ಹೈಕೋರ್ಟ್‌ ನ್ಯಾಯಮೂರ್ತಿಯ ವಿರುದ್ಧ ಟ್ವೀಟ್:‌ ʼಸವುಕ್ಕು ಶಂಕರ್‌ʼ ವಿರುದ್ಧ ಪ್ರಕರಣ ದಾಖಲಿಸಲು ಸೂಚನೆ

Update: 2022-07-19 18:10 GMT
Photo: Twitter

ಚೆನ್ನೈ: ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ನ್ಯಾಯಮೂರ್ತಿ ಜಿ ಆರ್ ಸ್ವಾಮಿನಾಥನ್ ಅವರು ತಮ್ಮ ವಿರುದ್ಧ ಟ್ವೀಟ್ ಮಾಡಿದ್ದಕ್ಕಾಗಿ   ಸಾಮಾಜಿಕ ಮಾಧ್ಯಮದ ಪ್ರಭಾವಿ ‘ಸವುಕ್ಕು ಶಂಕರ್ʼ ವಿರುದ್ಧ ಸ್ವಯಂ ಪ್ರೇರಿತ ನಿಂದನೆ ಪ್ರಕರಣವನ್ನು ದಾಖಲಿಸುವಂತೆ ಸೂಚಿಸಿದ್ದಾರೆ.

ನ್ಯಾಯಮೂರ್ತಿ ಸ್ವಾಮಿನಾಥನ್ ಅವರು ತಮ್ಮ ಆದೇಶದಲ್ಲಿ, ನ್ಯಾಯಾಲಯದ ತೀರ್ಪುಗಳನ್ನು ಟೀಕಿಸುವಲ್ಲಿ Savukku.com ವೆಬ್‌ಸೈಟ್ ಅನ್ನು ನಡೆಸುತ್ತಿರುವ ಮತ್ತು ತಮಿಳು ಯೂಟ್ಯೂಬ್ ಚಾನೆಲ್‌ಗಳಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುವ, ಹಲವಾರು ಸಮಸ್ಯೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ನೀಡುವ ಶಂಕರ್ ಅವರು "ಲಕ್ಷ್ಮಣ ರೇಖೆ" ಮೀರಿದ್ದಾರೆ ಎಂದು  ಹೇಳಿದ್ದಾರೆ.

ಶಂಕರ್ ಅವರು ನ್ಯಾಯಾಂಗ ಸೇರಿದಂತೆ ವ್ಯಕ್ತಿಗಳು ಮತ್ತು ಸಂಸ್ಥೆಗಳ ಮೇಲೆ ಟೀಕೆ ಮಾಡಲು ಸ್ವತಂತ್ರರಾಗಿದ್ದಾರೆ. ಕಟುವಾದ ಟೀಕೆಗಳನ್ನು ಸಹ ಅನುಮತಿಸಬಹುದಾದರೂ, ಮಾನಹಾನಿಕರ ನಿಂದನೆಯನ್ನು ಅನುಮತಿಸಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಸ್ವಾಮಿನಾಥನ್ ಅವರು ಹೇಳಿದರು.

“ಅವರು (ಶಂಕರ್) ಕಳೆದ ಹಲವು ತಿಂಗಳುಗಳಿಂದ ನನ್ನ ಮೇಲೆ ದೃಷ್ಟಿ ನೆಟ್ಟಿದ್ದಾರೆ. ನನ್ನ ಹಲವು ತೀರ್ಪುಗಳ ಬಗ್ಗೆ ಅವರು ಅತ್ಯಂತ ಚಾರಿತ್ರ್ಯಹೀನ ಭಾಷೆಯಲ್ಲಿ ಕಾಮೆಂಟ್ ಮಾಡಿದ್ದರು. ಅವರ ದಾಳಿಗಳು ಹೆಚ್ಚಾಗಿ ವೈಯಕ್ತಿಕವಾಗಿವೆ. ನಾನು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವಲ್ಲಿ ಬಲವಾದ ನಂಬಿಕೆಯುಳ್ಳವನಾಗಿರುವುದರಿಂದ, ನಾನು ಅವರಿಗೆ ಗಮನ ಕೊಡಲಿಲ್ಲ. ಆದಾಗ್ಯೂ, ಅವರ ಇತ್ತೀಚಿನ ಟ್ವೀಟ್ ಲಕ್ಷ್ಮಣ ರೇಖೆಯನ್ನು ದಾಟಿದೆ ಎಂದು ತೋರುತ್ತದೆ,” ಎಂದು ನ್ಯಾಯಾಧೀಶರು ಆದೇಶದಲ್ಲಿ ಬರೆದಿದ್ದಾರೆ.

ಜುಲೈ 18 ರಂದು ಪೋಸ್ಟ್ ಮಾಡಿದ ಇತ್ತೀಚಿನ ಟ್ವೀಟ್ನಲ್ಲಿ, ನ್ಯಾಯಮೂರ್ತಿ ಸ್ವಾಮಿನಾಥನ್ ಅವರು, ಶಂಕರ್ ಅವರು "ಮದುರೈನ ಅಳಗರ್ ಕೋಯಿಲ್‌ನಲ್ಲಿ ಬೆಳಿಗ್ಗೆ 6 ಗಂಟೆಗೆ ಇನ್ನೊಬ್ಬ ಯೂಟ್ಯೂಬರ್ ಮಾರಿಧಾಸ್‌ಗೆ ಸಂಬಂಧಿಸಿದ ಪ್ರಕರಣವನ್ನು ವಿಚಾರಣೆ ಮಾಡುವಾಗ ನಾನು ಯಾರನ್ನು ಭೇಟಿಯಾದೆ" ಎಂದು ಕೇಳುವ ಮೂಲಕ ತಮ್ಮ ಪ್ರಾಮಣಿಕತೆಯತೆಯನ್ನು ಪ್ರಶ್ನಿಸಿದ್ದಾರೆ ಎಂದು ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ.

“ಈ ಮೂಲಕ,   ಶಂಕರ್ ಅವರು ಮಾರಿಧಾಸ್ ಪ್ರಕರಣದ ತೀರ್ಪು ನಾನು ಭೇಟಿಯಾದ ವ್ಯಕ್ತಿಯಿಂದ ಪ್ರಭಾವಿತವಾಗಿದೆ ಎಂದು ಸೂಚಿಸುತ್ತಿದ್ದಾರೆ. ಇದು ಸ್ಪಷ್ಟವಾಗಿ ನ್ಯಾಯಾಂಗವನ್ನು ನಿಂದಿಸುತ್ತಿದೆ. ಮೇಲ್ನೋಟಕ್ಕೆ   ಶಂಕರ್ ಅವರು ಕ್ರಿಮಿನಲ್ ಅವಹೇಳನ ಮಾಡಿದ್ದಾರೆ,'' ಎಂದು ನ್ಯಾಯಾಧೀಶರು ಹೇಳಿದ್ದಾರೆ.

“ಸವುಕ್ಕು ಶಂಕರ್ ಈ ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗಬೇಕು, ಅನುಸರಣೆ ಅಧಿಕಾರಿಗಳು ಸೂಚಿಸಿದ ದಿನಾಂಕದಂದು ತಮ್ಮ ವಕೀಲರ ಮೂಲಕ ಹಾಜರಾಗಬಹುದು”ಎಂದು ನ್ಯಾಯಾಧೀಶರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News