×
Ad

ಆಟಿ ಶ್ರೀಮಂತಿಕೆಯ ತಿಂಗಳೇ ಹೊರತು ಕಷ್ಟದಲ್ಲ: ಡಾ.ಗಣೇಶ್ ಅಮೀನ್

Update: 2022-07-19 19:05 IST

ಉಡುಪಿ : ಆಟಿ ಅಂದರೆ ಮನುಷ್ಯರ ಬದುಕಿಗೆ ಜೀವಂತಿಕೆ ನೀಡುವುದಾಗಿದೆ. ಆಟಿ ಎಂಬುದು ಶ್ರೀಮಂತಿಕೆಯ ತಿಂಗಳೇ ಹೊರತು ಕಷ್ಟದ ತಿಂಗಳು ಅಲ್ಲ. ಹಸಿವು, ಬಡತನ ಇದ್ದಲ್ಲಿ ಆರೋಗ್ಯ ಇರುತ್ತದೆ. ಹಿಂದಿನವರಿಗೆ ಈ ಎರಡೂ ಇದ್ದುದರಿಂದ ಅವರೆಲ್ಲ ಪ್ರಕೃತಿಯಲ್ಲಿ ಸಿಗುವ ಆಹಾರವನ್ನು ತಿಂದು ನೂರಾರು ವರ್ಷಗಳ ಕಾಲ ಆರೋಗ್ಯವಂತರಾಗಿ ಬದುಕಿದರು ಎಂದು ಮಂಗಳೂರು ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ಡಾ.ಗಣೇಶ್ ಅಮೀನ್ ಸಂಕಮಾರ್ ಹೇಳಿದ್ದಾರೆ.

ಉಡುಪಿ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ, ಬಂಟರ ಯಾನೆ ನಾಡವರ ಮಾತೃ ಸಂಘ ಉಡುಪಿ ತಾಲೂಕು ಸಮಿತಿ, ಉಡುಪಿ ಬಂಟರ ಸಂಘದ ಸಹಯೋಗದಲ್ಲಿ ಮಂಗಳವಾರ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ  ಸಭಾಭವನದಲ್ಲಿ ಆಯೋಜಿಸಲಾದ ಆಟಿಡೊಂಜಿ ದಿನ ಹಾಗೂ ಮಹಿಳೆಯರ ಕೂಟದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತಿದ್ದರು.

ಆಟಿ ತಿಂಗಳಿನ ನೆನಪು ಮಾಡುವುದು ಇಂದಿನ ಅತಿ ಅಗತ್ಯವಾಗಿದೆ. ವರ್ಷದ ಈ ಒಂದು ತಿಂಗಳಲ್ಲಿ ಪ್ರಕೃತಿಯಲ್ಲಿ ಸಿಗುವ ಗಿಡಮೂಲಿಕೆಯ ಸತ್ವ ಇರುವ ಆಹಾರವನ್ನು ತಿಂದು ವರ್ಷವೀಡಿ ಆರೋಗ್ಯವನ್ನು ಕಾಪಾಡುವುದು ಆಟಿಯ ವಿಶೇಷವಾಗಿದೆ. ಹಾಗಾಗಿ ಇದು ಮಾಂತ್ರಿಕ ತಿಂಗಳು ಆಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಸೈಂಟ್ ಸಿಸಿಲಿ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕಿ, ಲೇಖಕಿ ವಸಂತಿ ಅಂಬಲಪಾಡಿ ಮಾತನಾಡಿ, ತುಳುನಾಡಿಗೆ ೨೦೦೦ವರ್ಷಗಳ ಇತಿಹಾಸ ಇದೆ. ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಗಳ ಪ್ರಾಚೀನ ಗ್ರಂಥಗಳಲ್ಲಿ ತುಳುನಾಡಿನ ಉಲ್ಲೇಖವಿದೆ.  ಹಿಂದಿನವರು ಆಚರಿಸಿಕೊಂಡು ಬಂದ ತುಳುನಾಡಿನ ಆಟಿ ತಿಂಗಳ ಸಂಸ್ಕೃತಿ ಯನ್ನು ನಾವು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸಿ ಮುಂದು ವರೆಸಿಕೊಂಡು ಹೋಗಬೇಕಾಗಿದೆ ಎಂದರು.

