ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಗೆ ʼತಣ್ಣನೆಯ ಚಹಾʼ ನೀಡಿದ್ದ ಅಧಿಕಾರಿಗೆ ಸಂಕಷ್ಟ

Update: 2022-07-12 16:53 GMT
photo : twitter

ಛತ್ತರಪುರ,ಜು.12: ಛತ್ತರಪುರ ಜಿಲ್ಲೆಯ ಖುಜರಾಹೊ ವಿಮಾನ ನಿಲ್ದಾಣದಲ್ಲಿ ಸೋಮವಾರ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಅವರಿಗೆ ‘ತಣ್ಣಗಾಗಿದ್ದ ಮತ್ತು ಕಳಪೆ ಗುಣಮಟ್ಟದ ’ಚಹಾ ಒದಗಿಸಿದ್ದಕ್ಕಾಗಿ ಸರಕಾರಿ ಅಧಿಕಾರಿಯೋರ್ವರಿಗೆ ನೋಟಿಸ್ ಜಾರಿಗೊಳಿಸಲಾಗಿತ್ತಾದರೂ ವ್ಯಾಪಕ ಆಕ್ರೋಶದ ಬಳಿಕ ಅದನ್ನು ಹಿಂದೆಗೆದುಕೊಳ್ಳಲಾಗಿದೆ.

 ಮುಖ್ಯಮಂತ್ರಿಗಳಿಗೆ ಚಹಾ ಮತ್ತು ತಿಂಡಿ ವ್ಯವಸ್ಥೆಯ ಹೊಣೆ ಹೊಂದಿದ್ದ ಕಿರಿಯ ಪೂರೈಕೆ ಅಧಿಕಾರಿ ರಾಕೇಶ ಕನುವಾ ಅವರಿಗೆ ಶೋ-ಕಾಸ್ ನೋಟಿಸ್ ಹೊರಡಿಸಲಾಗಿದೆ ಎಂದು ರಾಜನಗರ ಉಪವಿಭಾಗಾಧಿಕಾರಿ ಡಿ.ಪಿ.ದ್ವಿವೇದಿ ಸುದ್ದಿಸಂಸ್ಥೆಗೆ ತಿಳಿಸಿದ್ದರು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತವಾದ ಬಳಿಕ ಜಿಲ್ಲಾಧಿಕಾರಿ ಸಂದೀಪ್ ಜಿ.ಆರ್.ಅವರು ದ್ವಿವೇದಿ ಹೊರಡಿಸಿದ್ದ ನೋಟಿಸನ್ನು ರದ್ದುಗೊಳಿಸಿದ್ದಾರೆ.
ಮುಖ್ಯಮಂತ್ರಿಗಳು ವಿಮಾನ ನಿಲ್ದಾಣದಲ್ಲಿ ಮೊಕ್ಕಾಂ ಮಾಡಿರಲಿಲ್ಲ,ಅವರು ಏರ್ಸ್ಟ್ರಿಪ್ನಲ್ಲಿ ವಿಮಾನವನ್ನು ಮಾತ್ರ ಬದಲಿಸಿದ್ದರು. ಹೀಗಾಗಿ ಕನುವಾ ವ್ಯವಸ್ಥೆ ಮಾಡಿದ್ದ ಚಹಾ ಮತ್ತು ತಿಂಡಿಯನ್ನು ಅವರಿಗೆ ಒದಗಿಸಲಾಗಿರಲಿಲ್ಲ ಎಂದು ದ್ವಿವೇದಿ ಸ್ಪಷ್ಟ ಪಡಿಸಿದರು.


 ಚೌಹಾಣ್ ನಗರ ಸಂಸ್ಥೆಗಳ ಚುನಾವಣಾ ಪ್ರಚಾರಕ್ಕಾಗಿ ರೇವಾಕ್ಕೆ ಪ್ರಯಾಣಿಸುತ್ತಿದ್ದರು. ಖುಜರಾಹೊ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿಗಳಿಗೆ ಚಹಾ ಮತ್ತು ತಿಂಡಿಯನ್ನು ಒದಗಿಸುವ ಹೊಣೆಯನ್ನು ಕನುವಾಗೆ ವಹಿಸಲಾಗಿತ್ತು, ಕನುವಾ ವ್ಯವಸ್ಥೆ ಮಾಡಿದ್ದ ಚಹಾ ತಣ್ಣಗಾಗಿತ್ತು ಮತ್ತು ಕಳಪೆ ಗುಣಮಟ್ಟದ್ದಾಗಿತ್ತು ಎಂದು ದ್ವಿವೇದಿ ತಿಳಿಸಿದರು. ಇದು ಜಿಲ್ಲಾಡಳಿತಕ್ಕೆ ಮುಜುಗರದ ಸ್ಥಿತಿಯನ್ನು ಉಂಟು ಮಾಡುತ್ತದೆ ಮತ್ತು ವಿವಿಐಪಿಗಳಿಗೆ ಮೀಸಲಾದ ಶಿಷ್ಟಾಚಾರಗಳ ಬಗ್ಗೆ ಪ್ರಶ್ನೆಗಳನ್ನೆತ್ತುತ್ತದೆ. ಈ ಬಗ್ಗೆ ಮೂರು ದಿನಗಳಲ್ಲಿ ವಿವರಣೆ ನೀಡುವಂತೆ ನೋಟಿಸ್ನಲ್ಲಿ ಸೂಚಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News