ನಾಡಿನ ಸೌಹಾರ್ದತೆ ಮೇಲೆ ಬಹುಮುಖಿಯಾಗಿ ದಾಳಿ: ಕೆ.ಎಸ್.ಲಕ್ಷ್ಮೀ
ಕುಂದಾಪುರ: ಬೆಲೆ ಏರಿಕೆ ಮೂಲಕ ಜನರ ಮೇಲೆ ನಡೆಸುತ್ತಿರುವ ದೌರ್ಜನ್ಯಗಳ ಬಗ್ಗೆ ಜನತೆಯ ದಿಕ್ಕು ತಪ್ಪಿಸಲು ನಾಡಿನ ಸೌಹಾರ್ದತೆಯ ಮೇಲೆ ಬಹುಮುಖಿಯಾಗಿ ದಾಳಿ ನಡೆಸಲಾಗುತ್ತಿದೆ. ಅಭಿವೃದ್ಧಿಯ ಅಜೆಂಡಾದೊಂದಿಗೆ ಅಧಿಕಾರಕ್ಕೆ ಬಂದವರು ಕೋಮು ಅಜೆಂಡಾವನ್ನು ಮುನ್ನೆಲೆಗೆ ತರುತ್ತಿರುವುದು ಸಂವಿಧಾನ ವಿರೋಧಿಯಾಗಿದೆ. ಇಂಥವರಿಗೆ ನಾಡಿನ ಮಹಿಳೆಯರು ತಕ್ಕ ಪಾಠ ಕಲಿಸ ಬೇಕಾಗಿದೆ ಎಂದು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ಎಸ್.ಲಕ್ಷ್ಮೀ ಹೇಳಿದ್ದಾರೆ.
ಕುಂದಾಪುರ ಹಂಚು ಕಾರ್ಮಿಕ ಭವನದಲ್ಲಿ ರವಿವಾರ ನಡೆದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಉಡುಪಿ ಜಿಲ್ಲಾ ಪ್ರಥಮ ಜಿಲ್ಲಾ ಸಮ್ಮೇಳನ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ವಾರ್ಷಿಕ ಎರಡು ಕೋಟಿ ಉದ್ಯೋಗ ನೀಡುವುದಾಗಿ ಘೋಷಿಸಿದ್ದ ಕೇಂದ್ರ- ರಾಜ್ಯ ಬಿಜೆಪಿ ಸರಕಾರಗಳ ಅವಧಿಯಲ್ಲಿ ೨೦೧೭ರಿಂದ ೨೦೨೨ರ ಮಧ್ಯೆ ೨ ಕೋಟಿ ಮಹಿಳೆಯರ ಉದ್ಯೋಗಗಳು ಕಾಣೆಯಾಗಿವೆ. ಶಿಕ್ಷಣದ ಹಣದುಬ್ಬರ ಶೇ.೯.೧, ಆರೋಗ್ಯದ ಹಣದುಬ್ಬರ ಶೇ.೯.೭೫, ಎಲ್.ಪಿ.ಜಿ. ಗ್ಯಾಸ್ ದರ ಶೇ.೧೪೪ ಹೆಚ್ಚಳವಾಗಿದೆ. ಇದು ದೇಶದ ಬಡವರ ಮೇಲೆ, ಮಹಿಳೆಯರ ಮೇಲೆ ಮಾರಣಾಂತಿಕ ಪ್ರಭಾವ ಬೀರಿದೆ ಎಂದರು.
ಸರಕಾರ ಕಾರ್ಪೋರೇಟ್ ಮತ್ತು ಕೋಮುವಾದ ಪರವಾದ ನೀತಿಗಳನ್ನು ಜಾರಿ ಮೂಡುವ ಮೂಲಕ ಮಹಿಳೆಯರ ಮೇಲಿನ ಸಾಮಾಜಿಕ ಮತ್ತು ಆರ್ಥಿಕ ದೌರ್ಜನ್ಯಗಳನ್ನು ಹೆಚ್ಚು ಮಾಡುತ್ತಿದೆ. ಹೀಗೆ ಸರಕಾರ ಮಹಿಳೆಯರಿಗೆ ಮಹಾನ್ ದ್ರೋಹ ಎಸಗಿದೆ ಎಂದು ಅವರು ಆರೋಪಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪ್ರಗತಿಪರ ಚಿಂತಕಿ ಡಾ.ರೇಖಾ ಬನ್ನಾಡಿ ಮಾತನಾಡಿ, ಮಹಿಳೆಯರ ಅಸ್ತಿತ್ವದ ಮೇಲೆ ನಿರಂತರ ದಾಳಿಗಳು ಹೆಚ್ಚುತ್ತಿದ್ದು, ಜೀವ ಪರವಾದ ಜಾತ್ಯಾತೀತ ಮಹಿಳಾ ಚಳುವಳಿಯನ್ನು ಕಟ್ಟಿ ಬೆಳೆಸುವ ಮೂಲಕ ಪ್ರಸಕ್ತ ಸವಾಲುಗಳನ್ನು ಎದುರಿಸಬೇಕು. ಇದು ಇಂದಿನ ಅಗತ್ಯತೆ ಎಂದು ಹೇಳಿದರು.
ಸಿಐಟಿಯು ರಾಜ್ಯ ಮುಖಂಡರಾದ ಕೆ.ಶಂಕರ್, ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಜಯಶ್ರೀ ಮಾತನಾಡಿದರು. ಅಧ್ಯಕ್ಷತೆಯನ್ನು ಆರತಿ ವಹಿಸಿದ್ದರು. ಧ್ವಜಾರೋಹಣವನ್ನು ಹಿರಿಯ ಸಂಗಾತಿ ಲಲಿತಾ ನೆರವೇರಿಸಿದರು. ಸರೋಜಾ ಸ್ವಾಗತಿಸಿದರು. ನಾಗರತ್ನ ನಾಡಾ ಕಾರ್ಯಕ್ರಮ ನಿರೂಪಿಸಿದರು. ಶೀಲಾವತಿ ವಂದಿಸಿದರು.
ಕೊನೆಯಲ್ಲಿ ಉಡುಪಿ ಪ್ರಥಮ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡ ಲಾಯಿತು. ಅಧ್ಯಕ್ಷರಾಗಿ ಸರೋಜಾ, ಕಾರ್ಯದರ್ಶಿಯಾಗಿ ಶೀಲಾವತಿ ಪಡುಕೋಣೆ, ಖಜಾಂಚಿಯಾಗಿ ಲಲಿತಾ ಅವರನ್ನು ಒಳಗೊಂಡ ೨೭ ಸದಸ್ಯರ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಯಿತು.