ರಾಜ್ಯದಲ್ಲಿ ವಾಟರ್ ಏರೋಡ್ರೋಮ್ ಅಭಿವೃದ್ಧಿಗೆ ನಿರ್ಧಾರ: ಸಚಿವ ವಿ.ಸೋಮಣ್ಣ

Update: 2022-07-13 12:40 GMT

ಬೆಂಗಳೂರು, ಜು 13: ನಾಗರಿಕ ವಿಮಾನ ಯಾನ ಸಂಪರ್ಕದ ಮೂಲಕ  ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವ ಜತೆಗೆ  ಆರ್ಥಿಕ ಪುನಶ್ಚೇತನದ ಉದ್ದೇಶದಿಂದ 9 ಕಡೆ ವಾಟರ್ ಏರೋಡ್ರೋಮ್ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ವಸತಿ ಹಾಗೂ ಮೂಲ ಸೌಕರ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಆಯೋಜಿಸಿದ್ದ 'ಕರ್ನಾಟಕದ ಸಮಗ್ರ ನಾಗರಿಕ ವಿಮಾನಯಾನ ನೀತಿ ರೂಪಣೆ' ಕುರಿತ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

"ಕಾಳಿ ನದಿ, ಬೈಂದೂರು, ಮಲ್ಪೆ, ಮಂಗಳೂರು, ತುಂಗಭದ್ರಾ, ಕೆಆರ್‌ಎಸ್‌, ಲಿಂಗನಮಕ್ಕಿ, ಆಲಮಟ್ಟಿ ಮತ್ತು ಹಿಡಕಲ್‌ ಜಲಾಶಯಗಳಲ್ಲಿ ವಾಟರ್‌ ಏರೋಡ್ರೋಮ್ಸ್‌ ಅಭಿವೃದ್ಧಿಪಡಿಸಲು ಸಂಭ್ಯಾವ್ಯ ಸ್ಥಳಗಳನ್ನಾಗಿ ಗುರುತಿಸಲಾಗಿದೆ,"ಎಂದರು. 

"ರಾಜ್ಯದ ಜನತೆಯ ಸರ್ವತೋಮುಖ ಅಭಿವೃದ್ಧಿಗಾಗಿ ಸಮಗ್ರ ನಾಗರಿಕ ವಿಮಾನಯಾನ ನೀತಿ ರೂಪಿಸುವುದು ಅಗತ್ಯ. ಈ ನೀತಿಯು ರಾಜ್ಯದ ವಿವಿಧ ಭಾಗಗಳ ಸಂಪರ್ಕ ವ್ಯವಸ್ಥೆ ಸುಧಾರಣೆಗೆ ಸಹಕಾರಿ ಆಗಲಿದೆ. ವಾಣಿಜ್ಯ ಕೈಗಾರಿಕೆ, ಪ್ರವಾಸೋದ್ಯಮ, ತೋಟಗಾರಿಕೆ ಹಾಗೂ ಕೃಷಿ ಉತ್ಪನ್ನಗಳ ರಪ್ತು, ತುರ್ತು ವೈದ್ಯಕೀಯ ಸೇವೆ, ಶೈಕ್ಷಣಿಕ ವಲಯಗಳ ಸಂಪರ್ಕ ಅಭಿವೃದ್ಧಿಗೆ ನಾಗರಿಕ ವಿಮಾನಯಾನ ಸೇವೆ ಪೂರಕವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಮಟ್ಟದ ಸಮಾಲೋಚನಾ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಈ ಕಾರ್ಯಗಾರದಿಂದ ಬರುವಂತಹ ಸಲಹೆಗಳು ಮತ್ತು ಅಭಿಪ್ರಾಯಗಳು ನಮ್ಮ ನೀತಿಯನ್ನು ರೂಪಿಸಲು ಸಹಕಾರಿಯಾಗಲಿದೆ,"ಎಂದರು. 

ಹೆಲಿಪೋರ್ಟ್‌ಗಳ ನಿರ್ಮಾಣ

ಮಡಿಕೇರಿ, ಚಿಕ್ಕಮಗಳೂರು ಮತ್ತು ಹಂಪಿಯಲ್ಲಿ ಹೆಲಿಪೋರ್ಟ್‌ಗಳನ್ನು ಸ್ಥಾಪಿಸಲು ಕಾರ್ಯ ಸಾಧ್ಯತೆ ಮತ್ತು ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಚಿಕ್ಕಮಗಳೂರು, ಹರಿಹರ, ಕುಶಾಲನಗರ ಮತ್ತು ಅಥಣಿಯಲ್ಲಿ ಕಿರು ವಿಮಾನ ನಿಲ್ದಾಣ ಸ್ಥಾಪಿಸುವ ಚಿಂತನೆ ಇದೆ," ಎಂದು ಅವರು ಹೇಳಿದರು.

"ಮೈಸೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ ಮತ್ತು ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಸಲುವಾಗಿ ಸುಮಾರು 240 ಎಕರೆ ಜಮೀನನ್ನು ಭೂಸ್ವಾಧೀನಪಡಿಸಿಕೊಂಡು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಹಸ್ತಾಂತರಿಸಲು ಕ್ರಮಕೈಗೊಳ್ಳಲಾಗುತ್ತಿದೆ," ಎಂದು ಹೇಳಿದರು.

ಕೇಂದ್ರ ಸರ್ಕಾರದ ಪ್ರಾದೇಶಿಕ ಸಂಪರ್ಕ ಯೋಜನೆ-ಉಡಾನ್‌ (ಉಡೇ ದೇಶ್‌ ಕಾ ಆಮ್‌ ನಾಗರಿಕ್‌) ಅಡಿಯಲ್ಲಿ ಬರುವ ಮೈಸೂರು, ಹುಬ್ಬಳ್ಳಿ, ವಿದ್ಯಾನಗರ (ತೋರಣಗಲ್), ಬೆಳಗಾವಿ, ಕಲಬುರುಗಿ ಮತ್ತು ಬೀದರ್‌ ವಿಮಾನ ನಿಲ್ದಾಣಗಳಿಂದ ಉಡಾನ್‌ ಯೋಜನೆಯಡಿ ಕಾರ್ಯಾಚರಣೆ ಮಾಡುತ್ತಿರುವ ವಿಮಾನಯಾನ ಸಂಸ್ಥೆಗಳಿಗೆ ರಾಜ್ಯ ಸರ್ಕಾರದ ಪಾಲಿನ ಶೇಕಡ 20ರಷ್ಟು ವಯಬಿಲಿಟಿ ಗ್ಯಾಪ್‌ ಫಂಡಿಂಗ್‌ ಭರಿಸಲಾಗುತ್ತಿದೆ. ಇದಲ್ಲದೇ, ವಿಮಾನ ನಿಲ್ದಾಣದ ರಕ್ಷಣೆ, ಭದ್ರತೆ ಮತ್ತು ಅಗ್ನಿಶಾಮಕ ಸೇವಗಳ ಶುಲ್ಕವನ್ನು ರಾಜ್ಯ ಸರ್ಕಾರ ಭರಿಸುತ್ತಿದೆ,"ಎಂದು ವಿವರಿಸಿದರು. 

ಡಿಸೆಂಬರ್‌ನಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ

"ಬಹು ನಿರೀಕ್ಷಿತ ಶಿವಮೊಗ್ಗ ವಿಮಾನ ನಿಲ್ದಾಣ ಈ ವರ್ಷಾಂತ್ಯದೊಳಗೆ ಲೋಕಾರ್ಪಣೆ ಆಗಲಿದೆ. ಇದಲ್ಲದೇ, ವಿಜಯಪುರ ಮತ್ತು ಹಾಸನ ಜಿಲ್ಲೆಗಳಲ್ಲಿ ವಿಮಾನ ನಿಲ್ಧಾಣಗಳ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಮುಂಬರುವ ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ" ಎಂದು ಸಚಿವ ವಿ. ಸೋಮಣ್ಣ ಹೇಳಿದ್ದಾರೆ. 

ಕರ್ನಾಟಕವೇ ಮೊದಲು; "ವಿಮಾನಯಾನ ನೀತಿ ರೂಪಣೆ ಕುರಿತು ಕಾರ್ಯಾಗಾರ ಆಯೋಜಿಸಿರುವ ಮೊದಲ ರಾಜ್ಯ ಕರ್ನಾಟಕ. ಪ್ರತಿ ರಾಜ್ಯಕ್ಕೂ ಇಂಥ ವಿಮಾನಯಾನ ನೀತಿ ಅಗತ್ಯ ಇದ್ದು, ಈ ಸಂಬಂಧ ಕಾರ್ಯಾಗಾರ ನಡೆಸುವುದು ಬಹಳ ಮುಖ್ಯ. ರಾಜ್ಯದ ವಿಮಾನಯಾನ ಯೋಜನೆಗಳಿಗೆ ಕೇಂದ್ರದ ನೆರವು ಒದಗಿಸಲಾಗುದು,"ಎಂದು ಕೇಂದ್ರ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಉಷಾ ಪಡಿ ಮೆಚ್ಚುಗೆ ವ್ಯಕ್ತಪಡಿಸಿದರು.  

