'ಭದ್ರತಾ ಪಡೆಗಳಿಂದ ಆದಿವಾಸಿಗಳ ಹತ್ಯೆ' ಎಂದು ಪ್ರಕರಣ ದಾಖಲಿಸಿದ್ದ ಹೋರಾಟಗಾರನಿಗೆ ಸುಪ್ರೀಂ ದಂಡ

Update: 2022-07-14 10:46 GMT

ಹೊಸದಿಲ್ಲಿ: ಛತ್ತೀಸಗಢದಲ್ಲಿ ಭದ್ರತಾ ಪಡೆಗಳು ಆದಿವಾಸಿಗಳನ್ನು ಹತ್ಯೆಗೈದಿವೆ ಎಂದು ಆರೋಪಿಸಿ 2009ರಲ್ಲಿ ನ್ಯಾಯಾಲಯದ ಕದ ತಟ್ಟಿದ್ದ ಹೋರಾಟಗಾರರೊಬ್ಬರಿಗೆ ರೂ. 5 ಲಕ್ಷ ದಂಡ ವಿಧಿಸಿದ ಸುಪ್ರೀಂ ಕೋರ್ಟ್, `ಕ್ರಿಮಿನಲ್ ಸಂಚಿಗಾಗಿ' ಹೋರಾಟಗಾರನ ವಿರುದ್ಧ ಕ್ರಮಕೈಗೊಳ್ಳುವಂತೆ ಛತ್ತೀಸಗಢ ಸರಕಾರಕ್ಕೆ ಇಂದಿನ ಆದೇಶದಲ್ಲಿ ಸೂಚಿಸಿದೆ.

ಹಿಮಾಂಶು ಕುಮಾರ್ ಮತ್ತು 12 ಮಂದಿ ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಜಸ್ಟಿಸ್ ಎ ಎಂ ಖನ್ವಿಲ್ಕರ್ ಮತ್ತು ಜಸ್ಟಿಸ್ ಜೆ ಬಿ ಪರ್ಡಿವಾಲ ಅವರ ಪೀಠ ಮೇಲಿನಂತೆ ಆದೇಶಿಸಿದೆ.

2009ರಲ್ಲಿ ರಾಜ್ಯದ ದಾಂತೇವಾಡ ಜಿಲ್ಲೆಯಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ವೇಳೆ ಭದ್ರತಾ ಪಡೆಗಳು 10ಕ್ಕೂ ಅಧಿಕ ಆದಿವಾಸಿಗಳನ್ನು ಹತ್ಯೆಗೈದಿದ್ದವು ಎಂದು ಅರ್ಜಿದಾರರು ಆರೋಪಿಸಿದ್ದರಲ್ಲದೆ ಮೃತಪಟ್ಟವರ ಕುಟುಂಬಗಳಿಗೆ ತಲಾ ರೂ 5 ಲಕ್ಷ ಪರಿಹಾರ ನೀಡುವಂತೆ ಸರಕಾರಕ್ಕೆ ಸೂಚಿಸಬೇಕೆಂದು ಕೋರಿದ್ದರು.

ಆದರೆ ಈ ಆರೋಪಗಳು ಸುಳ್ಳು ಎಂದು ಹೇಳಿದ ಸುಪ್ರೀಂ ಕೋರ್ಟ್ ಸುಳ್ಳು ಆರೋಪ ಹೊರಿಸಿದವರ ವಿರುದ್ಧ ಐಪಿಸಿ ಸೆಕ್ಷನ್ 211 ಅನ್ವಯ ಕ್ರಮಕೈಗೊಳ್ಳುವಂತೆ ಛತ್ತೀಸಗಢ ಸರಕಾರಕ್ಕೆ ಸೂಚಿಸಿದೆ.

ಅರ್ಜಿಗೆ ಕೇಂದ್ರ ಸರಕಾರ ಸಲ್ಲಿಸಿದ್ದ ಪ್ರತಿಕ್ರಿಯೆಯಲ್ಲಿ, ಈ ಹತ್ಯೆಗಳನ್ನು ಭದ್ರತಾ ಪಡೆಗಳು ನಡೆಸಿಲ್ಲ ಬದಲು ನಕ್ಸಲರು ನಡೆಸಿದ್ದಾರೆಂದು ಹೇಳಿರುವುದನ್ನು ನ್ಯಾಯಾಧೀಶರು ಒಪ್ಪಿದರು. ಅರ್ಜಿದಾರರು ನಕ್ಸಲರು ನಡೆಸಿದ ಹತ್ಯೆಗಳನ್ನು ಭದ್ರತಾ ಪಡೆಗಳು ನಡೆಸಿವೆ ಎಂದು ಸುಳ್ಳನ್ನು ಬಿಂಬಿಸಲ ಅರ್ಜಿದಾರ ಹಿಮಾಂಶು ಕುಮಾರ್ ಯತ್ನಿಸಿದ್ದಾರೆ ಎಂದು ಸರಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.

ಅವರು ಸುಪ್ರೀಂ ಕೋರ್ಟ್ ಕಾನೂನು ಸೇವಾ ಸಮಿತಿಗೆ ನಾಲ್ಕು ವಾರಗಳೊಳಗೆ ರೂ 5 ಲಕ್ಷ ಠೇವಣಿಯಿಡಬೇಕು, ಹೀಗೆ ಮಾಡಲು ವಿಫಲರಾದಲ್ಲಿ  ಆತನಿಂದ ಈ ಹಣವನ್ನು ಪಡೆಯಲು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News