ಜು. 22ರಿಂದ ಮಂಗಳೂರು ವಿವಿಯಲ್ಲಿ 'ಕನಕ ಸಾಹಿತ್ಯ ಸಮ್ಮೇಳನ'

Update: 2022-07-17 18:18 GMT

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನ ಕೇಂದ್ರ ಹಾಗು ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರ, ಬೆಂಗಳೂರು ಸಂಸ್ಥೆಗಳ ಸಹಯೋಗದೊಂದಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಜುಲೈ ೨೨  ಹಾಗೂ ೨೩ ರಂದು  `ಕನಕ ಸಾಹಿತ್ಯ ಸಮ್ಮೇಳನ' ನಡೆಯಲಿದೆ.

೨೨ ಶುಕ್ರವಾರ ಬೆಳಗ್ಗೆ ೧೦ ಗಂಟೆಗೆ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ ವಿ. ಸುನಿಲ್ ಕುಮಾರ್ ನೆರವೇರಿಸಲಿರುವರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಅಧ್ಯಕ್ಷತೆಯನ್ನು ವಹಿಸಲಿದ್ದು,  ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಕಿಶೋರ್ ಕುಮಾರ್ ಸಿ.ಕೆ, ಬೆಂಗಳೂರಿನ ಕನಕದಾಸ ಸಂಶೋಧನ ಕೇಂದ್ರದ ಸಮನ್ವಯಾಧಿಕಾರಿ ಎಂ ಆರ್ ಸತ್ಯನಾರಾಯಣ, ಮಂಗಳೂರಿನ ಕನಕ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ ಉಪಸ್ಥಿತರಿರುವರು.

ಸಮ್ಮೇಳನದಲ್ಲಿ ಪರಂಪರೆಯ ಬೆಳಕಲ್ಲಿ ಕನಕ, ವರ್ತಮಾನದ ಕನ್ನಡಿಯಲ್ಲಿ ಕನಕ, ಡಾ.ವಸಂತ ಭಾರದ್ವಾಜರ ಕನಕ ತರಂಗಿಣಿ ಮಹಾಕಾವ್ಯ ಚಿಂತನ ಗೋಷ್ಠಿಗಳು ನಡೆಯಲಿದ್ದು ಅದರಲ್ಲಿ ಪ್ರೊ. ಮಲ್ಲೇಪುರಂ ಜಿ ವೆಂಕಟೇಶ್, ಬೆಂಗಳೂರು,ಲಕ್ಷ್ಮೀಶ ತೋಳ್ಪಾಡಿ ಪುತ್ತೂರು, ಎಂ.ಆರ್ ಸತ್ಯನಾರಾಯಣ ಶಿವಮೊಗ್ಗ, ಡಾ. ಪಾದೇಕಲ್ಲು ವಿಷ್ಣು ಭಟ್ಟ ಉಡುಪಿ, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್, ಪ್ರೊ.ಶಿವರಾಮ ಶೆಟ್ಟಿ,ಮೈಸೂರು, ಪ್ರೊ.ನಿತ್ಯಾನಂದ ಬಿ ಶೆಟ್ಟಿ, ತುಮಕೂರು, ಡಾ. ಜ್ಯೋತಿ ಶಂಕರ್ ಮೈಸೂರು, ಡಾ.ಶುಭಾ ಮರವಂತೆ, ಅಳಗೋಡು ಶಿವಕುಮಾರ್, ಡಾ.ಮಂಜುನಾಥ ಬೆಳವಾಡಿ ಮತ್ತಿತರ ವಿದ್ವಾಂಸರು ಭಾಗವಹಿಸಲಿದ್ದಾರೆ.

