ಬೆಳ್ಳಾರೆ: ಯುವಕನಿಗೆ ತಂಡದಿಂದ ಮಾರಣಾಂತಿಕ ಹಲ್ಲೆ: ನಾಲ್ವರು ಆರೋಪಿಗಳು ಪೊಲೀಸ್ ವಶಕ್ಕೆ
ಬೆಳ್ಳಾರೆ, ಜು.20: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ತಂಡವೊಂದು ಯುವಕನೋರ್ವನಿಗೆ ಮಾರಣಾಂತಿಕವಾಗಿ ಹಲ್ಲೆಗೈರುವ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಕಳಂಜ ಎಂಬಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ಕಳೆಂಜ ನಿವಾಸಿ ಮಸೂದ್(21) ಹಲ್ಲೆಗೊಳಗಾದ ಯುವಕ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಸೂದ್ ಮತ್ತು ಸ್ಥಳೀಯ ಯುವಕನೋರ್ವನ ಮಧ್ಯೆ ಮಂಗಳವಾರ ಸಂಜೆ ಗಲಾಟೆ ನಡೆದಿದೆಯೆನ್ನಲಾಗಿದೆ. ಇದೇ ವಿಚಾರವಾಗಿ ಬಳಿಕ ರಾಜಿ ಪಂಚಾಯಿತಿಕೆಗೆಂದು ಮಸೂದ್ ನನ್ನು ಕರೆಸಿದ ಸುಧೀರ್, ಅಭಿಲಾಷ್, ರಂಜಿತ್, ಇನ್ನೋರ್ವ ರಂಜಿತ್ ಎಂಬವರನ್ನೊಳಗೊಂಡ ಎಂಟು ಮಂದಿಯ ತಂಡ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ ಪೊಲೀಸರು ತಿಳಿಸಿದ್ದಾರೆ.
ತಲೆಗೆ ತೀವ್ರತರದ ಗಾಯಗೊಂಡಿರುವ ಮಸೂದ್ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಬೆಳ್ಳಾರೆ ಠಾಣೆಗೆ ದೂರು ನೀಡಲಾಗಿದ್ದು, ಬೆಳ್ಳಾರೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.