ರೈಲು ಬಿಡುತ್ತಿರುವ ಸಚಿವ ಕೋಟ: ಕರಾವಳಿ ಜಿಲ್ಲೆಗಳಿಗೆ ಕುಚ್ಚಲು ಅಕ್ಕಿ ವಿತರಣೆ ಹೇಳಿಕೆಗೆ ಎಸ್‌ಡಿಪಿಐ ವ್ಯಂಗ್ಯ

Update: 2022-07-14 15:38 GMT

ಮಂಗಳೂರು, ಜು.14: ಕರಾವಳಿ ಜಿಲ್ಲೆಗಳಿಗೆ ಪಡಿತರ ವ್ಯವಸ್ಥೆಯಡಿ ಕುಚ್ಚಲು ಅಕ್ಕಿ ವಿತರಿಸುವ ಬಗ್ಗೆ ಕಳೆದ ಎರಡು ವರ್ಷಗಳಿಂದ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ರೈಲು ಬಿಡುತ್ತಿದ್ದಾರೆ ಎಂದು ಎಸ್‌ಡಿಪಿಐ ವ್ಯಂಗ್ಯವಾಡಿದೆ.

ಎರಡು ವರ್ಷಗಳ ಹಿಂದೆ ಪ್ರಥಮ ಕೊರೋನ ಅಲೆಯ ಸಂದರ್ಭದಲ್ಲಿ ಅಂದಿನ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಯವರು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಬಹುತೇಕ ಮಂದಿ ಕುಚ್ಚಲು ಅಕ್ಕಿಯನ್ನು ಉಪಯೋಗಿಸುವ ಕಾರಣದಿಂದ ಪಡಿತರ ವಿತರಣೆಯಲ್ಲಿ ಬಿಳಿ ಅಕ್ಕಿಯ ಬದಲು ಕುಚ್ಚಲು ಅಕ್ಕಿಯನ್ನು ಕೂಡಲೇ ವಿತರಿಸಲು ಕ್ರಮ ಕೈಗೊಂಡಿದ್ದೇವೆ. ಈ ಬಗ್ಗೆ ಟೆಂಡರ್ ಕರೆದಿದ್ದೇವೆ. ಮುಂದಿನ ತಿಂಗಳಿಂದ ಉಭಯ ಜಿಲ್ಲೆಗಳ ಪಡಿತರ ಅಂಗಡಿಯಲ್ಲಿ ಕುಚ್ಚಲು ಅಕ್ಕಿ ದೊರೆಯುತ್ತದೆ ಎಂದು ಅಧಿಕಾರಿಗಳ ಸಭೆ ನಡೆಸಿ ಮಾಧ್ಯಮದ ಮುಂದೆ ಘೋಷಣೆ ಮಾಡಿದ್ದರು. ಆದರೆ ಎರಡು ವರ್ಷಗಳು ಕಳೆದರೂ ಇನ್ನೂ ಆ ಯೋಜನೆ ಜಾರಿಗೆ ತರಲು ವಿಫಲರಾದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವರಾದ ಶ್ರೀನಿವಾಸ ಪೂಜಾರಿ ಯವರು ಇಂದು ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿ ಕರಾವಳಿ ಜಿಲ್ಲೆಗಳಲ್ಲಿ ಕುಚ್ಚಲು ಅಕ್ಕಿಯನ್ನು ವಿತರಿಸಲು ಚಿಂತನೆ ನಡೆಸಿದ್ದೇವೆ. ಈ ಬಗ್ಗೆ ಕೇರಳ ಮತ್ತು ತೆಲಂಗಾಣಕ್ಕೆ ಸಮೀಕ್ಷೆ ನಡೆಸಲು ನಿಯೋಗ ಕಳಿಸಿದ್ದೇವೆ ಎಂದು ರೈಲು ಬಿಟ್ಟಿದ್ದಾರೆ ಎಂದು ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ವ್ಯಂಗ್ಯ ಮಾಡಿದ್ದಾರೆ.

ಬಿಜೆಪಿ ಸರಕಾರ ಮತ್ತು ಸಚಿವರು ಘೋಷಣೆ ಮಾಡಿದ ಯೋಜನೆಗಳನ್ನು ಜಾರಿಗೆ ತರಲು ನಿರಂತರವಾಗಿ ಹಲವಾರು ಬಾರಿ ವಿಫಲರಾದರು. ಪಠ್ಯ ಪುಸ್ತಕ ಕೇಸರೀಕರಣ, ಹಿಜಾಬ್ ನಿಷೇಧ, ಅಝಾನ್ ನಿರ್ಬಂಧ, ಗೋಹತ್ಯೆ ನಿಷೇಧ, ಮತಾಂತರ ನಿಷೇದದಂತಹ ಅನಗತ್ಯ ಹಾಗೂ ಭಾವನಾತ್ಮಕ ವಿಚಾರಗಳನ್ನು ಜಾರಿಗೆ ತರಲು ಪೈಪೋಟಿ ನಡೆಸುವ ಬಿಜೆಪಿ ಸರಕಾರ ಬಡಜನರಿಗೆ ಅಗತ್ಯವಾದ ಆಹಾರ ಧಾನ್ಯಗಳು ಸೇರಿದಂತೆ ಇತರ ಯೋಜನೆಗಳನ್ನು ಜಾರಿಗೆ ತರಲು ಮೀನಮೇಷ ಎಣಿಸುತ್ತಿದೆ. ಸರಕಾರ ಕೂಡಲೇ ಎಚ್ಚೆತುತಿಕೊಂಡು ಕರಾವಳಿ ಭಾಗದಲ್ಲಿ ಪಡಿತರವನ್ನು ಸರಿಯಾಗಿ ಮತ್ತು ಜನರಿಗೆ ಉಪಯೋಗಕ್ಕೆ ಅಗತ್ಯವಾದ ಕುಚ್ಚಲು ಅಕ್ಕಿಯನ್ನು ಪೂರೈಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News