ಭೀಮಾ ಕೋರೆಗಾಂವ್ ಪ್ರಕರಣ: ವರವರ ರಾವ್ ಜಾಮೀನು ವಿಸ್ತರಣೆ

Update: 2022-07-19 17:39 GMT

ಹೊಸದಿಲ್ಲಿ, ಜು. 19:  ವೈದ್ಯಕೀಯ ನೆಲೆಯಲ್ಲಿ ಶಾಶ್ವತ ಜಾಮೀನು ನೀಡುವಂತೆ ಕೋರಿ ಸಾಮಾಜಿಕ ಹೋರಾಟಗಾರ ವರವರ ರಾವ್ ಅವರು ಸಲ್ಲಿಸಿದ ಮನವಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಮಂಗಳವಾರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ನೊಟೀಸು ಜಾರಿ ಮಾಡಿದೆ. 

ನ್ಯಾಯಮೂರ್ತಿಗಳಾದ ಯು.ಯು. ಲಲಿತ್, ರವೀಂದ್ರ ಭಟ್ ಹಾಗೂ ಸುಧಾಂಶು ಧುಲಿಯಾ ನೇತೃತ್ವದ ಪೀಠ ರಾವ್ ಅವರ ಜಾಮೀನನ್ನು ಮುಂದಿನ ಆದೇಶದ ವರೆಗೆ ವಿಸ್ತರಿಸಿದೆ. 

ಅರ್ಜಿಯನ್ನು ಆಗಸ್ಟ್ 10ರಂದು ಅಂತಿಮವಾಗಿ ಆಲಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.  
‘‘ಪ್ರಕರಣದ ವಿವಾದಾತ್ಮಕ ಸ್ವರೂಪ ಪರಿಗಣಿಸಿ ಮುಂದಿನ ವಿಚಾರಣೆಯಲ್ಲಿ ವಿಲೇವಾರಿ ಮಾಡಲಾಗುವುದು. ನಾವು ಈ ಹಿಂದೆ  ನೋಟಿಸು ನೀಡದ ಕಾರಣ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ನೋಟಿಸು ಜಾರಿ ಮಾಡಿದ್ದೇವೆ. 2022 ಆಗಸ್ಟ್ 10ರಂದು ಹಿಂದಿರುಗಿಸಲು ತಿಳಿಸಿದ್ದೇವೆ’’ ಎಂದು ಅದು ಹೇಳಿತು. 

ಪುಣೆ ಸಮೀಪದ ಭೀಮಾ ಕೋರೆಗಾಂವ್ ಗ್ರಾಮದಲ್ಲಿ 2018ರಲ್ಲಿ ಜಾತಿ ಹಿಂಸಾಚಾರ ಹುಟ್ಟು ಹಾಕಲು ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿ 16 ಸಾಮಾಜಿಕ ಹೋರಾಟಗಾರರ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇವರಲ್ಲಿ 83ರ ಹರೆಯದ ರಾವ್ ಕೂಡ ಸೇರಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News