×
Ad

ಬಂಟ್ವಾಳ; ಸರಕಾರಿ ವಾಹನದ ಗಾಜು ಪುಡಿ ಮಾಡಿ ಹಲ್ಲೆಗೆ ಮುಂದಾದ ಪ್ರಕರಣ: ಆರೋಪಿ ಸೆರೆ

Update: 2022-07-16 18:39 IST

ಬಂಟ್ವಾಳ, ಜು.16: ಕ್ಷುಲ್ಲಕ ವಿಚಾರಕ್ಕೆ ತುಂಬೆಯಲ್ಲಿ ಶನಿವಾರ ಬೆಳಗ್ಗೆ ಸರಕಾರಿ ಅಧಿಕಾರಿಗಳು ಸಂಚರಿಸುತ್ತಿದ್ದ ವಾಹನದ ಮಿರಾರ್ ಪುಡಿ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾದ ಪ್ರಕರಣದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಜೀಪ ಕೊಣೆಮಾರ್ ನಿವಾಸಿ ಸಂಶುದ್ದೀನ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರು ಜಿಪಂ ಕಚೇರಿಯ ವಾಹನವೊಂದರ ಚಾಲಕ ದೇವದಾಸ್ ಎಂಬವರು ಈ ಬಗ್ಗೆ ದೂರು ನೀಡಿದ್ದರು.

ದೇವದಾಸ್ ಅವರು, ಪುತ್ತೂರಿನಲ್ಲಿ ನಡೆಯುವ ಅಗತ್ಯ ಮೀಟಿಂಗ್ ನಲ್ಲಿ ಭಾಗವಹಿಸಲು ಜಿಲ್ಲಾ ಪಂಚಾಯತ್ ನ ಮೂವರು ಅಧಿಕಾರಿಗಳನ್ನು ಕಾರಿನಲ್ಲಿ ಮಂಗಳೂರಿನಿಂದ ಪುತ್ತೂರಿಗೆ ಕರೆದುಕೊಂಡು ಹೋಗುವ ವೇಳೆ ಈ ಘಟನೆ ನಡೆದಿದೆ‌ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನಮ್ಮ ಎದುರಿನಲ್ಲಿ ಸಂಚರಿಸುತ್ತಿದ್ದ ವಾಹನವೊಂದು ಬ್ರೇಕ್ ಹಾಕಿದಾಗ ನಾನು ಕೂಡಾ ಕಾರಿನ ಬ್ರೇಕ್ ಹಾಕಿದ್ದೇನೆ‌. ಕಾರಿ‌ನ ಹಿಂಬದಿಯಲ್ಲಿ ವೇಗವಾಗಿ ಬರುತ್ತಿದ್ದ ದ್ವಿಚಕ್ರ ವಾಹನದಲ್ಲಿದ್ದ ಆರೋಪಿ ಯುವಕ ಕೂಡ ಬ್ರೇಕ್ ಹಾಕಿದ್ದು ಈ ವೇಳೆ ಆತ ನಿಯಂತ್ರಣ ಕಳೆದು ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದಾನೆ ಎಂದು ದೂರಿನಲ್ಲಿ ದೇವದಾಸ್ ಅವರು ತಿಳಿಸಿದ್ದಾರೆ.

ಬಳಿಕ ಆತ ಕಾರಿಗೆ ದ್ವಿಚಕ್ರ ವಾಹನವನ್ನು ಅಡ್ಡ ಇಟ್ಟು ಕಾರಿನ ಗಾಜು ಅನ್ನು ಪುಡಿ ಮಾಡಿದ್ದಾನೆ. ಆ ಬಳಿಕ ತನ್ನ ಸಹಿತ ಕಾರಿನಲ್ಲಿದ್ದ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿದ್ದಾನೆ ಎಂದು ದೂರು ನೀಡಲಾಗಿದೆ. 

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಘಟನೆಯ ವೀಡಿಯೊ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News