ಅಸ್ಸಾಂ: ಪ್ರಾಣಿ ಹಕ್ಕು ಹೋರಾಟಗಾರ ಆತ್ಮಹತ್ಯೆ; ಆರೋಪಿ ಬೈದುಲ್ಲಾ ಖಾನ್ ಮನೆ ಧ್ವಂಸಗೊಳಿಸಿದ ಜಿಲ್ಲಾಡಳಿತ

Update: 2022-07-12 16:50 GMT
Photo : NDTV 

ಗುವಾಹಟಿ, ಜು. 12: ದಿಬ್ರುಗಢ ಜಿಲ್ಲಾಡಳಿತ ಮಂಗಳವಾರ ಬೆಳಗ್ಗೆ ಮೇಲಿನ ಅಸ್ಸಾಂನ ಘೋರಮಾರದಲ್ಲಿ ತೆರವು ಕಾರ್ಯಾಚರಣೆ ನಡೆಸಿದೆ ಹಾಗೂ ಬೈದುಲ್ಲಾ ಖಾನ್ ಎಂಬವರ ಮನೆಯನ್ನು ಧ್ವಂಸಗೊಳಿಸಿದೆ. ಉದ್ಯಮಿ ಹಾಗೂ ಪ್ರಾಣಿ ಹಕ್ಕುಗಳ ಹೋರಾಟಗಾರ ವಿನೀತ್ ಬಗಾರಿಯಾ ಆತ್ಮಹತ್ಯೆ ಪ್ರಕರಣದಲ್ಲಿ ಬೈದುಲ್ಲಾ ಖಾನ್ ಪ್ರಮುಖ ಆರೋಪಿಯಾಗಿದ್ದಾರೆ.

ದಿಬ್ರುಗಢ ಜಿಲ್ಲಾಡಳಿತ ಜುಲೈ 8ರಂದು ಆರೋಪಿ ಬೈದುಲ್ಲಾ ಖಾನ್‌ಗೆ ನೋಟಿಸು ನೀಡಿತ್ತು. ನೋಟಿಸಿನಲ್ಲಿ ಅವರು ಎರಡು ಮಹಡಿಯ ಕಟ್ಟಡವನ್ನು ಕಾನೂನೂ ಬಾಹಿರವಾಗಿ ನಿರ್ಮಿಸಲಾಗಿದೆ ಎಂದು ಹೇಳಲಾಗಿತ್ತು.  

‘‘ಜಿಲ್ಲಾಡಳಿತದಿಂದ ಅನುಮತಿ ಪಡೆಯದೆ ರಸ್ತೆಯಲ್ಲಿ ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಿಸಲಾಗಿದೆ. ಜುಲೈ 8ರಂದು ನಾವು ನೋಟಿಸು ನೀಡಿದ್ದೇವೆ. ಇಂದು ನಾವು ತೆರವು ಕಾರ್ಯಾಚರಣೆ ನಡೆಸಿದ್ದೇವೆ. ಎರಡು ಮಹಡಿಯ ಕಟ್ಟಡವನ್ನು ಧ್ವಂಸಗೊಳಿಸಿದ್ದೇವೆ’’ ಎಂದು ದಿಬ್ರುಗಢದ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಕೇಂದ್ರ ಕಚೇರಿ) ಬಿಟುಲ್ ಚೇಟಿಯಾ ಅವರು ತಿಳಿಸಿದ್ದಾರೆ. 

‘‘ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು’’ ಎಂದು ಅಸ್ಸಾಂನ ವಿಶೇಷ ಡಿಜಿಪಿ (ಕಾನೂನು ಹಾಗೂ ಸುವ್ಯವಸ್ಥೆ) ಜಿ.ಪಿ. ಸಿಂಗ್ ಹೇಳಿದ್ದಾರೆ. 
ಪ್ರಮುಖ ಉದ್ಯಮಿ ಹಾಗೂ ಪ್ರಾಣಿ ಹಕ್ಕು ಹೋರಾಟಗಾರ ವಿನೀತ್ ಬಗರಿಯಾ ಅವರು ದಿಬ್ರುಗಢದ ಶಾನಿ ಮಂದಿರ್ ರಸ್ತೆಯಲ್ಲಿರುವ ತನ್ನ ನಿವಾಸದಲ್ಲಿ ಗುರುವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಅವರು ವೀಡಿಯೊ ಮಾಡಿದ್ದರು. ಈ ವೀಡಿಯೊದಲ್ಲಿ ತುಂಡು ಭೂಮಿಗಾಗಿ ಬೈದುಲ್ಲಾ ಖಾನ್, ಸಂಜಯ್ ಶರ್ಮಾ ಹಾಗೂ ನಿಶಾಂತ್ ಶರ್ಮಾ ಅವರು ತನಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News