ಮಳೆ ಹಾನಿ; ಸುರಕ್ಷತಾ ಕ್ರಮ ಕೈಗೊಳ್ಳಲು ಸಿಎಂ ಬೊಮ್ಮಾಯಿ ಸೂಚನೆ
ಮಂಗಳೂರು: ಮಳೆಯಿಂದ ಹಾನೀಗೀಡಾದ ಮನೆಗಳಿಗೆ ತುರ್ತು ಪರಿಹಾರ ೧೦ ಸಾವಿರ ರೂ.ಗಳನ್ನು ನೀಡಬೇಕು, ಎನ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ಹಾನಿಗೊಳಗಾಗಿರುವ ಮನೆಗಳ ನಿರ್ಮಾಣಕ್ಕೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ರಸ್ತೆ, ಸೇತುವೆ, ವಿದ್ಯುತ್ ಮತ್ತಿತರ ಮೂಲಭೂತ ಸೌಕರ್ಯ, ದುರಸ್ತಿಗೆ ಆದ್ಯತೆ ನೀಡಬೇಕು, ಪ್ರವಾಹ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಎಲ್ಲಾ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಪರಿಹಾರ ಒದಗಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.
ಮಳೆಯಿಂದ ಹಾನಿಗೊಳಗಾಗಿರುವ ಜಿಲ್ಲೆಗಳಲ್ಲಿನ ಸ್ಥಿತಿಗತಿ ಹಾಗೂ ಪರಿಹಾರ ಕಾರ್ಯಗಳ ಕುರಿತಂತೆ ದೇವನಹಳ್ಳಿಯ ಬಳಿಯಿರುವ ಖಾಸಗಿ ಹೊಟೇಲ್‌ನಿಂದ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಹಿತ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ಅವರು ಶುಕ್ರವಾರ ವೀಡಿಯೋ ಸಂವಾದ ನಡೆಸಿ ಮಾತನಾಡಿದರು.
ಬೆಳೆ ಹಾನಿ, ರಸ್ತೆ, ಮನೆಗಳ ಹಾನಿ ಬಗ್ಗೆ ಸರಿಯಾದ ಸಮೀಕ್ಷೆ ನಡೆಸಬೇಕು. ಜಿಲ್ಲೆಗಳಲ್ಲಿ ಮುಂದಿನ ೫-೬ ದಿನಗಳ ಮಳೆ ಮುನ್ಸೂಚನೆಯನ್ನು ಗಮನಿಸಬೇಕು. ಮುನ್ನೆಚ್ಚರಿಕಾ ಕ್ರಮಗಳ ಜೊತೆಗೆ ರಕ್ಷಣೆ ಮತ್ತು ಪರಿಹಾರ ಕಾರ್ಯಗಳಿಗೆ ಸನ್ನದ್ಧರಾಗಬೇಕು. ಪರಿಹಾರ ಕಾರ್ಯಗಳು ತ್ವರಿತ ಹಾಗೂ ಪಾರದರ್ಶಕವಾಗಿರಬೇಕು. ರಸ್ತೆ ಸಂಪರ್ಕ, ವಿದ್ಯುತ್ ಕಂಬಗಳು ಹಾಗೂ ಕುಡಿಯುವ ನೀರಿನ ಸರಬರಾಜಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸೂಚಿಸಿದರು.
ಭೂ ಕುಸಿತದ ಸಾಧ್ಯತೆಗಳುಳ್ಳ ಪ್ರದೇಶಗಳಲ್ಲಿ ರಸ್ತೆಗಳನ್ನು ತೆರವುಗೊಳಿಸಬೇಕು. ದುರ್ಬಲ ಪ್ರದೇಶಗಳ ಸಮೀಕ್ಷೆ ಕಾರ್ಯ ಕೈಗೊಳ್ಳಲು ತಂಡಗಳನ್ನು ನಿಯೋಜಿಸಬೇಕು. ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಕ್ಕೆ ಕ್ರಮ ವಹಿಸಬೇಕು. ಗ್ರಾಪಂ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚಿಸಬೇಕು. ಸಮಿತಿಯು ಸಮೀಕ್ಷೆ ಕೈಗೊಂಡು ಅಗತ್ಯವಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲಾ ನಿಯಂತ್ರಣಾ ಕೊಠಡಿಗಳು ಮಳೆ ಹಾಗೂ ಪ್ರವಾಹ ಸ್ಥಿತಿಯ ಕುರಿತು ಅಹವಾಲುಗಳಿಗೆ ಸ್ಪಂದಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸಂಬಂಧಿಕರ ಮನೆಗಳಿಗೆ ತೆರಳಿರುವ ಸಂತ್ರಸ್ತರಿಗೆ ಪಡಿತರ ಕಿಟ್‌ನ್ನು ಕಂದಾಯ ಇಲಾಖೆ ನೀಡುವ ಪಟ್ಟಿಯಂತೆ ಒದಗಿಸಬೇಕು. ಹಾನಿಯಾಗಿರುವ ರಸ್ತೆ, ಸೇತುವೆಗಳನ್ನು ಜಿಲ್ಲಾಡಳಿತವು ತಾತ್ಕಾಲಿಕವಾಗಿ ಸರಿಪಡಿಸಿ, ಶಾಶ್ವತ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಬೇಕು. ಪ್ರಕೃತಿ ವಿಕೋಪ ಪರಿಹಾರದಡಿ ಕೈಗೊಂಡಿರುವ ಮನೆಗಳ ನಿರ್ಮಾಣ ಕಾರ್ಯವನ್ನು ಜಿಲ್ಲಾಧಿಕಾರಿ ಪರಿಶೀಲಿಸಬೇಕು. ಮೂರು ವರ್ಷಗಳ ಅವಧಿಯ ಮನೆಗಳ ನಿರ್ಮಾಣ ಕಾರ್ಯ ಹಾಗೂ ಅವುಗಳನ್ನು ಪೂರ್ಣಗೊಳಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ವಿಸ್ತೃತ ವರದಿ ಸಲ್ಲಿಸಬೇಕು. ಬೆಳೆ ಹಾನಿ ಕುರಿತು ತನಿಖೆ ಕೈಗೊಂಡು ಒಂದು ತಿಂಗಳೊಳಗೆ ಸಬ್ಸಿಡಿ ವಿತರಿಸಬೇಕು ಎಂದರಲ್ಲದೆ, ಕಾಳಜಿ ಕೇಂದ್ರಗಳಲ್ಲಿರುವ ಸಂತ್ರಸ್ತರಿಗೆ ಸರಕಾರಿ ಆದೇಶದಲ್ಲಿ ನೀಡಿರುವ ಆಹಾರ ಪಟ್ಟಿಯನ್ನು ಅನುಸರಿಸಲು ನಿರ್ದೇಶನ ನೀಡಿದರು.
ಈ ಸಂದರ್ಭ ಕಂದಾಯ ಸಚಿವ ಆರ್. ಅಶೋಕ್, ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ವಿಪತ್ತು ಪರಿಹಾರ ಘಟಕದ ಡಾ.ಮನೋಜ್ ವೀಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು.
ಮಂಗಳೂರಿನಿಂದ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಜಿಲ್ಲಾ ಎಸ್ಪಿ ಋಷಿಕೇಶ್ ಭಗವಾನ್ ಸೋನಾವಣೆ, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಸಹಾಯಕ ಆಯುಕ್ತ ಮದನ್ ಮೋಹನ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸೀತಾ ಮತ್ತಿತರರು ಪಾಲ್ಗೊಂಡಿದ್ದರು.