ಹಸ್ತಲಾಘವದ ಬದಲು ಸೌದಿ ಯುವರಾಜರ ಜತೆ ಮುಷ್ಠಿ ಸ್ಪರ್ಷ: ಬೈಡನ್ ವಿರುದ್ಧ ಟೀಕೆಗಳ ಪ್ರಹಾರ

Update: 2022-07-17 18:10 GMT

ಜಿದ್ದಾ, ಜು.17: ಸೌದಿ ಅರೆಬಿಯಾಕ್ಕೆ ಭೇಟಿ ನೀಡಿದ ಸಂದರ್ಭ ಅಲ್ಲಿನ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ರ ಜತೆ ಮುಷ್ಟಿಸ್ಪರ್ಷ ಮಾಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಹಸ್ತಲಾಘವದ ರೀತಿಯಲ್ಲಿಯೇ ಪರಸ್ಪರ ಮುಷ್ಟಿಯನ್ನು ತಾಗಿಸಿಕೊಂಡು ಗೌರವ ಸಲ್ಲಿಸುವ ಕ್ರಮವಿದೆ. ಬೈಡನ್ ಮಾಡಿದ್ದೂ ಇದನ್ನೇ. ಆದರೆ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಗೆ ಆದೇಶ ನೀಡಿದ್ದಾರೆ ಎಂದು ಅಮೆರಿಕವೇ ಹೇಳುತ್ತಿರುವ ಸೌದಿಯ ಯುವರಾಜರೊಂದಿಗೆ ಬೈಡನ್ ಹೀಗೆ ಮಾಡಿರುವುದು ಸರಿಯಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಟೀಕೆ, ಖಂಡನೆ ಕೇಳಿಬಂದಿದೆ. 

ಜಿದ್ದಾದ ಅರಮನೆಯ ಹೊರಭಾಗದಲ್ಲಿ ನಡೆದ ಈ ಘಟನೆಯ ಫೋಟೋವನ್ನು ಸೌದಿಯ ಸುದ್ಧಿಸಂಸ್ಥೆಗಳು ತಕ್ಷಣ ಪ್ರಸಾರ ಮಾಡಿವೆ. ಬಳಿಕ ಖಶೋಗಿ ಅಂಕಣ ಬರೆಯುತ್ತಿದ್ದ ವಾಷಿಂಗ್ಟನ್ ಪೋಸ್ಟ್ ನ ಮುಖಪುಟದಲ್ಲಿ ಪ್ರಕಟವಾಗಿದೆ. ಪ್ರವಾಸದ ಅಂತ್ಯದಲ್ಲಿ ಜೆಡ್ಡಾದಲ್ಲಿ ನಡೆದ ಮುಷ್ಟಿಸ್ಪರ್ಷ ಹಸ್ತಲಾಘವಕ್ಕಿಂತ ಕೆಟ್ಟದಾಗಿದೆ. ಇದೊಂದು ನಾಚಿಕೆಗೇಡಿನ ವಿಷಯ ಎಂದು ಪತ್ರಿಕೆಯ ಸಿಇಒ ಫ್ರೆಡ್ ರಯಾನ್ ಹೇಳಿದ್ದಾರೆ. 

ಇದು ಮುಹಮ್ಮದ್ ಬಿನ್ ಸಲ್ಮಾನ್ ಹತಾಶೆಯಿಂದ ಬಯಸುತ್ತಿರುವ ಅನ್ಯೋನ್ಯತೆ ಮತ್ತು ಸೌಕರ್ಯವನ್ನು ಒದಗಿಸಿದೆ ಎಂದವರು ಪ್ರತಿಕ್ರಿಯಿಸಿದ್ದಾರೆ. ‘ನಿರಂಕುಶಾಧಿಕಾರಿಗಳು ನಗುತ್ತಿದ್ದಾರೆ’ ಎಂದು ಮಾನವ ಹಕ್ಕುಗಳ ನಿಗಾ ಸಮಿತಿಯ ಕಾರ್ಯನಿರ್ವಾಹಕ ನಿರ್ದೇಶಕ ಕೆನ್ನೆತ್ ರಾಥ್ ಪ್ರತಿಕ್ರಿಯಿಸಿದ್ದಾರೆ. ಮಾನವ ಹಕ್ಕುಗಳಿಗಾಗಿನ ಬೈಡನ್ ಅವರ ನೆರವು ಕಿಂಚಿತ್ ತೈಲಕ್ಕಾಗಿ ಮಾರಾಟವಾಗಬಹುದು’ ಎಂದವರು ಟ್ವೀಟ್ ಮಾಡಿದ್ದಾರೆ.

ಖಶೋಗಿ ಹತ್ಯೆಗೆ ಹೊಣೆಗಾರರನ್ನು ಗುರುತಿಸುವುದಾಗಿ ನೀವು ನೀಡಿರುವ ಭರವಸೆ ಇದೇ ಏನು? ಯುವರಾಜರ ಮುಂದಿನ ಬಲಿಪಶುಗಳ ರಕ್ತ ನಿಮ್ಮ ಕೈಯಲ್ಲಿದೆ ಎಂದು ಖಶೋಗಿ ಅವರ ಸ್ನೇಹಿತೆ ಹ್ಯಾಟಿಸ್ ಸೆಂಗಿರ್ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News