇದೀಗ ಪುರಸಭಾ ಟ್ಯಾಂಕ್ ಕುಸಿತದ ಅಪಾಯ ಎದುರಿಸುತ್ತಿದೆ. 

ಮತ್ತೆ ಎಚ್ಚೆತ್ತುಕೊಂಡಿರುವ ಪುರಸಭಾಡಳಿತ ಹಾಗೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದರಾದರೂ ಟ್ಯಾಂಕ್ ಕುಸಿತ ಭೀತಿ ತಪ್ಪಿಸಲು ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬ ಚಿಂತನೆ ನಡೆಸುತ್ತಿದ್ದಾರೆ. 

ರಾಜಕೀಯ ಪ್ರಭಾವಗಳಿಗೆ ಬಲಿಯಾಗಿ ಅಧಿಕಾರಿಗಳು ವಾಸ್ತವಕ್ಕೆ ವಿರುದ್ಧವಾಗಿ ವರ್ತಿಸುತ್ತಿರುವ ಕಾರಣಗಳಿಂದ ಇಂತಹ ಅನಾಹುತಕಾರಿ ಸನ್ನಿವೇಶಗಳು ಎದುರಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News