ಅಧ್ಯಕ್ಷತೆಯನ್ನು ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ವಹಿಸಿದ್ದರು. ಉಡುಪಿ ತಾಲೂಕು ಬಂಟರ ಸಂಘದ ಸಂಚಾಲಕ ಬಿ.ಜಯರಾಜ್ ಹೆಗ್ಡೆ, ಜಿಲ್ಲಾ ಮಹಿಳಾ ಮಂಡಳಗಳ ಒಕ್ಕೂಟದ ಅಧ್ಯಕ್ಷೆ ಸರಳಾ ಕಾಂಚನ್, ಉಡುಪಿ ಸಾಪಲ್ಯ ಟ್ರಸ್ಟ್‌ನ ಪ್ರವರ್ತಕಿ ನಿರುಪಮ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ಆಟೋಟ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಆಟಿ ತಿಂಗಳ ವಿವಿಧ ಖಾದ್ಯಗಳನ್ನು ತಯಾರಿಸಿ ತಂದ ವಿವಿಧ ಒಕ್ಕೂಟದ ಪ್ರಮುಖರನ್ನು ಗೌರವಿಸಲಾಯಿತು. ಒಕ್ಕೂಟದ ತಾಲೂಕು ಅಧ್ಯಕ್ಷೆ ಶೀಲಾ ಕೆ.ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ಗೀತಾ ರವಿ ಬಹುಮಾನಿತರ ಪಟ್ಟಿಯನ್ನು ವಾಚಿಸಿದರು. ತಾಲೂಕು ಪ್ರಧಾನ ಕಾರ್ಯದರ್ಶಿ ಯಶೋಧಾ ಜೆ.ಶೆಟ್ಟಿ ವಂದಿಸಿದರು. ಜ್ಯೋತಿ ಎಂ.ರಾವ್ ಕಾರ್ಯಕ್ರಮ ನಿರೂಪಿಸಿದರು.

ವೈವಿಧ್ಯಮಯ ಅಡಿಗೆಗಳ ರಸದೌತಣ!

ಒಕ್ಕೂಟದ ಮಹಿಳೆಯರೇ ಮನೆಯಲ್ಲಿ ತಯಾರಿಸಿ ತಂದ ತುಳುನಾಡಿನ ಆಟಿ ತಿಂಗಳ ವೈವಿಧ್ಯಮಯ ಅಡಿಗೆ ಹಾಗೂ ವಿಶಿಷ್ಟ ಖಾದ್ಯಗಳ ರಸದೌತಣವನ್ನು ಕಾರ್ಯಕ್ರಮದಲ್ಲಿ ನೆರೆದವರು ಸವಿದರು.

ಉಪ್ಪಿನಕಾಯಿ, ಮೊಸರು, ತಿಮರೆ ಚಟ್ನಿ, ಪೆಲಕಾಯಿ ಗಟ್ಟಿ, ಮೂಡೆ, ಪಾಯಸ, ಪೆಲಕಾಯಿದ ಮುಳ್ಕ, ಅರಸಿನ ಎಲೆ ಗಟ್ಟಿ, ಕುಡುತ ಸಾರ್, ಸೌತೆ ಹುಳಿ, ತೇವು ಚಟ್ನಿ, ಅನ್ನ, ಪತ್ರಡೆ, ಉಪ್ಪಡ್ ಪಚ್ಚೀರ್, ಅಲಸಂಡೆ ಪಲ್ಯ, ಕುಕ್ಕು, ಪೆಜಕಾಯಿ ಚಟ್ನಿ, ಮೆಂತೆದ ಗಂಜಿ, ತೇಟ್ಲದ ಗಸಿಯ ರುಚಿ ಉಣ ಬಡಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News