ಗುರುಪುರ ಬಂಟರ ಮಾತೃ ಸಂಘದ ವಾರ್ಷಿಕ ಸಮಾವೇಶ
ಮಂಗಳೂರು, ಜು.18: ಗುರುಪುರ ಬಂಟರ ಮಾತೃ ಸಂಘವು ಬಂಟ ಸಮಾಜದ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುತ್ತಿದೆ. ಉನ್ನತ ವ್ಯಾಸಂಗದ ಬಳಿಕ ಈ ಮಕ್ಕಳು ಕುಟುಂಬ, ಬಂಟ ಸಮಾಜ ಮತ್ತು ಸಂಘದ ಆಶೋತ್ತರಗಳೊಂದಿಗೆ ಸ್ಪಂದಿಸಬೇಕು. ಅಭಿವೃದ್ಧಿಯ ಪಥದತ್ತ ಸಾಗುತ್ತಿರುವ ಇಂತಹ ಸಂಘಗಳ ವ್ಯವಸ್ಥೆ ಹಾಳು ಮಾಡುವ ಮಂದಿಯ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಗುರುಪುರ ಶ್ರೀವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ರವಿವಾರ ವಾಮಂಜೂರಿನ ಚರ್ಚ್ ಸಭಾಭವನದಲ್ಲಿ ನಡೆದ ಗುರುಪುರ ಬಂಟರ ಮಾತೃ ಸಂಘ (ರಿ)ದ ವಾರ್ಷಿಕ ಮಹಾಸಭೆ, ವಾರ್ಷಿಕ ಸಮಾವೇಶ, ವಿದ್ಯಾರ್ಥಿ ವೇತನ, ವಿದ್ಯಾರ್ಥಿ ಪುರಸ್ಕಾರ, ಸನ್ಮಾನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಬಂಟರ ಯಾನೆ ನಾಡವರ ಮಾತೃ ಸಂಘ (ರಿ) ಮಂಗಳೂರು ಇದರ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂಟರ್‌ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ (ರಿ) ಮಂಗಳೂರು ಇದರ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿದರು.
ಈ ಸಂದರ್ಭ ಸಂಘವು ಬಂಟ ಸಮಾಜದಲ್ಲಿ ಸಾಧನೆಗೈದಿರುವ ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ (ಶಿಕ್ಷಣ ಕ್ಷೇತ್ರ), ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ (ಸಾಮಾಜಿಕ ಕ್ಷೇತ್ರ), ಮೂಡುಬಿದಿರೆಯ ಡಾ.ವಿನಯ ಮೋಹನ್ ಆಳ್ವ (ವೈದ್ಯಕೀಯ ಕ್ಷೇತ್ರ), ಹೋಟೆಲ್ ಉದ್ಯಮಿ ಮುಂಬೈ ಭಾಸ್ಕರ್ ಶೆಟ್ಟಿ ಶೆಡ್ಡೆ ಹೊಸಲಕ್ಕೆ (ಉದ್ಯಮ ಕ್ಷೇತ್ರ), ಕೆಎಂಎಫ್ ಅಧ್ಯಕ್ಷ ಸುಚರಿತ ಶೆಟ್ಟಿ (ಕೃಷಿ, ಹೈನುಗಾರಿಕೆ, ರಾಜಕೀಯ ಕ್ಷೇತ್ರ) ಇವರನ್ನು ಸನ್ಮಾನಿಸಲಾಯಿತು.
