ಸೋಮವಾರದಿಂದ ಮೊಸರು, ಲಸ್ಸಿ, ಮಜ್ಜಿಗೆ ಬೆಲೆ ದುಬಾರಿ: ಜಿಎಸ್ಟಿ ಜಾರಿ

Update: 2022-07-15 17:23 GMT

ಹೊಸದಿಲ್ಲಿ, ಜು. 15: ಪೊಟ್ಟಣದಲ್ಲಿ ಮಾರಾಟವಾಗುವ ಆಹಾರ ಪದಾರ್ಥಗಳಿಗೆ ಗ್ರಾಹಕರು ಸೋಮವಾರದಿಂದ ಜಿಎಸ್ಟಿ ಪಾವತಿಸಬೇಕಾಗುತ್ತದೆ. ಹಾಗಾಗಿ, ಆಹಾರ ಪದಾರ್ಥಗಳ ಇನ್ನೊಂದು ಸುತ್ತಿನ ಬೆಲೆಯೇರಿಕೆಗೆ ವೇದಿಕೆ ಸಿದ್ಧವಾಗಿದೆ. ಈವರೆಗೆ ಪೊಟ್ಟಣ ಆಹಾರ ಪದಾರ್ಥಗಳು ಜಿಎಸ್ಟಿ ವ್ಯಾಪ್ತಿಯಿಂದ ಹೊರಗಿದ್ದವು.

ಪೊಟ್ಟಣದಲ್ಲಿ ಮಾರಾಟವಾಗುವ ಮೊಸರು, ಲಸ್ಸಿ ಮತ್ತು ಮಜ್ಜಿಗೆ ಸೇರಿದಂತೆ ವಿವಿಧ ಉತ್ಪನ್ನಗಳಿಗೆ ನೀಡಲಾಗಿದ್ದ ತೆರಿಗೆ ವಿನಾಯಿತಿಯನ್ನು ನಿಲ್ಲಿಸುವ ಜಿಎಸ್ಟಿ ಮಂಡಳಿಯ ನಿರ್ಧಾರದ ಬಗ್ಗೆ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಸುಂಕ ಮಂಡಳಿಯು ಗುರುವಾರ ಅಧಿಸೂಚನೆ ಹೊರಡಿಸಿದೆ. ಜುಲೈ 18ರಿಂದ ಇಂಥ ಉತ್ಪನ್ನಗಳಿಗೆ 5% ಜಿಎಸ್ಟಿ ವಿಧಿಸಲಾಗುತ್ತದೆ.
ಚೆಕ್ಗಳನ್ನು ನೀಡುವುದಕ್ಕೆ ಬ್ಯಾಂಕ್ಗಳು ವಿಧಿಸುವ ಶುಲ್ಕದ ಮೇಲೆ ವಿಧಿಸಲಾಗಿರುವ 18% ಜಿಎಸ್ಟಿಯೂ ಸೋಮವಾರದಿಂದ ಜಾರಿಗೆ ಬರುತ್ತದೆ.
ಓರ್ವ ರೋಗಿಯ ಆಸ್ಪತ್ರೆ ಕೋಣೆಯೊಂದರ ದಿನದ ಬಾಡಿಗೆ (ಐಸಿಯು ಹೊರತುಪಡಿಸಿ) 5,000 ರೂ.ಗಿಂತಲೂ ಅಧಿಕವಾದರೆ ಅದಕ್ಕೂ ಜಿಎಸ್ಟಿ ವಿಧಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News