ಕಾರ್ಯಾಗಾರದಲ್ಲಿ ಮಾತನಾಡಿದ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ,  "ಕರ್ನಾಟಕ ರಾಜ್ಯವು ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಜಾಗತಿಕ ಮಟ್ಟದಲ್ಲಿ ಖ್ಯಾತಿಯನ್ನು ಪಡೆದುಕೊಂಡಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ,"  ಎಂದರು. 

ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ,  ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ,  ಕಾರ್ಯಕ್ರಮ ಮತ್ತು ಅಂಕಿಅಂಶ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌, ಮೂಲ ಸೌಲಭ್ಯ ಅಭಿವೃದ್ಧಿ, ಬಂದರುಗಳು ಮತ್ತು ಒಳನಾಡು ಸಾರಿಗೆ ಇಲಾಖೆಯ ಜಂಟಿ ಕಾರ್ಯದರ್ಶಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಎಫ್‌ಐಸಿಸಿಐ ಅಧ್ಯಕ್ಷ ಉಲ್ಲಾಸ್ ಕಾಮತ್, ಎಫ್‌ಐಸಿಸಿಐ  ನಿರ್ದೇಶಕ ಮನೋಜ್ ಮೆಹ್ತಾ, ಸ್ಟಾರ್‌ ಏರ್‌ನ ಸಿಇಓ ಸಿಮ್ರನ್‌ ಸಿಂಗ್‌ ತಿವಾನಾ, ಇಂಡಿಗೋದ ಪ್ರಾದೇಶಿಕ ವ್ಯವಸ್ಥಾಪಕ ವರುಣ್‌ ದ್ವಿವೇದಿ, ಆಕಾಶ್‌ ಏರ್‌ನ ಸಂಸ್ಥಾಪಕ ವಿನಯ್‌ ದುಬೆ, ವಿಸ್ತಾರ ಸಂಸ್ಥೆ ಬೆಂಗಳೂರು ವಿಮಾನ ನಿಲ್ದಾಣ ಸೇವೆಗಳ ಮುಖ್ಯಸ್ಥ ಗಣೇಶ್‌ ಕುಮಾರ್‌, ಕೆಐಎಎಲ್‌ ಅಧಿಕಾರಿಗಳಾದ ಸತ್ಯಕಿ ರಘುನಾಥ್‌, ರವೀನ್‌ ಪಿಂಟೋ, ಫೆಡ್‌ಎಕ್ಸ್‌ಪ್ರೆಸ್‌ನ ವ್ಯವಸ್ಥಾಕ ನಿರ್ದೇಶಕ ಸುವೇಂದು ಚೌಧರಿ,  ಬ್ಲೂಡಾರ್ಟ್‌ ಸಿಎಫ್‌ಓ ಪಿ. ಪರಮೇಶ್ವರನ್‌ ಇನ್ನಿತರರು ಪಾಲ್ಗೊಂಡಿದ್ದರು. 

ಕಾರ್ಯಾಗಾರದಲ್ಲಿ ವಿಮಾನಯಾನ ಕ್ಷೇತ್ರಕ್ಕೆ ಸಂಬಂಧಿಸಿದ ಈ ವಿಷಯಗಳ ಬಗ್ಗೆ ಚಿಂತನಮಂಥನ  ನಡೆಯಿತು:

ಕರ್ನಾಟಕದ ವಿಮಾನಯಾನದ ಮರು ವ್ಯಾಖ್ಯಾನ
ವಿಮಾನ ನಿಲ್ದಾಣಗಳು ಮತ್ತು ಹೆಲಿಪೋರ್ಟ್ 
ಎಂಆರ್‌ಓ ಮತ್ತು ಏರ್ ಕಾರ್ಗೋ ಸೇವೆ
ವಿಮಾನಯಾನ ಸೇವೆ ಹೆಚ್ಚಿಸಲು ಸೇವಾ ವಲಯಗಳ ಪ್ರಾಮುಖ್ಯತೆಗೆ ಒತ್ತು
ವಿಮಾನಯಾನ ವಲಯ- ಉತ್ಪಾದನಾ ಕೇಂದ್ರವಾಗಿ ಕರ್ನಾಟಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News