೨೩ ರಂದು ನಡೆಯುವ ಕನಕ ಕವಿಗೋಷ್ಠಿಯ ಅಧ್ಯಕ್ಷತೆಯನ್ನು  ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ವಹಿಸಲಿದ್ದು ಹಿರಿಯ ಕವಿಗಳಾದ  ಡಾ. ವಸಂತಕುಮಾರ್ ಪೆರ್ಲ,  ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಉಡುಪಿ, ಕಾಸರಗೋಡಿನ  ರಾಧಾಕೃಷ್ಣ ಉಳಿಯತ್ತಡ್ಕ, ಮೂಡಬಿದಿರೆಯ  ಟಿ.ಎ.ಎನ್. ಖಂಡಿಗೆ, ಬೆಂಗಳೂರಿನ ಡಾ. ಸತ್ಯಮಂಗಲ ಮಹಾದೇವ ಭಾಗವಹಿಸಲಿದ್ದಾರೆ. ಬಳಿಕ  `ಕನಕ ಕಾವ್ಯ –ಗೀತ-ನೃತ್ಯ ಸಾಧ್ಯತೆಗಳು’  ಸೋದಾಹರಣ ಉಪನ್ಯಾಸ ಕಾರ್ಯಕ್ರಮದಲ್ಲಿ ಶಿವಮೊಗ್ಗದ  ಡಾ. ಕೆ.ಎಸ್. ಪವಿತ್ರ ಉಪನ್ಯಾಸ ನೀಡಲಿರುವರು.

ಕನಕ ಸಾಹಿತ್ಯ ಕುರಿತ ವಿಚಾರಸಂಕಿರಣದ ಆಹ್ವಾನಿತ ಪ್ರಬಂಧಗಳ ಮಂಡನಾಗೋಷ್ಠಿಯ ಅಧ್ಯಕ್ಷತೆಯನ್ನು ಧಾರವಾಡ ಕನಕ ಅಧ್ಯಯನ ಪೀಠದ ಸಂಯೋಜಕರಾದ ಡಾ. ಸಿ. ಹನಮಗೌಡ ವಹಿಸಲಿರುವರು.

೨೩ರ ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ, ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಕಕ್ಷರಾದ ಪ್ರೊ. ಸೋಮಣ್ಣ ಹೊಂಗಳ್ಳಿ ಅಧ್ಯಕ್ಷತೆಯನ್ನು ವಹಿಸಲಿದ್ದು, ಹಂಪಿ, ಕನ್ನಡ ಅಧ್ಯಯನ ಸಂಸ್ಥೆ, ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಎ.ವಿ. ನಾವಡ ಸಮಾಪನ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಧ್ ಭಾಗವಹಿಸಲಿರುವರು.

ಕನಕ ಸಾಂಸ್ಕೃತಿಕ ಸಂಭ್ರಮ

ಸಮ್ಮೇಳನದಲ್ಲಿ ವಿವಿಧ ಗಾಯಕರಿಂದ ಕನಕ ಗಾಯನ, ವ್ಯಾಖ್ಯಾನ, ಅರ್ಥಾನುಸಂಧಾನ, ಗೊಂಬೆಯಾಟ, ಯಕ್ಷಗಾನ ಪ್ರದರ್ಶನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕನಕದಾಸ ಕೇಂದ್ರದ ಪ್ರಕಟಣೆ ತಿಳಿಸಿದೆ.

ಕನಕದಾಸರನ್ನೇ ಕುರಿತು ಮೊದಲ ಸಾಹಿತ್ಯ ಸಮ್ಮೇಳನವನ್ನು ನಡೆಸುತ್ತಿದ್ದೇವೆ. ಕನಕದಾಸರ ಚಿಂತನೆಗಳನ್ನು ಯುವಸಮುದಾಯಕ್ಕೆ ತಲುಪಿಸುವುದು ಸಮ್ಮೇಳನದ ಉದ್ದೇಶ. ನಾಡಿನ ವಿದ್ವಾಂಸರು, ಕಲಾವಿದರು ಹಾಗೂ ಬಹುಸಂಖ್ಯೆಯ ವಿದ್ಯಾರ್ಥಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ಡಾ.ಧನಂಜಯ ಕುಂಬ್ಳೆ
ಸಂಯೋಜಕರು, ಕನಕದಾಸ ಕೇಂದ್ರ ಮಂಗಳೂರು ವಿವಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News