×
Ad

ಬೈಂದೂರು: ಕಾರು ಸಹಿತ ವ್ಯಕ್ತಿಯನ್ನು ಸುಟ್ಟು ಕೊಲೆಗೈದ ಪ್ರಕರಣ; ಇಬ್ಬರು ಆರೋಪಿಗಳಿಗೆ ಪೊಲೀಸ್ ಕಸ್ಟಡಿ

Update: 2022-07-15 19:55 IST

ಕುಂದಾಪುರ: ಕಾರ್ಕಳದ ಆನಂದ ದೇವಾಡಿಗ ಎಂಬವರನ್ನು ಕಾರು ಸಮೇತ ಸಜೀವವಾಗಿ ಸುಟ್ಟು ಕೊಲೆಗೈದ ಅಮಾನುಷ ಪ್ರಕರಣದಲ್ಲಿ ಮೂರನೇ ಆರೋಪಿ ಸತೀಶ್ ದೇವಾಡಿಗ ಹಾಗೂ ನಾಲ್ಕನೇ ಆರೋಪಿ ನಿತಿನ್ ದೇವಾಡಿಗನಿಗೆ ಕುಂದಾಪುರ ನ್ಯಾಯಾಲಯ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಬೈಂದೂರು ಪೊಲೀಸರು ಇಂದು ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿ ನೀಡುವಂತೆ ಕೋರಿದ್ದರು. ಅದರಂತೆ ನ್ಯಾಯಾಲಯವು ಇಬ್ಬರು ಆರೋಪಿಗಳನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.

ಪ್ರಕರಣದ ಪ್ರಮುಖ ಆರೋಪಿ ಸದಾನಂದ ಶೇರಿಗಾರ್ ಹಾಗೂ ಎರಡನೇ ಆರೋಪಿ ಶಿಲ್ಪಾ ಈಗಾಗಲೇ ಪೊಲೀಸರ ಕಸ್ಟಡಿಯಲ್ಲಿದ್ದು, ವಿವಿಧ ಆಯಾಮ ಗಳಲ್ಲಿ ಇಡೀ ಪ್ರಕರಣದ ತನಿಖೆ ನಡೆಯುತ್ತಿದೆ. ಶನಿವಾರ ಸ್ಥಳ ಮಹಜರು ಮೊದಲಾದ ಪ್ರಕ್ರಿಯೆಗಳು ನಡೆಯಲಿದೆ ಎಂಬ ಪೊಲೀಸ್ ಮೂಲಗಳಿಂದ ಮಾಹಿತಿ ಲಭಿಸಿದೆ.

ಘಟನೆ ಹಿನ್ನೆಲೆ: 60 ವರ್ಷ ಪ್ರಾಯದ ಕಾರ್ಕಳದ ಆನಂದ ದೇವಾಡಿಗ ಎನ್ನುವವರನ್ನು ವಯಾಗ್ರ ಮಾತ್ರೆ ಎಂದು ನಂಬಿಸಿ ನಿದ್ರೆ ಮಾತ್ರೆ ಬೆರೆಸಿದ ಮದ್ಯ ನೀಡಿ ಪ್ರಜ್ಞೆ ತಪ್ಪಿಸಿ, 52 ವರ್ಷದ ಸದಾನಂದ ಶೇರಿಗಾರ್ ಗೆಳತಿ ಶಿಲ್ಪಾ ಎಂಬಾಕೆ ಜೊತೆ ಸೇರಿ ತನ್ನ ಫೋರ್ಡ್ ಐಕಾನ್ ಕಾರಿನಲ್ಲಿ ಬೈಂದೂರಿಗೆ ಕರೆತಂದು ಒತ್ತಿನೆಣೆ ಬಳಿ ಹೇನಬೇರು ರಸ್ತೆಯಲ್ಲಿ ಜೀವಂತವಾಗಿ ಕಾರಿನೊಳಕ್ಕೆ ಪೆಟ್ರೋಲ್ ಸುರಿದು ಸುಟ್ಟಿದ್ದರು.

ಪ್ರಕರಣದಲ್ಲಿ ಸದಾನಂದ ಶೇರಿಗಾರ, ಶಿಲ್ಪಾ ಹಾಗೂ ಇವರಿಬ್ಬರು ಪರಾರಿಯಾಗಲು ಸಹಕರಿಸಿದ ಸತೀಶ್ ದೇವಾಡಿಗ ಮತ್ತು ನಿತಿನ್ ಎನ್ನುವರನ್ನು ಕೃತ್ಯ ನಡೆದ 24 ಗಂಟೆಯೊಳಗೆ ಪೊಲೀಸರು ಬಂಧಿಸಿದ್ದರು. ಅಪರಾಧ ವಿಚಾರಕ್ಕೆ ಸಂಬಂಧಿಸಿದ ಧಾರಾವಾಹಿ, ಸಿನಿಮಾ ನೋಡುತ್ತಿದ್ದ ಸದಾನಂದ, ತಾನು ಖಾಸಗಿ ಸರ್ವೇಯರ್ ಆಗಿದ್ದ ವೇಳೆ ನಡೆದ ಅಕ್ರಮದ ಪ್ರಕರಣವೊಂದರ ಅಂತಿಮ ತೀರ್ಪು ನ್ಯಾಯಾಲಯದಲ್ಲಿ ತನ್ನ ವಿರುದ್ಧವಾಗಿ ಬರುವ ಭಯದಲ್ಲಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಇನ್ನೋರ್ವನನ್ನು ತನ್ನದೇ ಕಾರಿನಲ್ಲಿ ಸುಟ್ಟು ತಾನು ಸತ್ತಂತೆ ಬಿಂಬಿಸಲು ಈ ಸಂಚು ರೂಪಿಸಿದ್ದ ಎಂದು ಈವರೆಗಿನ ತನಿಖೆಯಿಂದ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News