ಕಾಳು ಮೆಣಸು ಕಳ್ಳತನ ಆರೋಪ: ಇಬ್ಬರಿಗೆ ಜಾಮೀನು ಮಂಜೂರು ಮಾಡಿದ ಪುತ್ತೂರು ನ್ಯಾಯಾಲಯ

Update: 2022-07-18 15:33 GMT

ಸುಳ್ಯ: ಕಾಳುಮೆಣಸು ಕಳ್ಳತನ ಮಾಡಿದ ಆರೋಪದಡಿಯಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳಲ್ಲಿ ಇಬ್ಬರಿಗೆ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. 

ಕೊಳ್ತಿಗೆಯ ತೋಟದಲ್ಲಿರುವ ಗೋದಾಮಿನಲ್ಲಿ ಶೇಖರಿಸಿದ್ದ ಸುಮಾರು 1 ಲಕ್ಷದ 18 ಸಾವಿರ ಬೆಲೆಯ 10 ಗೋಣಿ ಚೀಲ ಕಾಳುಮೆಣಸಿನ ಚೀಲಗಳನ್ನು ಗೋದಾಮಿನ ಬೀಗ ಒಡೆದು ಕಳವು ಮಾಡಿದ್ದಾರೆ ಎಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಮಂಜು, ಅಬ್ದುಲ್ ಬಾಶೀತ್, ಪ್ರವೀಣ್ ಹಾಗೂ ಪವನ್ ಎಂಬವರ ವಿರುದ್ದ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ಸೀನಿಯರ್ ಸಿವಿಲ್ ಜಡ್ಜ್ ಪುತ್ತೂರು ನ್ಯಾಯಾಲಯಕ್ಕೆ ಹಾಜರು ಪಡಿಸಿಲಾಗಿತ್ತು. ನಂತರ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

ಜುಲೈ 14 ರಂದು ಆರೋಪಿಗಳ ಪೈಕಿ ಒಂದನೇ ಆರೋಪಿ ಮಂಜು, ಮತ್ತು 4 ನೇ ಆರೋಪಿ ಬಾಸಿತ್ ರ ಪರವಾಗಿ ವಕೀಲರ ವಾದವನ್ನು ಆಲಿಸಿದ ನ್ಯಾಯಾಧೀಶರು ಆರೋಪಿಗಳಿಗೆ ತಲಾ ಎರಡು ಜಾಮೀನುಗಳನ್ನು ನೀಡುವ ಷರತ್ತಿನ ಮೇರೆಗೆ ಜಾಮೀನಿನಲ್ಲಿ ಬಿಡುಗಡೆಗೊಳಿಸಿ ಆದೇಶ ನೀಡಿದ್ದಾರೆ. 

ಆರೋಪಿಗಳ ಪರವಾಗಿ ಸುಳ್ಯದ ನ್ಯಾಯವಾದಿಗಳಾದ ಎಂ. ವೆಂಕಪ್ಪ ಗೌಡ, ಚಂಪಾ ವಿ. ಗೌಡ, ರಾಜೇಶ್ ಬಿ.ಜಿ., ಶ್ಯಾಮ್ ಪ್ರಸಾದ್ ಹಾಗೂ ಮನೋಜ್‍ರವರು ವಕಾಲತ್ತು ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News