ಆರಂಭಿಕ ಬ್ರಹ್ಮಾಂಡದ ಕಲರ್‌ ಫೋಟೊ ರವಾನಿಸಿದ ಜೇಮ್ಸ್ ವೆಬ್ ದೂರದರ್ಶಕ

Update: 2022-07-12 16:17 GMT

ವಾಷಿಂಗ್ಟನ್, ಜು.12: ಜೇಮ್ಸ್ ವೆಬ್ ದೂರದರ್ಶಕ ರವಾನಿಸಿದ ಆರಂಭಿಕ ಬ್ರಹ್ಮಾಂಡದ ಆಳವಾದ ಇನ್ಫ್ರಾರೆಡ್ (ಬೆಳಕಿಗಿಂತ ಉದ್ದವಾದ ಆದರೆ ರೇಡಿಯೊ ತರಂಗಗಳಿಗಿಂತ ಚಿಕ್ಕದಾದ ಬೆಳಕಿನ ಕಿರಣ) ಚಿತ್ರವನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಸೋಮವಾರ ಬಿಡುಗಡೆಗೊಳಿಸಿದೆ.

 ಶ್ವೇತಭವನದಲ್ಲಿ ಸುದ್ಧಿಗೋಷ್ಟಿಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಈ ಚಿತ್ರವನ್ನು ಬಿಡುಗಡೆಗೊಳಿಸಿದರು. ನಾಸಾದ ದೂರದರ್ಶಕದಿಂದ ಮೊದಲ ಚಿತ್ರವನ್ನು ಅನಾವರಣಗೊಳಿಸಿರುವುದು ಒಂದು ಐತಿಹಾಸಿಕ ದಿನವಾಗಿದ್ದು ಇದು ನಮ್ಮ ಬ್ರಹ್ಮಾಂಡಕ್ಕೆ ಹೊಸ ಕಿಟಕಿಯನ್ನು ನೀಡಿದೆ. ಇದೊಂದು ಅಚ್ಚರಿಯಾಗಿದ್ದು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ, ಅಮೆರಿಕ ಮತ್ತು ಎಲ್ಲಾ ಮಾನವೀಯತೆಗೆ ಐತಿಹಾಸಿಕ ಕ್ಷಣವಾಗಿದೆ ಎಂದು ಬೈಡನ್ ಈ ಸಂದರ್ಭ ಹೇಳಿದರು.

 ಸುಮಾರು 4.6 ಬಿಲಿಯನ್ ವರ್ಷಗಳಷ್ಟು ಹಿಂದಿನ, ಎಸ್ಎಮ್ಎಸಿಎಸ್ 0723 ಎಂದು ಕರೆಯಲಾಗುವ , ನೀಲಿ, ಕಿತ್ತಳೆ ಹಾಗೂ ಬಿಳಿಬಣ್ಣದ ಆಕರ್ಷಕವಾದ ನಕ್ಷತ್ರಪುಂಜಗಳನ್ನು ಈ ಫೋಟೋ ಒಳಗೊಂಡಿದೆ. ಈ ನಕ್ಷತ್ರಪುಂಜಗಳು ಗುರುತ್ವಾಕರ್ಷಣೆಯ ಮಸೂರದಂತೆ ಕಾರ್ಯನಿರ್ವಹಿಸುತ್ತದೆ ಮತ್ತು ದೂರದ ವಸ್ತುಗಳನ್ನು ದೊಡ್ಡದಾಗಿ ತೋರಿಸುತ್ತದೆ.

 ಇದು ಇದುವರೆಗೆ ತೆಗೆದ ದೂರದ ಬ್ರಹ್ಮಾಂಡದ ಅತ್ಯಂತ ಆಳವಾದ ಮತ್ತು ತೀಕ್ಷ್ಣವಾದ ವರ್ಣಚಿತ್ರವಾಗಿದೆ ಎಂದು ನಾಸಾ ಹೇಳಿದೆ. ಕಳೆದ ವರ್ಷದ ಡಿಸೆಂಬರ್ 25ರಂದು ಬಾಹ್ಕಾಕಾಶಕ್ಕೆ ರವಾನಿಸಿರುವ ಜೇಮ್ಸ್ ವೆಬ್ ದೂರದರ್ಶಕ ವರ್ಷದ ಅತ್ಯಂತ ಬೃಹತ್ ಮತ್ತು ಶಕ್ತಿಶಾಲಿ ಬಾಹ್ಯಾಕಾಶ ವಿಜ್ಞಾನ ಟೆಲಿಸ್ಕೋಪ್ ಆಗಿದ್ದು ಇದನ್ನು ಸುಮಾರು 10 ಶತಕೋಟಿ ಡಾಲರ್ ವೆಚ್ಚದಲ್ಲಿ ನಿರ್ಮಿಸಲಾಗಿದೆ. 
ವಿಶ್ವರಚನೆಯ ಆರಂಭಿಕ ಹಂತದಲ್ಲಿ ಸೃಷ್ಟಿಯಾದ ಖಗೋಳಿಯ ವಸ್ತುಗಳ ಪೂರ್ಣ ವರ್ಣಚಿತ್ರಗಳನ್ನು ಜೇಮ್ಸ್ವೆಬ್ ಟೆಲಿಸ್ಕೋಪ್ ಭೂಮಿಗೆ ರವಾನಿಸಲಿದೆ.

ಈ ಚಿತ್ರವು ಬ್ರಹ್ಮಾಂಡದ ಒಂದು ಸಣ್ಣ ಭಾಗವನ್ನು ಮಾತ್ರ ತೋರಿಸುತ್ತದೆ. ಕೇವಲ ಒಂದು ನಕ್ಷತ್ರಪುಂಜವಿದೆ ಎಂದು ನೂರು ವರ್ಷದ ಹಿಂದೆ ನಾವು ಭಾವಿಸಿದ್ದೆವು. ಈಗ ಈ ಸಂಖ್ಯೆ ಅಪರಿಮಿತವಾಗಿದೆ. ನಮ್ಮ ನಕ್ಷತ್ರಪುಂಜದಲ್ಲಿ ಕೋಟ್ಯಾಂತರ ನಕ್ಷತ್ರಗಳು ಅಥವಾ ಸೂರ್ಯರಿದ್ದಾರೆ. ಕೋಟ್ಯಾಂತರ ನಕ್ಷತ್ರ, ಸೂರ್ಯರನ್ನು ಹೊಂದಿರುವ ಕೋಟ್ಯಾಂತರ ನಕ್ಷತ್ರಪುಂಜಗಳಿವೆ. ನಾವೀಗ ಅದರ ಪ್ರಥಮ ಕಿರುನೋಟವನ್ನು ಗಮನಿಸಿದ್ದೇವೆ ಎಂದು ನಾಸಾದ ನಿರ್ವಾಹಕ ಬಿಲ್ ನೆಲ್ಸನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News