ಟೋಲ್ ಪ್ಲಾಝಾ ಸಿಬ್ಬಂದಿಗೆ ಗ್ರೇಟ್ ಖಲಿ ಹಲ್ಲೆ: ಆರೋಪ

Update: 2022-07-13 03:08 GMT

ಚಂಡೀಗಢ: ಡಬ್ಲ್ಯುಡಬ್ಲ್ಯುಇ ಕುಸ್ತಿ ಜಗತ್ತಿನಲ್ಲಿ ಗ್ರೇಟ್ ಖಲಿ ಎಂದೇ ಕರೆಸಿಕೊಂಡಿರುವ ದಿಲೀಪ್ ಸಿಂಗ್ ರಾಣಾ ಲೂದಿಯಾನಾದಲ್ಲಿ ಟೋಲ್ ಪ್ಲಾಜಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಆದರೆ ಆರೋಪವನ್ನು ಮಾಜಿ ಡಬ್ಲ್ಯುಡಬ್ಲ್ಯುಇ ಕುಸ್ತಿಪಟು ನಿರಾಕರಿಸಿದ್ದು, ಟೋಲ್ ಪ್ಲಾಜಾ ಸಿಬ್ಬಂದಿ ತಮ್ಮ ಜತೆ ಅನುಚಿತವಾಗಿ ವರ್ತಿಸಿದರು ಎಂದು ಪ್ರತ್ಯಾರೋಪ ಮಾಡಿದ್ದಾರೆ.

ಲೋದೋವಾಲ್ ಟೋಲ್ ಪ್ಲಾಝಾದ ಸಿಬ್ಬಂದಿ ಜತೆ ರಾಣಾ ವಾಗ್ವಾದ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸೋಮವಾರ ಈ ಘಟನೆ ನಡೆದಿದೆ ಎನ್ನಲಾಗಿದೆ. ಆದರೆ ಮಾಜಿ ಡಬ್ಲ್ಯುಡಬ್ಲ್ಯುಇ ಸೂಪರ್‌ ಸ್ಟಾರ್‌, ಯಾರಿಗೂ ಹೊಡೆಯುತ್ತಿರುವುದು ವಿಡಿಯೊದಲ್ಲಿ ಕಾಣಿಸುತ್ತಿಲ್ಲ.

ರಾಣಾ ಜಲಂಧರ್‌ ನಿಂದ ಹರ್ಯಾಣದ ಕರ್ನಲ್‍ಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಎರಡೂ ಕಡೆಯವರು ಈ ಬಗ್ಗೆ ಯಾವುದೇ ದೂರು ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೇ, ಟೋಲ್ ಪ್ಲಾಝಾ ಸಿಬ್ಬಂದಿ ತಮ್ಮ ಜತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ರಾಣಾ ಮಂಗಳವಾರ ಆಪಾದಿಸಿದ್ದಾರೆ.

ಮುಂದೆ ಯಾವುದೇ ಸೆಲೆಬ್ರಿಟಿಗಳ ಜತೆ ಅನುಚಿತವಾಗಿ ವರ್ತಿಸದಂತೆ ತಡೆಯಲು ಟೋಲ್ ಪ್ಲಾಝಾ ಗುತ್ತಿಗೆದಾರರು ಅನುಚಿತವಾಗಿ ವರ್ತಿಸಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಟೋಲ್ ಪ್ಲಾಝಾ ಸಿಬ್ಬಂದಿ ತಮ್ಮನ್ನು ಬ್ಲ್ಯಾಕ್‍ಮೇಲ್ ಮಾಡಿದ್ದಾರೆ ಎಂದೂ ಅವರು ಆಪಾದಿಸಿದ್ದಾರೆ.

ಗುರುತಿನ ಚೀಟಿ ಕೇಳಿದಾಗ ನೀವು ಸಹೋದ್ಯೋಗಿಗೆ ಹೊಡೆದದ್ದು ಏಕೆ ಎಂದು ಮತ್ತೊಬ್ಬ ಟೋಲ್ ಪ್ಲಾಝಾ ಸಿಬ್ಬಂದಿ ಪ್ರಶ್ನಿಸುತ್ತಿರುವುದು ವಿಡಿಯೊದಲ್ಲಿ ಕೇಳಿ ಬರುತ್ತಿದೆ ಎಂದು newindianexpress.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News