×
Ad

ಕುದ್ರೋಳಿ; ಹಣ ಸುಲಿಗೆಗೆ ಸಂಚು ಆರೋಪ; ನಾಲ್ವರ ಬಂಧನ

Update: 2022-07-15 20:33 IST

ಮಂಗಳೂರು: ನಗರದ ಕುದ್ರೋಳಿ ಬಳಿ ಅಕ್ರಮವಾಗಿ ಕೂಟ ಸೇರಿದ ತಂಡವೊಂದು ಸಾರ್ವಜನಿಕರು, ವ್ಯಾಪಾರಿಗಳು, ಶ್ರೀಮಂತರನ್ನು ಬೆದರಿಸಿ ಹಣ ಸುಲಿಗೆ, ದರೋಡೆಗೆ ಸಂಚು ರೂಪಿಸಿದ ಆರೋಪದಲ್ಲಿ ಬಂದರ್ ಪೊಲೀಸರು ಗುರುವಾರ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕುದ್ರೋಳಿಯ ಅನಿಶ್ ಅಶ್ರಫ್ ಯಾನೆ ಮಯಾ (24), ಮೂಲತಃ ಬಜ್ಪೆಯ ಪ್ರಸ್ತುತ ಕುದ್ರೋಳಿಯಲ್ಲಿ ವಾಸವಾಗಿರುವ ಶೇಖ್ ಮುಹಮ್ಮದ್ ಹಾರಿಸ್ ಯಾನೆ ಜಿಗರ್ (32), ಕಸಬಾ ಬೆಂಗರೆಯ ಮುಹಮ್ಮದ್ ಕೈಸ್ (26), ಕುದ್ರೋಳಿಯ ಮುಹಮ್ಮದ್ ಕಾಮಿಲ್ (33) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ತಲವಾರು, ಚೂರಿ, ಮೆಣಸಿನ ಹುಡಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಳೆ ಆರೋಪಿಗಳಾದ ಅನಿಶ್ ಅಶ್ರಫ್ ಯಾನೆ ಮಯಾ ಮತ್ತು ಅಬ್ದುಲ್ ಖಾದರ್ ಫಹಾದ್ ಎಂಬವರು ಇತರ ನಾಲ್ಕು ಮಂದಿಯ ಜೊತೆ ಅಕ್ರಮ ಕೂಟ ಸೇರಿಕೊಂಡು ಮಾರಕಾಯುಧಗಳನ್ನು ಹಿಡಿದುಕೊಂಡು ವ್ಯಾಪಾರಿಗಳು, ಶ್ರೀಮಂತರು, ಸಾರ್ವಜನಿಕರನ್ನು ಬೆದರಿಸಿ ಹಣ ಸುಲಿಗೆ, ದರೋಡೆ ಮಾಡಲು ಸಂಚು ರೂಪಿಸುತ್ತಿದ್ದಾರೆ ಎಂದು ಗುರುವಾರ ಮಧ್ಯಾಹ್ನ ೨:೩೦ಕ್ಕೆ ಬಂದ ಮಾಹಿತಿಯಂತೆ ದಾಳಿ ನಡೆಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಅಕ್ರಮ ಕೂಟ ಸೇರಿದ್ದ ಆರು ಮಂದಿಯ ಪೈಕಿ ಮೂವರ ಬಳಿ ಮಾರಕಾಯುಧವಿತ್ತು. ದಾಳಿ ಮಾಡಿದ ವೇಳೆ ಹಳೆ ಪ್ರಕರಣದ ಆರೋಪಿ ಅಬ್ದುಲ್ ಖಾದರ್ ಫಹಾದ್ ಮತ್ತು ತಲವಾರು ಹಿಡಿದುಕೊಂಡಿದ್ದ ಇನ್ನೊಬ್ಬ ಆರೋಪಿಯು ಬೈಕ್‌ನಲ್ಲಿ ಪರಾರಿಯಾದರು. ಆದಾಗ್ಯೂ ಇತರ ನಾಲ್ಕು ಮಂದಿಯನ್ನು ಹಿಡಿದು ಕೃತ್ಯಕ್ಕೆ ಬಳಸಿದ್ದ ಮಾರಕಾಯುಧ ವಶಪಡಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಸುಲಿಗೆ, ದರೋಡೆಗೆ ಸಂಚು ರೂಪಿಸಿದ ಆರೋಪಿಗಳಲ್ಲಿ ನಾಲ್ಕು ಮಂದಿಯೂ ರೌಡಿಶೀಟರ್‌ಗಳಾಗಿದ್ದು, ನಗರದ ವಿವಿಧ ಠಾಣೆಗಳಲ್ಲಿ  ಪ್ರಕರಣ ದಾಖಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಬಂದರ್ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News