ಸಮಾನತೆಗೆ ರಾಷ್ಟ್ರೀಯ ಚೌಕಟ್ಟನ್ನು ಒದಗಿಸುವ ಮೂಲ ದಾಖಲೆಯೇ ಸಂವಿಧಾನ: ಡಾ. ಅನಂತ ಕೃಷ್ಣ ಭಟ್
ಉಡುಪಿ : ಭಾರತದ ಸಂವಿಧಾನ ನಮ್ಮ ರಾಷ್ಟ್ರದ ಸಮಗ್ರ ಬದುಕಿಗೆ ಸುಂದರ ಮತ್ತು ಸಶಕ್ತ ಮೂಲಾಧಾರ. ನಮ್ಮ ದೇಶದ ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಸಾಂಸ್ಕೃತಿಕ ಜೀವನದ ರೇಖಾ ವಿನ್ಯಾಸಗಳನ್ನು ಮೂಡಿಸುವ ಹಾಗೂ ಎಲ್ಲಾ ರೀತಿಯ ಸಾಮಾಜಿಕ ಭಿನ್ನತೆಯನ್ನು ಮೀರಿ ಸಮಾನತೆಯ ರಾಷ್ಟ್ರೀಯ ಚೌಕಟ್ಟು ಒದಗಿಸುವ ಮೂಲ ದಾಖಲೆಯೇ ಸಂವಿಧಾನ ಎಂದು ಮಂಗಳೂರಿನ ಕೆನರಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಅನಂತ ಕೃಷ್ಣ ಭಟ್ ಹೇಳಿದ್ದಾರೆ.
ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ‘ಆಜಾದಿ ಕಾ ಅಮೃತ್ ವರ್ಷ್’ ಅಂಗವಾಗಿ ‘ಭಾರತ ಸಂವಿಧಾನ-ಒಂದು ಪ್ರಬುದ್ಧ ಅವಲೋಕನ’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ನಮ್ಮ ರಾಜ್ಯಾಂಗ, ಘಟನೆ ಶೂನ್ಯದಿಂದ ಉದಯಿಸಿ ಬಂದುದ್ದಲ್ಲ, ಬದಲಾಗಿ ನಮ್ಮ ರಾಷ್ಟ್ರ ಜೀವನದ ಏರಿಳಿತಗಳ ಸೆಳವು, ಒತ್ತಡಗಳ ಅಗ್ನಿಪಥದಲ್ಲಿ ಕಾವು ತುಂಬಿಕೊಂಡು ಬಂದಿರುವಂತಾದ್ದು ಎಂದು ನುಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ.(ಡಾ.) ನಿರ್ಮಲ ಕುಮಾರಿ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ವಿದ್ಯಾ ಸ್ವಾಗತಿಸಿದರೆ, ತನಯ್ ವಂದಿಸಿದರು. ಸ್ವಪ್ನ ಕಾರ್ಯಕ್ರಮ ನಿರೂಪಿಸಿದರು.