ದಿಲ್ಲಿ ದಂಪತಿ 25 ಪಿಸ್ತೂಲುಗಳೊಂದಿಗೆ ಪಾರಾಗಿದ್ದು ಹೇಗೆ ಎನ್ನುವುದನ್ನು ಪತ್ತೆ ಹಚ್ಚಲು ತನಿಖೆ ಆರಂಭ

Update: 2022-07-17 16:50 GMT
Photo: NDTV

ಹೊಸದಿಲ್ಲಿ,ಜು.17: ಭಾರೀ ಸಂಖ್ಯೆಯಲ್ಲಿ ಪಿಸ್ತೂಲುಗಳೊಂದಿಗೆ ಇತ್ತೀಚಿಗಷ್ಟೇ ಬಂಧಿಸಲ್ಪಟ್ಟಿರುವ ದಂಪತಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಇಲ್ಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ 25 ಪಿಸ್ತೂಲುಗಳನ್ನು ಹೇಗೆ ಯಶಸ್ವಿಯಾಗಿ ದೇಶದೊಳಕ್ಕೆ ಕಳ್ಳಸಾಗಣೆ ಮಾಡಿದ್ದರು ಎನ್ನುವುದನ್ನು ಪತ್ತೆ ಹಚ್ಚಲು ದಿಲ್ಲಿ ಕಸ್ಟಮ್ಸ್ ತನಿಖೆಯನ್ನು ಆರಂಭಿಸಿದೆ.

ತಾವು ಈ ಹಿಂದೆಯೂ ಟರ್ಕಿಯಿಂದ 12.5 ಲ.ರೂ.ಮೌಲ್ಯದ 25 ಪಿಸ್ತೂಲುಗಳ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದೆವು ಎಂದು ದಂಪತಿ ವಿಚಾರಣೆ ಸಂದರ್ಭ ಒಪ್ಪಿಕೊಂಡ ಬಳಿಕ ಈ ತನಿಖೆಯನ್ನು ನಡೆಸಲಾಗುತ್ತಿದೆ. ಅವರ ಹೇಳಿಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಇನ್ನಷ್ಟು ವಿವರಗಳನ್ನು ಕಂಡುಕೊಳ್ಳಲು ಆಂತರಿಕ ವಿಚಾರಣೆಯನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಯೋರ್ವರು ತಿಳಿಸಿದರು.

22.5 ಲ.ರೂ.ಮೌಲ್ಯದ ಜರ್ಮನಿ ಮತ್ತು ಇಟಲಿಯಲ್ಲಿ ನಿರ್ಮಿತ 45 ಪಿಸ್ತೂಲುಗಳನ್ನು ದೇಶದೊಳಗೆ ಕಳ್ಳಸಾಗಣೆ ಮಾಡುತ್ತಿದ್ದ ಗುರುಗ್ರಾಮದ ದಂಪತಿಯನ್ನು ಇಲ್ಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಬುಧವಾರ ತಿಳಿಸಿದ್ದರು.

ಈ ನಡುವೆ ಕಸ್ಟಮ್ಸ್ ಇಲಾಖೆಯು ಪಿಸ್ತೂಲುಗಳೊಂದಿಗೆ ದಂಪತಿಯ ಬಂಧನದ ಮಾಹಿತಿಯನ್ನು ಭಯೋತ್ಪಾದನೆ ಸಂಬಂಧಿತ ಘಟನೆಗಳ ತನಿಖೆಯನ್ನು ನಡೆಸುವ ಎನ್ಐಎಗೆ ನೀಡಿದೆ.

ಪಿಸ್ತೂಲುಗಳಿದ್ದ ಎರಡು ಲಗೇಜ್‌ಗಳನ್ನು ದಿಲ್ಲಿ ವಿಮಾನ ನಿಲ್ದಾಣದಲ್ಲಿ ದಂಪತಿಗೆ ಹಸ್ತಾಂತರಿಸಿದ ಬಳಿಕ ಪರಾರಿಯಾಗಿರುವ ಇನ್ನೋರ್ವ ಆರೋಪಿಗಾಗಿ ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದರು. ಆರೋಪಿ ದಂಪತಿ ತಮ್ಮ ಹಸುಗೂಸಿನೊಂದಿಗೆ ಸೋಮವಾರ ವಿಯಟ್ನಾಮ್‌ನ ಹೋ ಚಿ ಮಿನ್ ಸಿಟಿಯಿಂದ ಬಂದಿಳಿದಿದ್ದರು, ಅವರನ್ನು ಬಂಧಿಸಿದ ಬಳಿಕ ಮಗುವನ್ನು ಅಜ್ಜಿಗೆ ಹಸ್ತಾಂತರಿಸಲಾಗಿತ್ತು.

ದಂಪತಿ ಆಗಮಿಸಿದ್ದ ವಿಮಾನ ಇಲ್ಲಿ ಇಳಿಯುವ ಸಮಯಕ್ಕೆ ಸರಿಯಾಗಿ ಪ್ಯಾರಿಸ್‌ನಿಂದ ಆಗಮಿಸಿದ್ದ ಪತಿಯ ಹಿರಿಯ ಸೋದರ ಎರಡು ಟ್ರಾಲಿ ಬ್ಯಾಗ್‌ಗಳನ್ನು ಆತನಿಗೆ ಹಸ್ತಾಂತರಿಸಿದ್ದ ಮತ್ತು ಬಳಿಕ ಅಲ್ಲಿಂದ ನುಣುಚಿಕೊಂಡಿದ್ದ. ಆತನ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಸೇರಿದಂತೆ ಕೆಲವು ಗಂಭೀರ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದರು.

ವಶಪಡಿಸಿಕೊಳ್ಳಲಾಗಿರುವ ಪಿಸ್ತೂಲುಗಳು ಅಸಲಿಯೇ ಎನ್ನುವುದನ್ನು ತಿಳಿದುಕೊಳ್ಳಲು ಕಸ್ಟಮ್ಸ್ ಇಲಾಖೆ ಬ್ಯಾಲಿಸ್ಟಿಕ್ ವರದಿಗಾಗಿ ಕೋರಿದೆ. ಆದಾಗ್ಯೂ ಕೆಲವು ಮಾರ್ಪಾಡುಗಳೊಂದಿಗೆ ಈ ಪಿಸ್ತೂಲುಗಳನ್ನು ಬಳಸಬಹುದಾಗಿದೆ ಎಂದು ಪ್ರಾಥಮಿಕ ವರದಿಯು ದೃಢಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News