ಸಂಘದ ವ್ಯಾಪ್ತಿಯ 16 ಗ್ರಾಮಗಳಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳು ಹಾಗೂ ಬಂಟ ಸಮಾಜದ ಎಲ್ಲ ಶಾಲಾ ಮಕ್ಕಳಿಗೆ ಸುಮಾರು 7 ಲಕ್ಷ ರೂ ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದ ನೃತ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡ 9 ತಂಡಗಳಲ್ಲಿ ಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿದ ವಾಮಂಜೂರು, ಮೂಡುಶೆಡ್ಡೆ, ಕುಳವೂರು ವಲಯ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಸಂಘದ ವ್ಯಾಪ್ತಿಯ ಎಲ್ಲ ಗ್ರಾಮಗಳ ಬಂಟರ ಮನೆಗಳಲ್ಲಿ ಶ್ರೀ ನಿತ್ಯಾನಂದ ಗುರುಗಳ ಭಾವಚಿತ್ರವಿಟ್ಟು ಆರಾಧನೆ ನಡೆಯಬೇಕೆಂಬ ಸಂಘದ ಆಶಯದಂತೆ ಶ್ರೀ ನಿತ್ಯಾನಂದ ಗುರುಗಳ ಭಾವಚಿತ್ರ ಅನಾವರಣಗೊಳಿಸಲಾಯಿತು. ಸಂಘವು ತನ್ನ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸಲು ಆಯೋಜಿಸಲಾದ ಅದೃಷ್ಟಚೀಟಿಯ ಫಲಿತಾಂಶ ಪ್ರಕಟಿಸಲಾಯಿತು.
ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಶೆಡ್ಡೆ ಹೊಸಲಕ್ಕೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಂಟರ ಸಂಘಗಳ ಮುಖಂಡರಾದ ಜಯಕರ ಶೆಟ್ಟಿ ಇಂದ್ರಾಳಿ, ಮಂಜುನಾಥ ಭಂಡಾರಿ ಶೆಡ್ಡೆ, ರಾಜೇಂದ್ರ ಶೆಟ್ಟಿ ವೇಣುಗೋಪಾಲ ಎಲ್. ಶೆಟ್ಟಿ, ರವಿರಾಜ ಶೆಟ್ಟಿ ನಿಟ್ಟೆಗುತ್ತು, ಚಂದ್ರಹಾಸ ಶೆಟ್ಟಿ ರಂಗೋಲಿ, ಮಧುಕರ ಶೆಟ್ಟಿ, ಪ್ರವೀಣ್ ಶೆಟ್ಟಿ, ಕುಶಾಲ್ ಸಿ. ಭಂಡಾರಿ, ರವೀಂದ್ರ ವೈ. ಶೆಟ್ಟಿ, ಉಲ್ಲಾಸ್ ಶೆಟ್ಟಿ, ಗೋಕುಲದಾಸ್ ಶೆಟ್ಟಿ, ಹರೀಶ್ ಶೆಟ್ಟಿ ಉಪ್ಪುಗೂಡು, ಜಯರಾಮ ಶೆಟ್ಟಿ ವಿಜೇತ ಕೈಕಂಬ, ಹರಿಕೇಶ್ ಶೆಟ್ಟಿ ನಡಿಗುತ್ತು, ಚಂದ್ರಹಾಸ ಶೆಟ್ಟಿ ನಾರಳ, ಸತ್ಯವಾನ್ ಆಳ್ವ ಮೂಡುಶೆಡ್ಡೆ, ಸದಾನಂದ ಚೌಟ, ನಾಗರಾಜ ರೈ ತಿಮಿರಿಗುತ್ತು, ಇಂದಿರಾಕ್ಷಿ ಪಿ. ಶೆಟ್ಟಿ, ಗೀತಾ ಎಸ್. ಆಳ್ವ ಮೊಗರುಗುತ್ತು, ದೀಪಕ್ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ ಮೂಡುಶೆಡ್ಡೆ ಉಪಸ್ಥಿತರಿದ್ದರು.
ಸುದರ್ಶನ ಶೆಟ್ಟಿ ಪೆರ್ಮಂಕಿ ಸ್ವಾಗತಿಸಿದರು. ಕಿರಣ್ ಪಕ್ಕಳ, ಕವಿತಾ ಪಕ್ಕಳ, ರಾಜ್‌ಕುಮಾರ್ ಶೆಟ್ಟಿ ಲಿಂಗಮಾರುಗುತ್ತು ಕಾರ್ಯಕ್ರಮ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಪ್ರವೀಣ್ ಆಳ್ವ ಗುಂಡ್ಯ ವಂದಿಸಿದರು.