ಮೋದಿ, ಶಾ, ಸಚಿವರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಎಫ್‌ಐಆರ್ ರದ್ದುಗೊಳಿಸಲು ಹೈಕೋರ್ಟ್ ನಿರಾಕರಣೆ

Update: 2022-07-17 17:13 GMT

ಅಲಹಾಬಾದ್, ಜು. 17: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರದ ಇತರ ಸಚಿವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದಲ್ಲಿ ವ್ಯಕ್ತಿಯೋರ್ವರ ವಿರುದ್ಧ ದಾಖಲಿಸಲಾದ ಪ್ರಥಮ ಮಾಹಿತಿ ವರದಿಯನ್ನು ರದ್ದುಗೊಳಿಸಲು ಅಲಹಾಬಾದ್ ಉಚ್ಚ ನ್ಯಾಯಾಲಯ ಶುಕ್ರವಾರ ನಿರಾಕರಿಸಿದೆ. 

ಉತ್ತರಪ್ರದೇಶದ ಜೌನಪುರ ಜಿಲ್ಲೆಯ ಮೀರ್‌ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಈ ಎಫ್‌ಐಆರ್ ಪ್ರಕಾರ   ಮುಮ್ತಾಝ್ ಮನ್ಸೂರಿ ತನ್ನ ಫೇಸ್‌ಬುಕ್ ಖಾತೆಯಲ್ಲಿ ಸಚಿವರನ್ನು ‘ನಾಯಿ’ ಎಂದು ಕರೆದಿದ್ದಾನೆ ಎಂದು ಆರೋಪಿಸಲಾಗಿದೆ. ಅನಂತರ ಮನ್ಸೂರಿ ವಿರುದ್ಧ ಭಾರತೀಯ ದಂಡ ಸಂಹಿತೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.  
ತನ್ನ ವಿರುದ್ಧದ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಮನ್ಸೂರಿ ಸಲ್ಲಿಸಿದ ಮನವಿಯನ್ನು ನ್ಯಾಯಮೂರ್ತಿಗಳಾದ ಅಶ್ವಿನಿ ಕುಮಾರ್ ಮಿಶ್ರಾ ಹಾಗೂ ರಾಜೇಂದ್ರ ಕುಮಾರ್ ಅವರಿದ್ದ ಪೀಠ ಶುಕ್ರವಾರ ತಿರಸ್ಕರಿಸಿದೆ. 

‘‘ಈ ದೇಶದ ಸಂವಿಧಾನ ಪ್ರತಿಯೋರ್ವ ನಾಗರಿಕನಿಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ನೀಡಿದೆ. ಆದರೆ, ಅಂತಹ ಹಕ್ಕನ್ನು ನಾಗರಿಕರ ಹಾಗೂ ಪ್ರಧಾನಿ ಅಥವಾ ಇತರ ಸಚಿವರ ವಿರುದ್ಧ  ಅವಹೇಳನಕಾರಿ ಟೀಕೆಗಳನ್ನು ಮಾಡುವುದಕ್ಕೆ ದುರಪಯೋಗಪಡಿಸುವಂತಿಲ್ಲ’’ ಎಂದು ಪೀಠ ಹೇಳಿದೆ. 
ಮನ್ಸೂರಿ ಗುರುತಿಸಬಹುದಾದ ಅಪರಾಧ ಎಸಗಿರುವುದನ್ನು ಎಫ್‌ಐಆರ್ ಸ್ಪಷ್ಟವಾಗಿ ಬಹಿರಂಗಪಡಿಸಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. 

ಮನ್ಸೂರಿ ವಿರುದ್ಧ ಕಾನೂನಿಗೆ ಅನುಗುಣವಾಗಿ ಕ್ರಮ ತೆಗದುಕೊಳ್ಳುವಂತೆ ಹಾಗೂ ತನಿಖೆಯನ್ನು ಪೂರ್ಣಗೊಳಿಸುವಂತೆ ಪೀಠ ಪೊಲೀಸರಿಗೆ ನಿರ್ದೇಶಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News