ವಿದ್ಯಾರ್ಥಿನಿಯರ ಒಳ ಉಡುಪು ಕಳಚುವಂತೆ ಬಲವಂತ: ಕಾಲೇಜು ಸಿಬ್ಬಂದಿ ಸೇರಿ ಐವರ ಬಂಧನ

Update: 2022-07-19 18:05 GMT

ಕೊಲ್ಲಂ: ಕೇರಳದ ಕೊಲ್ಲಂನಲ್ಲಿ ನಡೆದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗೆ (ನೀಟ್) ಹಾಜರಾಗುವ ಮೊದಲು ಒಳಉಡುಪುಗಳನ್ನು ತೆಗೆಯುವಂತೆ ವಿದ್ಯಾರ್ಥಿಗಳನ್ನು ಒತ್ತಾಯಿಸಿದ ಆರೋಪದಲ್ಲಿ ಇಬ್ಬರು ಕಾಲೇಜು ಸಿಬ್ಬಂದಿ ಸೇರಿದಂತೆ ಐವರನ್ನು ಮಂಗಳವಾರ ಬಂಧಿಸಲಾಗಿದೆ.

ಜುಲೈ 17 ರಂದು ಕೊಲ್ಲಂನ ಮಾರ್ ಥೋಮಾ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಜುಲೈ 18 ರಂದು ವಿದ್ಯಾರ್ಥಿನಿಯ ಪೋಷಕರೊಬ್ಬರು ದೂರು ದಾಖಲಿಸಿದ್ದಾರೆ. ಬಂಧಿತರಲ್ಲಿ ನೀಟ್ ಪರೀಕ್ಷಾ ಕೇಂದ್ರದಲ್ಲಿ ಹಾಜರಿದ್ದ ಇಬ್ಬರು ಕಾಲೇಜು ಸಿಬ್ಬಂದಿ ಮತ್ತು ಕೇಂದ್ರದ ಭದ್ರತೆಯನ್ನು ವಹಿಸಿಕೊಂಡಿದ್ದ ಏಜೆನ್ಸಿಯ ಮೂವರು ಸೇರಿದ್ದಾರೆ.

ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಡ್ರೆಸ್ ಕೋಡ್‌ನಲ್ಲಿ ಒಳಉಡುಪುಗಳನ್ನು ತೆಗೆದುಹಾಕಲು ಸೂಚಿಸದಿದ್ದರೂ ಸಹ ತನ್ನ ಮಗಳು ಸೇರಿದಂತೆ ವಿದ್ಯಾರ್ಥಿನಿಯರಿಗೆ "ಮಾನಸಿಕ ಹಿಂಸೆ" ನೀಡಿದ್ದಾರೆ ಎಂದು ಆರೋಪಿಸಿ ಪೋಷಕರು ದೂರು ದಾಖಲಿಸಿದ್ದಾರೆ.

ಪರೀಕ್ಷೆಗೆ ಹಾಜರಾಗುವ ಮೊದಲು ಕನಿಷ್ಠ 90 ಪ್ರತಿಶತದಷ್ಟು ವಿದ್ಯಾರ್ಥಿನಿಯರಲ್ಲಿ ತಮ್ಮ ಒಳಉಡುಪುಗಳನ್ನು ತೆಗೆದುಹಾಕುವಂತೆ ಒತ್ತಾಯಪಡಿಸಲಾಗಿದೆ ಮತ್ತು ಅವುಗಳನ್ನು ಸ್ಟೋರ್ ರೂಮ್‌ನಲ್ಲಿ ಎಸೆಯಲು ನಿರ್ದೇಶಿಲಾಗಿದೆ ಎಂದು ವಿದ್ಯಾರ್ಥಿನಿಯೊಬ್ಬಳ ತಂದೆ ಹೇಳಿದ್ದಾರೆ. ಅವರು ನೀಡಿದ ದೂರಿನ ಅಧಾರದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354   ಮತ್ತು 509 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.

ಈ ನಡುವೆ, ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಘಟನೆಯಲ್ಲಿ ಭಾಗಿಯಾಗಿರುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News