ಮಂಗಳೂರು: ಕ್ಯಾಂಪಸ್ ಫ್ರಂಟ್ ಗರ್ಲ್ಸ್ ಕಾನ್ಫರೆನ್ಸ್ ಹಿನ್ನೆಲೆ; ಜಾಥಾ ನಡೆಸಲು ಅನುಮತಿ ನಿರಾಕರಣೆ
ಮಂಗಳೂರು: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ನಗರದ ಪುರಭವನದಲ್ಲಿ ಇಂದು ಗರ್ಲ್ಸ್ ಕಾನ್ಫರೆನ್ಸ್ ಹಮ್ಮಿಕೊಂಡಿದ್ದು, ಇದರ ಹಿನ್ನೆಲೆಯಲ್ಲಿ ನಗರದ ಅಂಬೇಡ್ಕರ್ ವೃತ್ತದಿಂದ ಪುರಭವನದವರೆಗಿನ ಜಾಥಾಕ್ಕೆ ಪೊಲೀಸರಿಂದ ಅನುಮತಿ ನಿರಾಕರಿಸಲಾಗಿತ್ತು. ಹಾಗಿದ್ದರೂ ಮಿಲಾಗ್ರಿಸ್ ಬಳಿಯಿಂದ ಜಾಥಾಕ್ಕೆ ಸಿದ್ಧತೆ ನಡೆಸಿದ್ದ ವಿದ್ಯಾರ್ಥಿನಿಯರನ್ನು ಪೊಲೀಸ್ ಆಯುಕ್ತರೇ ಮನವೊಲಿಸಿ ಬಸ್ಸಿನಲ್ಲೇ ಪುರಭವನಕ್ಕೆ ಕಳುಹಿಸಿದ ಘಟನೆ ನಡೆಯಿತು.
ಪುರಭವನದ ಎದುರು ಸಮಾವೇಶಗೊಂಡ ವಿದ್ಯಾರ್ಥಿನಿಯರು ಐಕ್ಯತೆ ಘೋಷಣೆ ಕೂಗಿದರು. ಆಯ್ಕೆಯ ಸ್ವಾತಂತ್ರ್ಯವನ್ನು ಖಾತರಿಪಡಿಸೋಣ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯೋಣ ಎಂಬ ಘೋಷವಾಕ್ಯದೊಂದಿಗೆ ಸಮಾವೇಶ ಆಯೋಜಿಸಲಾಗಿದೆ.
ಪೊಲೀಸ್ ಕಮಿಷನರ್ ತರಾಟೆ
ನಗರದ ಅಂಬೇಡ್ಕರ್ ವೃತ್ತದಿಂದ ಜಾಥಾಕ್ಕೆ ಅನುಮತಿಯನ್ನು ಪೊಲೀಸರು ನಿರಾಕರಿಸಿದ ಹಿನ್ನೆಲೆಯಲ್ಲಿ ಕ್ಯಾಂಪಸ್ ಫ್ರಂಟ್ ನ ವಿದ್ಯಾರ್ಥಿನಿಯರು ಮಿಲಾಗ್ರಿಸ್ ಬಳಿ ಸಮಾವೇಶಗೊಂಡು ಜಾಥಾಕ್ಕೆ ಮುಂದಾಗಿದ್ದರು. ಅಂಬೇಡ್ಕರ್ ವೃತ್ತದಿಂದ ಪುರಭವನದವರೆಗೆ ಪೊಲೀಸರು ಭಾರೀ ಸಂಖ್ಯೆಯಲ್ಲಿ ಕಾವಲು ಬಿಗಿಗೊಳಿಸಿದ್ದರು.
ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ನಗರದ ಅಂಬೇಡ್ಕರ್ ವೃತ್ತದಿಂದ ಮಿಲಾಗ್ರಿಸ್ ವರೆಗೆ ಇತರ ಪೊಲೀಸ್ ಅಧಿಕಾರಿಗಳ ಜತೆ ನಡೆದುಕೊಂಡೇ ಬಂದು ಮಿಲಾಗ್ರಿಸ್ ನಲ್ಲಿ ಸಮಾವೇಶಗೊಂಡ ವಿದ್ಯಾರ್ಥಿನಿಯರಿಗೆ ಜಾಥಾ ನಡೆಸದಂತೆ ಸೂಚಿಸಿದರು.
ಕಾರ್ಯಕ್ರಮಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಜಾಥಾಕ್ಕೆ ಅವಕಾಶವಿಲ್ಲ ಎಂದರು. ವಿದ್ಯಾರ್ಥಿನಿಯರು ಜಾಥಾ ನಡೆಸುವ ವಾದ ಮುಂದುವರಿಸಿದಾಗ, ಜಾಥಾ ನಡೆಸಿದರೆ ಕಾರ್ಯಕ್ರಮದ ಅನುಮತಿಯನ್ನೂ ರದ್ದು ಪಡಿಸುವುದಾಗಿ ಹೇಳಿದರು. ಕೊನೆಗೆ ಜಾಥಾ ಮೊಟಕುಗೊಳಿಸಲಾಯಿತು. ವಿದ್ಯಾರ್ಥಿನಿಯರನ್ನು ಬಸ್ಸುಗಳ ಮೂಲಕ ಪುರಭವನಕ್ಕೆ ಕಳುಹಿಸಲಾಯಿತು.
ಸರಕಾರ ಪೊಲೀಸರ ಮೂಲಕ ರ‍್ಯಾಲಿಯನ್ನು ತಡೆಯಲು ಯತ್ನಿಸುತ್ತಿದೆ ಎಂದು ವಿದ್ಯಾರ್ಥಿ ನಾಯಕಿ ಈ ಸಂದರ್ಭ ಆರೋಪ ಮಾಡಿದ್ದಾರೆ.