ಆರ್ಥಿಕ ಸಂಕಷ್ಟದ ನಡುವೆ ಶ್ರೀಲಂಕಾ ಅಧ್ಯಕ್ಷರ ಪಲಾಯನ!

Update: 2022-07-13 10:38 GMT
ಗೊಟಬಯ ರಾಜಪಕ್ಸೆ

ಕೊಲಂಬೊ: ದೇಶ ಆರ್ಥಿಕ ಸಂಕಷ್ಟದಿಂದ ಜರ್ಜರಿತವಾಗಿ, ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಬುಧವಾರ ನಸುಕಿನಲ್ಲಿ ದೇಶದಿಂದ ಪಲಾಯನ ಮಾಡಿದ್ದಾರೆ ಎಂದು timesofindia.com ವರದಿ ಮಾಡಿದೆ.

ದೇಶದಲ್ಲಿ ಆಹಾರ ಮತ್ತು ಇಂಧನ ಕೊರತೆ ವ್ಯಾಪಕವಾದ ಹಿನ್ನೆಲೆಯಲ್ಲಿ ಮೂರು ತಿಂಗಳಿಂದ ಪ್ರತಿಭಟನೆ ನಡೆಯುತ್ತಿದ್ದು, ಎರಡು ದಿನಗಳ ಹಿಂದಷ್ಟೇ ಪ್ರತಿಭಟನಾಕಾರರು ಅವರ ಅಧಿಕೃತ ನಿವಾಸಕ್ಕೆ ನುಗ್ಗಿ ದಾಂಧಲೆ ನಡೆಸಿದ್ದರು. ಜತೆಗೆ ಪ್ರಧಾನಿ ನಿವಾಸಕ್ಕೆ ಬೆಂಕಿ ಹಚ್ಚಿದ್ದರು.

ಬುಧವಾರ ಬೆಳಗಿನ ಜಾವ ಅಧ್ಯಕ್ಷ ಗೊಟಬಯ ರಾಜಪಕ್ಸೆ, ಅವರ ಪತ್ನಿ ಹಾಗೂ ಇಬ್ಬರು ಪುತ್ರಿಯರು ಮಾಲ್ಡೀವ್ಸ್ ರಾಜಧಾನಿ ಮಾಲೆಗೆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ ಎಂದು ಇಮಿಗ್ರೇಶನ್ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.

ತೀವ್ರ ಒತ್ತಡದ ಹಿನ್ನೆಲೆಯಲ್ಲಿ ರಾಷ್ಟ್ರಾಧ್ಯಕ್ಷರ ಹುದ್ದೆ ತೊರೆಯಲು ರಾಜಪಕ್ಸೆ ಒಪ್ಪಿಕೊಂಡಿದ್ದು, ಹೊಸ ಸರ್ಕಾರ ರಚನೆಯಾದ ತಕ್ಷಣ ಅವರು ಅಧ್ಯಕ್ಷ ಸ್ಥಾನ ತೊರೆಯಲಿದ್ದಾರೆ ಎಂದು ಪ್ರಧಾನಿ ರನಿಲ್ ವಿಕ್ರಮಸಿಂಘೆ ಹೇಳಿದ್ದರು.

ಹೊಸ ಅಧ್ಯಕ್ಷರ ಆಯ್ಕೆಯನ್ನು ಮುಂದಿನ ವಾರ ನಡೆಸಲು ಸಂಸದರು ಒಪ್ಪಿಕೊಂಡಿದ್ದು, ದಿವಾಳಿಯಂಚು ತಲುಪಿರುವ ದೇಶವನ್ನು ಆರ್ಥಿಕ ಮತ್ತು ರಾಜಕೀಯ ಕುಸಿತದಿಂದ ಮೇಲೆತ್ತಬಲ್ಲ ಸರ್ಕಾರದ ರಚನೆಗೆ ಹೆಣಗಾಡುತ್ತಿದ್ದಾರೆ.

ನೂತನ ಅಧ್ಯಕ್ಷರನ್ನು ಜುಲೈ 20ರಂದು ಆಯ್ಕೆ ಮಾಡುವ ಸಾಧ್ಯತೆ ಇದ್ದು, ನೂತನ ಅಧ್ಯಕ್ಷರು, ಪ್ರಧಾನಿ ಹಾಗೂ ಸಚಿವ ಸಂಪುಟದ ಬಗ್ಗೆ ಇನ್ನು ಯಾವುದೇ ನಿರ್ಧಾರಕ್ಕೆ ಬರುವುದು ಸಾಧ್ಯವಾಗಿಲ್ಲ. ನೂತನ ಅಧ್ಯಕ್ಷರು ರಾಜಪಕ್ಸೆಯವರ ಅಧಿಕಾರಾವಧಿ ಮುಗಿಯುವವರೆಗೆ ಅಂದರೆ 2024ರವರೆಗೆ ರಾಷ್ಟ್ರಾಧ್ಯಕ್ಷರಾಗಿ ಇರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News