ಸಿಆರ್‌ಪಿಎಫ್‌ ವಿರುದ್ಧ ನಕ್ಸಲ್ ದಾಳಿಗೆ ನೆರವು ಆರೋಪ: 121 ಮಂದಿ ಖುಲಾಸೆ

Update: 2022-07-18 02:49 GMT

ರಾಯಪುರ: ಐದು ವರ್ಷ ಹಿಂದೆ 26 ಮಂದಿ ಸಿಆರ್‌ಪಿಎಫ್‌ ಸಿಬ್ಬಂದಿ ಹತ್ಯೆಗೀಡಾದ ನಕ್ಸಲ್ ದಾಳಿಗೆ ನೆರವು ನೀಡಿದ ಆರೋಪದಲ್ಲಿ ಐದು ವರ್ಷಗಳಿಂದ ಜೈಲಿನಲ್ಲಿದ್ದ 121 ಮಂದಿ ಬುಡಕಟ್ಟು ಜನರನ್ನು ಛತ್ತೀಸ್‍ಗಢದ ದಂತೇವಾಡ ಎನ್‍ಐಎ ನ್ಯಾಯಾಲಯ ಆರೋಪಮುಕ್ತಗೊಳಿಸಿದೆ ಎಂದು timesofindia.com ವರದಿ ಮಾಡಿದೆ.

ಬಂಧನದಲ್ಲಿದ್ದ ಬಹುತೇಕ 20 ರಿಂದ 30 ವಯಸ್ಸಿನ ಆದಿವಾಸಿ ಯುವಕರು ಮಾವೋವಾದಿ ಉಗ್ರರಿಗೆ ನೆರವು ನೀಡಿದ್ದನ್ನು ಸಾಬೀತುಪಡಿಸಲು ಪೂರಕವಾದ ಯಾವುದೇ ಪುರಾವೆ ಇಲ್ಲ ಅಥವಾ ದಾಖಲಿಸಿದ ಹೇಳಿಕೆಗಳು ಕೂಡಾ ಆರೋಪ ಸಾಬೀತುಪಡಿಸಲು ಸಾಲದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸುಕ್ಮಾ ಜಿಲ್ಲೆಯ ದಟ್ಟ ಅರಣ್ಯವಿದ್ದ ಆರು ಗ್ರಾಮಗಳಿಂದ, ನಕ್ಸಲರಿಗೆ ನೆರವು ನೀಡಿದ ಆರೋಪದಲ್ಲಿ ಈ ಯುವಕರನ್ನು ಬಂಧಿಸಲಾಗಿತ್ತು.

ಬಂಧನದ ಸಂದರ್ಭದಲ್ಲಿ ಆರೋಪಿಗಳಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದನ್ನು ಅಥವಾ ಘಟನೆ ನಡೆದ ಸ್ಥಳದಲ್ಲಿ ಇದ್ದರು ಎನ್ನುವುದನ್ನು ನಿರೂಪಿಸಲು ಅಭಿಯೋಜಕರು ವಿಫಲರಾಗಿರುವ ಹಿನ್ನೆಲೆಯಲ್ಲಿ ಎಲ್ಲರನ್ನು ದೋಷಮುಕ್ತಗೊಳಿಸಲಾಗಿದೆ ಎಂದು ಎನ್‍ಐಎ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ದೀಪಕ್ ಕುಮಾರ್ ದೇಶ್ಲಹರೆ ಹೇಳಿದ್ದಾರೆ.

ಈ ತೀರ್ಪಿನ ವಿರುದ್ಧ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಬೇಕೇ ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.

2017ರ ಏಪ್ರಿಲ್ 24ರಂದು ಬಸ್ತರ್ ಪ್ರದೇಶದಲ್ಲಿ ಮಾವೋವಾದಿ ಉಗ್ರರು ದಾಳಿ ನಡೆಸಿ 26 ಮಂದಿ ಸಿಆರ್‌ಪಿಎಫ್‌ ಯೋಧರನ್ನು ಹತ್ಯೆ ಮಾಡಿದ್ದರು. ಇವರಿಗೆ ನೆರವಾದ ಆರೋಪದಲ್ಲಿ ಬುರ್ಕಪಾಲ್, ಗೊಂಡಪಲ್ಲಿ, ಚಿಂತಗುಫಾ, ತಲ್ಮೆಟ್ಲಾ, ಕೊರೈಗುಂಡಂ ಮತ್ತು ತೊಂಗುಡಾ ಗ್ರಾಮದ 121 ಮಂದಿಯ ವಿರುದ್ಧ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News